
ಬೆಂಗಳೂರು: ರೈಲು ಸಂಚಾರಕ್ಕೆ ಪ್ರಯಾಣಿಕರು ಟಿಕೆಟ್ ಪಡೆಯಲು ಕ್ಯೂನಲ್ಲಿ ಗಂಟೆಗಟ್ಟಲೆ ಕಾಯಬೇಕು. ಅದರಲ್ಲೂ ಸಿಟಿ ರೈಲ್ವೆ ನಿಲ್ದಾಣದಲ್ಲಿ ಕ್ಯೂ ಬಾಲದಂತಿರುತ್ತದೆ. ಹಾಗಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಪ್ರತಿನಿತ್ಯ ಸಾಮಾನ್ಯ ದೃಶ್ಯ. ಆದರೆ, ಇನ್ನು ಮುಂದೆ ಟಿಕೆಟ್ ಪಡೆಯಲು ಹೀಗೆ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಪ್ರಯಾಣಿಕರ ಅನುಕೂಲಕ್ಕೆಂದೇ ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ನಗರದ
ಸಿಟಿ ರೈಲ್ವೆ ನಿಲ್ದಾಣದಲ್ಲಿ `ಸ್ವಯಂ ಚಾಲಿತ ಯಂತ್ರ'ಗಳನ್ನು ಅಳವಡಿಸಿದ್ದಾರೆ. ಈ ಯಂತ್ರದ ಮೂಲಕ `ಸ್ಮಾರ್ಟ್ ಕಾರ್ಡ್' ಬಳಸಿ ಕಾಯ್ದಿರಿಸದ ಟಿಕೆಟ್‍ಗಳನ್ನು ಪಡೆಯಬಹುದು.
ಇಂತಹ ಹತ್ತು ಯಂತ್ರಗಳನ್ನು ಸಿಟಿ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದು, ಮಂಡಲ ರೈಲ್ವೆ ವ್ಯವಸ್ಥಾಪಕ ಸಂಜೀವ್ ಅಗರ್‍ವಾಲ್ ಗುರುವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರೈಲ್ವೆ ಪ್ರಯಾಣಿಕರ ಸಂಖ್ಯೆ ದಿನನಿತ್ಯ ಹೆಚ್ಚುತ್ತಿದೆ. ಟಿಕೆಟ್
ಪಡೆಯಲು ಪ್ರಯಾಣಿಕರು ನಿತ್ಯ ಪರದಾಡುತ್ತಾರೆ. ಆ ಸಮಸ್ಯೆ ಬಗೆಹರಿಸಲು ಈ ಯಂತ್ರಗಳನ್ನು ಅಳವಡಿಸಲಾಗಿದೆ ಎಂದರು.
ಕೌಂಟರ್ 13ರಲ್ಲಿ ಕಾರ್ಡ್: ಇದು ಎಟಿಎಂ ಮಾದರಿಯ ಕಾರ್ಡ್. ಅದನ್ನು ಸಿಟಿ ರೈಲ್ವೆ ನಿಲ್ದಾಣದ 13ನೇ ಕೌಂಟರ್‍ನಲ್ಲಿ ಪಡೆಯಬೇಕು. ಒಂದು ಸ್ಮಾರ್ಟ್ ಕಾರ್ಡ್‍ಗೆ ಕನಿಷ್ಠ ಮೊತ್ತ ರೂ.100. ಅದರಲ್ಲಿ ರೂ50ನ್ನು ಭದ್ರತಾ ಠೇವಣಿ ಹಾಗೂ ರೂ. 52 ಅನ್ನು ಟಿಕೆಟ್ ಖರೀದಿಗೆ ಬಳಸಬಹುದು (ಚಾರ್ಜ್ ಮೊತ್ತ < 50ಕ್ಕೆ ಶೇ.5ರಷ್ಟು ಬೋನಸ್ ಡಲಾಗುತ್ತದೆ. ಅದಕ್ಕೆ ಸಿಗುವ ರೂ. 2 ಸೇರಿ ರೂ. 52 ಗುತ್ತದೆ). ಹೀಗೆ ರೂ, 5 ಸಾವಿರ ಮೊತ್ತದವರೆಗೂ ಸ್ಮಾರ್ಟ್ ಕಾರ್ಡ್ ಪಡೆಯಬಹುದು. ಕಾರ್ಡ್ ಖರೀದಿಸಿದ ನಂತರ 1 ವರ್ಷ ಅದು ಚಲಾವಣೆಯಲ್ಲಿರುತ್ತದೆ. ಸಾಮಾನ್ಯ, ಎಕ್ಸ್‍ಪ್ರೆಸ್, ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಸಲು ಹಾಗೂ ಪ್ಲಾಟ್ ಫಾರಂ ಟಿಕೆಟ್ ಸಹ ಪಡೆಯಬಹುದು.
