
ಬೆಂಗಳೂರು: ತುಮಕೂರು ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಅದರ ಹಿಂದೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಪೊಲೀಸ್ ಕಾನ್ಸ್ ಟೇಬಲ್
ಮೃತಪಟ್ಟಿರುವ ಘಟನೆ ಅಡಕಮಾರನಹಳ್ಳಿ ಮೇಲು ರಸ್ತೆಯಲ್ಲಿ ಸಂಭವಿಸಿದೆ.
ಬಿನ್ನಮಂಗಲ ಸಮೀಪದ ಜನಪ್ರಿಯ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಕಾನ್‍ಸ್ಟೆಬಲ್ ಜನಾರ್ದನ (27)ಮೃತ ದುರ್ದೈವಿ.
ಸೋಮವಾರ ರಾತ್ರಿ ಕರ್ತವ್ಯ ಮುಗಿಸಿ ಬಿನ್ನಮಂಗಲದ ಮನೆಗೆ ಹೊಂಡಾ ಶೈನ್ ಬೈಕ್‍ನಲ್ಲಿ ಜನಾರ್ದನ ತೆರಳುತ್ತಿದ್ದರು. ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ವಿಆರ್‍ಎಲ್ ಲಾರಿ ಚಾಲಕ ಅಡಕಮಾರನಹಳ್ಳಿಯ ಮೇಲು ರಸ್ತೆಯ ಮಾಕಳಿ ಬಳಿ ಕುಡಿದ ಅಮಲಿನಲ್ಲಿ ದಿಢೀರ್ ಬ್ರೇಕ್ ಹಾಕಿ ಲಾರಿ ನಿಲ್ಲಿಸಿದ್ದಾನೆ.
ಹಿಂದೆಯೇ ತೆರಳುತ್ತಿದ್ದ ಜನಾರ್ದನ ಬ್ರೇಕ್ ಹಾಕಿದರೂ ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ದಾಬಸ್‍ಪೇಟೆ ಸಮೀಪದ ನಿಡುವಂದ ಗ್ರಾಮದ ಜನಾರ್ದನ್ ಅವರು 8 ತಿಂಗಳ ಹಿಂದಷ್ಟೇ ಅನಿತಾ ಎಂಬುವರೊಂದಿಗೆ ವಿವಾಹವಾಗಿದ್ದರು. ಪತ್ನಿ ಈಗ ಮೂರು ತಿಂಗಳ ಗರ್ಭಿಣಿ. ಪತಿಯ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ 6 ವರ್ಷ ಸೇವೆ ಸಲ್ಲಿಸಿರುವ ಜನಾರ್ದನ 3 ತಿಂಗಳ ಹಿಂದಷ್ಟೇ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ವರ್ಗಾವಣೆಗೊಂಡಿದ್ದರು.
Advertisement