
ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಅವರಿಗೆ ಸೇರಿದ ಯಶವಂತಪುರದ ಅಪಾರ್ಟ್‍ಮೆಂಟನಲ್ಲಿ ಸಿಕ್ಕಿದ್ದ 4.37 ಕೋಟಿ ಹಣ ತಮಗೆ ಸೇರಿದ್ದೆಂದು ಉದ್ಯಮಿ ಜಯಶಿವ ಸಕ್ಸೇನಾ ಎಂಬುವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಜಯಶಿವ ಸಕ್ಸೇನಾ ಅವರನ್ನು ಸೋಮವಾರ ಬಂಧಿಸಿದ್ದಾರೆ. ಇದರೊಂದಿಗೆ ಕಪಿಲ ಮೋಹನ್ ಹಾಗೂ ಉದ್ಯಮಿ ಜಯಶಿವ ಸಕ್ಸೇನಾ ನಡುವೆ ನಂಟು ಇರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಬಗ್ಗೆ ತನಿಖೆ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳು ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ
ಯಶವಂತಪುರದಲ್ಲಿರುವ ಕಪಿಲ್ ಮೋಹನ ಅಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ
ಈ ವೇಳೆ 4.37ಕೋಟಿ ಹಣದ ಜೊತೆಗೆ ಅಪಾರ ಚಿನ್ನಾಭರಣ, ವಜ್ರ ಹಾಗೂ ವಿವಿಧ ಆಸ್ತಿ ದಾಖಲೆ ಪತ್ರಗಳು ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ವಹಿಸಿದ್ದರು. ಅಲ್ಲದೇ ಅಕ್ರಮ ಆಸ್ತಿ ಆರೋಪ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಕೂಡ ತನಿಖೆ ಕೈಗೊಂಡಿದ್ದರು. ಅಪಾರ ಹಣ ಎಲ್ಲಿಂದ ಬಂತು ಎಂದು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿರುವ ನಡುವೆ ಉದ್ಯಮಿ ಜಯಶಿವ ಸಕ್ಸೇನಾ ಪ್ರವೇಶವಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
Advertisement