ಕಾರ್ಡ್ ಪಡೆದು ವರ್ಷ ಮುಗಿಯುವ ಮುನ್ನ ಅದನ್ನು ಹಿಂದಿರುಗಿಸುವ ಸಂದರ್ಭ ಬಂದರೆ ವಾಪಸ್ ನೀಡಬಹುದು. ಅವರ ಸಂಪೂರ್ಣ ಹಣವನ್ನೂ ಮರಳಿಸಲಾಗುತ್ತದೆ. ಒಂದು ವೇಳೆ ಕಳೆದು ಹೋದರೆ ಅದಕ್ಕೆ ಎಫ್ಐಆರ್ ದಾಖಲಿಸಿ ಅದರ ಪ್ರತಿ ನೀಡಿದರೆ ಪರಿಶೀಲಿಸಿ ಹಣ ವಿತರಿಸಲಾಗುವುದು.
ಬಳಕೆ ಹೇಗೆ?: ಎಟಿಎಂ ಯಂತ್ರದ ಮಾದರಿಯಲ್ಲಿ ಇದು ಕೆಲಸ ಮಾಡುತ್ತದೆ. ತಾವು ಖರೀದಿಸುವ ಕಾರ್ಡ್ ಅನ್ನು ಈ ಯಂತ್ರದ ಮೇಲಿರಿಸಿದರೆ ಸ್ಕ್ರೀನ್ ಮೇಲೆ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಆಯ್ಕೆಗಳು ಬರುತ್ತವೆ. ನಂತರ ಎಲ್ಲ ನಿಲ್ದಾಣಗಳನ್ನು ತೋರಿಸುತ್ತದೆ. ತಮಗೆ ಬೇಕಾದ ನಿಲ್ದಾಣದ ಮೇಲೆ ಒತ್ತಿದರೆ, ಯಾವ ರೈಲು ಎಂದು ಕೇಳುತ್ತದೆ. ಹೀಗೆ ಮೂರ್ನಾಲ್ಕು ಹಂತದಲ್ಲಿ ಯಂತ್ರದ ಗುಂಡಿ ಒತ್ತಿದರೆ ಟಿಕೆಟ್ ಸಿಗುತ್ತದೆ. ಸುಲಭವಾಗಿ ಟಿಕೆಟ್ ಪಡೆಯಲು ನೆರವಾಗುವ ನಿಟ್ಟಿನಲ್ಲಿ ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ಆರಂಭಿಸಿರುವ `ಸ್ವಯಂ ಚಾಲಿತ ಟಿಕೆಟ್ ನೀಡುವ ಯಂತ್ರ'ದಲ್ಲಿ ಟಿಕೆಟ್ ಪಡೆಯಲು ಮುಂದಾಗಿರುವ ಪ್ರಯಾಣಿಕರು. ಟಿಕೆಟ್ ಮಾರಾಟ ಯಂತ್ರ ಈ ಯಂತ್ರದಲ್ಲಿ 2 ವಿಧಗಳಿದ್ದು ಎಟಿವಿಎಂ (ಆಟೋಮೆಟೆಡ್ ಟಿಕೆಟ್ ವೆಂಡಿಂಗ್ ಮಷಿನ್) ಹಾಗೂ ಸಿಒಟಿವಿಎಂ (ಕ್ಯಾಷ್/ಸ್ಮಾರ್ಟ್ ಕಾರ್ಡ್ ಟಿಕೆಟ್ ವೆಂಡಿಂಗ್ ಮಷಿನ್). ಎಟಿವಿಎಂ ಯಂತ್ರದಲ್ಲಿ ಸ್ಮಾರ್ಟ್ ಕಾರ್ಡ್ ಹಾಕಿ ಟಿಕೆಟ್ ಪಡೆಯಬಹುದು.
