
ಬೆಂಗಳೂರು: ನಾವು ಪೊಲೀಸರು. ನಿಮ್ಮ ಆಭರಣ ಬಿಚ್ಚಿ ಬ್ಯಾಗ್‍ನಲ್ಲಿ ಹಾಕಿಕೊಂಡು ಹೋಗಿ, ಕಳ್ಳರ ಬಗ್ಗೆ ಎಚ್ಚರವಿರಲಿ ಎಂದು ಯಾರಾದರೂ ನಿಮಗೆ ತಿಳಿಸಿದರೆ ಅವರ ಬಗ್ಗೆಯೇ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಬಂದಿದೆ.ಇದಕ್ಕೆ ಕಾರಣ, ಪೊಲೀಸರ ವೇಷದಲ್ಲಿ ಹೀಗೆ ಎಚ್ಚರಿಕೆ ನೀಡುವವರೇ ಆಭರಣಚೋರರು! ಕಳ್ಳರಿಂದ ರಕ್ಷಿಸಿಕೊಳ್ಳಿ ಎಂದು ಮಹಿಳೆಯರನ್ನು ಎಚ್ಚರಿಸುವ ನೆಪದಲ್ಲಿ ಆಭರಣ ದೋಚುತ್ತಿದ್ದ ಇರಾನಿ ತಂಡದ ಏಳು ಮಂದಿ ಈಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇವರ ಬಂಧನದಿಂದಾಗಿ ಜುಲೈನಿಂದ ಇರಾನಿ ಗ್ಯಾಂಗ್‍ನ ಸುಮಾರು 14 ಮಂದಿಯನ್ನು ಬಂಧಿಸಿದಂತಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ(ಅಪರಾಧ) ಚಂದ್ರಶೇಖರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇರಾನಿ ಕಾಸಿಂ ಅಲಿ ಜಾಫರ್ ಆಲಿ (35), ಬಿಲಾಲ್‍ಖಾನ್ ಬಿಲಾಲ್ (32), ಸೈಯ್ಯದ್ ಸಿದ್ದಿಕ್ (32), ಸೈಯದ್ ಸಾಧಿಕ್ (35),
ಅಸಾದುಲ್ಲಾ ಆಲಿ (25), ಅಬ್ಬು ಆಲಿ (29), ಶಬ್ಬೀರ್ ಆಸೀಫ್ ಸೈಯ್ಯದ್ (28) ಬಂಧಿತರು. ಆರೋಪಿಗಳ ಬಂಧನದಿಂದ 21 ಪ್ರಕರಣಗಳು ಬೆಳಕಿಗೆ ಬಂದಿದೆ.ಆರೋಪಿಗಳಿಂದ 21.60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪೊಲೀಸರ ಸೋಗಿನಲ್ಲಿ ವೃದ್ಧೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಸರಗಳವು ಮಾಡುತ್ತಿದ್ದರು.
ಮಫ್ತಿ ಪೊಲೀಸ್ ನೆಪ: ಆರೋಪಿ ಗಳು ರಾಜ್ಯದ ಪ್ರಮುಖ ನಗರಗಳಲ್ಲಿ ದ್ವಿಚಕ್ರ ವಾಹನ ಬಳಸಿ ಮನೆ ಮುಂದೆ ಹಾಗೂ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆ/ವೃದ್ಧೆಯರನ್ನು ಗುರುತಿಸಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಅಲ್ಲದೆ ತಾವು ಮಫ್ತಿ ಪೊಲೀಸರು ಎಂದು ಹೇಳಿ ಆಭರಣ ದೋಚುತ್ತಿದ್ದರು.
ಆಭರಣಕ್ಕಾಗಿ ಮುಂದಿನ ರಸ್ತೆಯಲ್ಲಿ ಒಂಟಿ ಮಹಿಳೆ ಕೊಲೆಯಾಗಿದೆ. ನೀವು ತೊಟ್ಟಿರುವ ಆಭರಣ ತೆಗೆದು ನಿಮ್ಮ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ.ಇಲ್ಲವಾದರೆ ದಂಡ ವಿಧಿಸುತ್ತೇವೆ ಎನ್ನುತ್ತಿದ್ದರು. ಅದಕ್ಕೆ ಮರುಳಾಗುತ್ತಿದ್ದ ವೃದ್ಧೆಯರು ತಾವು ಧರಿಸಿದ್ದ ಆಭರಣ ತೆಗೆಯುವಾಗ ಅವರ ಗಮನ ಬೇರೆಡೆ ಸೆಳೆದು ಆಭರಣದ ಕವರ್ ದೋಚಿ,ಅದೇ ರೀತಿಯ ಬೇರೆ ಕವರ್ ಕೊಟ್ಟು ಮನೆಗೆ ಹೋಗಿ ಎಂದು ಹೇಳಿ ಪರಾರಿಯಾಗುತ್ತಿದ್ದರು.ಮನೆಗೆ ಹೋದ ವೃದ್ಧೆಯರು ನಂತರ ತಾವು ಮೋಸ ಹೋಗಿರುವುದು ತಿಳಿದು ದೂರು ದಾಖಲಿಸುತ್ತಿದ್ದರು.
ಆರೋಪಿ ಕಾಸಿಂ ಜಾಫರ್ ಅಲಿ ಮಧ್ಯಪ್ರದೇಶದ ತನ್ನ ಸಹಚರರ ಜತೆ ಸೇರಿ ಬೈಕ್‍ನಲ್ಲಿ ಬಂದು ಈ ಕೃತ್ಯವೆಸಗುತ್ತಿದ್ದ. ಆರೋಪಿಗಳ ಪತ್ತೆಯಿಂದ ರಾಜ್ಯದಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳು ಪತ್ತೆಯಾಗಿವೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಚಂದ್ರಶೇಖರ್ ವಿವರಿಸಿದರು.
Advertisement