
ಬೆಂಗಳೂರು: ಇದು ಸಂಘರ್ಷದ ಕಾಲವಾಗಿದ್ದು, ನಾವು ಮಾಡುವ ಯಾವುದೇ ಕೆಲಸದಲ್ಲೂ ಸಂಘರ್ಷ ಎದುರಿಸುತ್ತಿರುವ ಅನುಭವವಾಗುತ್ತಿದೆ ಎಂದು ಬಯೋಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಮಜುಂದಾರ್ ಷಾ ಅಭಿಪ್ರಾಯಪಟ್ಟರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಗುರುವಾರ ನಡೆದ ಹರಿ ಪರಮೇಶ್ವರ್ ರಚನೆಯ `ದಿ ಪಿಲ್ಲರ್ ಇನ್ವಿಸಿಬಲ್' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ``ನಾಗರಿಕರ ಬದ್ಧತೆ ಮತ್ತು ಸಕ್ರಿಯತೆ ಹೇಗಿರಬೇಕೆಂಬುದರಲ್ಲಿ ಸಂಘರ್ಷ ಏರ್ಪಡುತ್ತಿದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಸಮನೆ ಓಡುತ್ತಿರುವ ಜನ ಜೀವನದಿಂದಾಗಿ ಸಂಘರ್ಷ ಏರ್ಪಟ್ಟಿರಬಹುದೆ ಎಂಬ ಸಂದೇಹ ಬರುತ್ತದೆ. ಸಮಾಜ ನಿರ್ಮಾಣದಲ್ಲಿ ಸಂವೇದನಶೀಲತೆಯನ್ನು ತರುವುದೇ ಸವಾಲಾಗುತ್ತಿದೆ ಎಂದರು. ``ಈ ಸಮಾಜವನ್ನು ನಾವೇ ಬದಲಾಯಿಸಲು ಸಾಧ್ಯವೇ ಎಂಬ ಪ್ರಶ್ನೆ ಎದುರಾದರೂ, ನಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾಗುವ ಕೆಲಸಗಳನ್ನಾದರೂ ಮಾಡಬೇಕು. ಉತ್ತಮ ಸಮಾಜದ ಕಲ್ಪನೆಗೆ ಬೆಂಗಳೂರು ನಗರ ಉದಾಹರಣೆಯಾಗಿ ಕಾಣಿಸುತ್ತಿದೆ. ಅದರ ಕುರುಹುಗಳನ್ನು ನಾನಿಲ್ಲಿ ಕಾಣುತ್ತಿದ್ದೇನೆ. ಈ ನಗರದ ಬೆಳವಣಿಗೆಗೆ ನನ್ನದೊಂದು ಕೊಡುಗೆ ಇರಲೇಬೇಕೆಂಬ ಆಸೆ ಚಿಗುರೊಡೆಯುತ್ತದೆ. ಹರಿ ರಚಿಸಿರುವ, `ರೂಮರ್ ಬುಕ್ಸ್ ಇಂಡಿಯಾ' ಪ್ರಕಾಶನದ `ದಿ ಪಿಲ್ಲರ್ ಇನ್ವಿಸಿಬಲ್' ಕೃತಿಯು ಇಂಥ ಸಾಧ್ಯತೆಗಳನ್ನು ಹುಟ್ಟುಹಾಕಿದೆ ಎಂದು ಶ್ಲಾಘಿಸಿದರು.
ಉದ್ಯಮಿ ಟಿ.ವಿ. ಮೋಹನ್‍ದಾಸ್ ಪೈ, ನಿವೃತ್ತ ಐಎಎಸ್ ಅಧಿಕಾರಿ ಎ. ರವೀಂದ್ರ, ನಾಯರ್, ರೇವತಿ ಅಶೋಕ್, ಕೃತಿಯ ಕರ್ತೃ ಹರಿ ಪರಮೇಶ್ವರ್ ಉಪಸ್ಥಿತರಿದ್ದರು.
Advertisement