ಸಿಒಟಿವಿಎಂ ಯಂತ್ರದಲ್ಲಿ ಸ್ಮಾರ್ಟ್ ಕಾರ್ಡ್/ನಗದು/ಚಿಲ್ಲರೆ ಬಳಸಿ ಟಿಕೆಟ್ ಪಡೆಯಬಹುದು. ಪ್ರಾಥಮಿಕ ಹಂತವಾಗಿ ಸಿಟಿ ರೈಲ್ವೆ ನಿಲ್ದಾಣದಲ್ಲಿ 10 ಎಟಿವಿಎಂ ಯಂತ್ರಗಳನ್ನು ಅಳವಡಿಸಲಾಗಿದೆ. ಸಿಒಟಿವಿಎಂ ಯಂತ್ರವನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು. ಬೆಂಗಳೂರು ವಿಭಾಗಕ್ಕೆ 42 ಎಟಿವಿಎಂ ಹಾಗೂ 16 ಸಿಒಟಿವಿಎಂ
ಯಂತ್ರಗಳನ್ನು ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತುಮಕೂರು, ಮಂಡ್ಯ, ಕೆ.ಆರ್. ಪುರ, ಹೊರಮಾವು, ಹೊಸೂರು, ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲೂ ಅಳವಡಿಸಲಾಗುವುದು. ಅದಕ್ಕೆ ಬೇಕಿರುವ ಅಗತ್ಯ ಸಾಮಗ್ರಿಗಳು ಈಗಾಗಲೇ ತಲುಪಿವೆ.
ಚಾರ್ಜರ್ ಅಳವಡಿಕೆ ನಿಲ್ದಾಣದಲ್ಲಿ ಎಲ್‍ಇಡಿ ಮಾದರಿಯ 20 ಪಿನ್‍ವುಳ್ಳ ಚಾರ್ಜರ್ ಅಳವಡಿಸಲಾಗಿದ್ದು, ಅದರಿಂದ ಒಮ್ಮೆಗೆ 36 ಮೊಬೈಲ್‍ಗಳನ್ನು ಚಾರ್ಜ್ ಮಾಡಬಹುದು. ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಇದನ್ನು ಅಳವಡಿಸಲಾಗಿದೆ. ಯಂತ್ರದಿಂದ ಟಿಕೆಟ್ ಖರೀದಿಸಿ ದೇಶದ ಯಾವ ಊರಿಗಾದರೂ ಪ್ರಯಾಣಿಸಬಹುದು. ಆದರೆ, ವಾಪಸ್ ಬರುವ ಟಿಕೆಟ್ ಅನ್ನು ಮುಂಚಿತವಾಗಿ ಕೊಳ್ಳಲು ಸಾಧ್ಯವಿಲ್ಲ. ಒಂದೊಂದು ಎಟಿವಿಎಂ ಹಾಗೂ ಸಿಒಟಿವಿಎಂ ಯಂತ್ರಕ್ಕೂ ಕ್ರಮವಾಗಿ ರೂ. 1.5 ಮತ್ತು ರೂ. 4.7 ಲಕ್ಷ ವೆಚ್ಚ ತಗುಲುತ್ತದೆ.
Advertisement