ಸ್ಟೋರಿ ವೀವರ್ ಲೋಕಾರ್ಪಣೆ

ಎಲ್ಲ ಮಗುವಿನ ಕೈಯಲ್ಲೂ ಒಂದು ಪುಸ್ತಕವಿರಬೇಕೆಂದು ಶ್ರಮಿಸುತ್ತಿರುವ ಪ್ರಥಮ ಬುಕ್ಸ್ ಪ್ರತಿ ಮಗುವಿಗೂ ಕಥೆ ಹೇಳುವ ವಿಶಿಷ್ಟ ಪ್ರಯತ್ನವೊಂದಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಲ್ಲ ಮಗುವಿನ ಕೈಯಲ್ಲೂ ಒಂದು ಪುಸ್ತಕವಿರಬೇಕೆಂದು ಶ್ರಮಿಸುತ್ತಿರುವ ಪ್ರಥಮ ಬುಕ್ಸ್ ಪ್ರತಿ ಮಗುವಿಗೂ ಕಥೆ ಹೇಳುವ ವಿಶಿಷ್ಟ ಪ್ರಯತ್ನವೊಂದಕ್ಕೆ ಮುಂದಾಗಿದೆ. ನೂರಾರು ಕಥೆಗಳಿಂದ, ಸಾವಿರಾರು ಚಿತ್ರಗಳನ್ನು ಒಳಗೊಂಡ `ಸ್ಟೋರಿ ವೀವರ್ 'ಎಂಬ ಬಹುಭಾಷಾ ಕಥೆಗಳನ್ನು ಒಳಗೊಂಡ ವೆಬ್ ತಾಣವೊಂದನ್ನು ಸಾಕ್ಷರತಾ ದಿನವಾದ ಸೆ. 8ರಂದು ಲೋಕಾರ್ಪಣೆ ಮಾಡುತ್ತಿದೆ.

`ಸ್ಟೋರಿ ವೀವರ್' ಪ್ರತಿ ಮಗುವಿಗೂ ತನ್ನದೇ ಭಾಷೆಯಲ್ಲಿ ಕಥೆಗಳು ಒದಗಿಸುವ ಮಹದಾಶೆಯಿಂದ ರೂಪ ಪಡೆದಿದೆ. ಕನ್ನಡ ಸೇರಿದಂತೆ ಭಾರತದ 14 ಹಾಗೂ 12 ಅಂತಾರಾಷ್ಟ್ರೀಯ ಭಾಷೆಗಳಲ್ಲಿರುವ ಕಥೆಗಳನ್ನು ಸ್ಟೋರಿ ವೀವರ್ ಒಳಗೊಳ್ಳಲಿದೆ. ಈಗಾಗಲೇ ಮುನ್ನೂರಕ್ಕೂ ಹೆಚ್ಚು ಕನ್ನಡ ಕಥೆಗಳನ್ನು ಅಪ್‍ಲೋಡ್ ಮಾಡಲಾಗಿದ್ದು, ಈ ಪೈಕಿ ಕೆಲವು ಇತರೆ ಭಾಷೆಗಳಿಗೆ ಅನುವಾದಗೊಂಡಿವೆ.

ಈ ಯೋಜನೆ ಕುರಿತು ವಿವರಗಳನ್ನು ನೀಡಿದ ಪ್ರಥಮ ಬುಕ್ಸ್ ನ ಅಧ್ಯಕ್ಷೆ ಸುಜಾನ್ ಸಿಂಗ್, ` ಪ್ರತಿ ಮಗುವಿಗೂ ಸಮಾನ ಗುಣಮಟ್ಟದ ಮಾತೃ ಭಾಷೆಯಲ್ಲಿ ಪುಸ್ತಕಗಳನ್ನು ಒದಗಿಸುವುದು ನಮ್ಮ ಗುರಿ' ಎಂದು ಹೇಳಿದರು. ಪ್ರಥಮ ಬುಕ್ಸ್ ಸಂಸ್ಥಾಪಕ ಅಧ್ಯಕ್ಷರಾದ ರೋಹಿಣಿ ನಿಲೇಕಣಿ, `ಈ ವಿಭಿನ್ನ ಪ್ರಯೋಗ ಸೃಜನಾತ್ಮಕ ಸಹಕಾರ ಮತ್ತು ಸಾಮುದಾಯಿಕ ಸೃಜನಶೀಲತೆಗಳನ್ನು ಹೊಂದಿದೆ. 20 ಕೋಟಿ ಮಕ್ಕಳು ಇದರ ಲಾಭ ಪಡೆದುಕೊಳ್ಳಲಿದ್ದಾರೆ' ಎಂದ ಹೇಳಿದರು.

ಇಲ್ಲಿ ಯಾರೂ ಬೇಕಾದರೂ ಕಥೆಯನ್ನು ಬರೆಯಬಹುದು. ಬೇರೆ ಭಾಷೆಯಲ್ಲಿರುವ ಕಥೆಯನ್ನು ತಮ್ಮ ಭಾಷೆಗೆ ಅನುವಾದಿಸಬಹುದು. ಪ್ರಸಿದ್ಧ ಕಲಾವಿದರು ಬರೆದ ಚಿತ್ರಗಳಿದ್ದು, ಅವುಗಳನ್ನು ಆಧರಿಸಿ ಕಥೆಗಳನ್ನು ಬರೆಯಬಹುದು. ಅಥವಾ ಚಿತ್ರಗಳನ್ನೂ ಈ ತಾಣಕ್ಕೆ ಅಪ್‍ಲೋಡ್
ಮಾಡಬಹುದು. ತಾಣದಲ್ಲಿ ಲಭ್ಯವಿರುವ ಕಥೆಯನ್ನು ಪಿಡಿಎಫ್ ಅಥವಾ ಇ-ಬುಕ್ ರೂಪದಲ್ಲಿ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಕಥೆಯನ್ನು ಬರೆದವರೊಂದಿಗೆ ಸಂವಾದ ನಡೆಸುವುದಕ್ಕೂ ಈ ತಾಣ ಅವಕಾಶ ಮಾಡಿಕೊಡುತ್ತದೆ.

ಉದ್ಘಾಟನೆ: ಸಾಕ್ಷರತಾ ದಿನದಂದು ಈ ವೆಬ್ ತಾಣ ಸಾರ್ವಜನಿಕರಿಗೆ ಅರ್ಪಣೆ ಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಪ್ರಥಮ ಬುಕ್ಸ್ ಕಚೇರಿಯಲ್ಲಿ `ಕಥೆಯೊಂದು ಹೆಣೆಯಿರಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲೇಖಕರಾದ ಅನುಷ್ಕ ರವಿಶಂಕರ್, ಸೌಮ್ಯ ರಾಜೇಂದ್ರನ್, ರೋಹಿಣಿ ನಿಲೇಕಣಿ, ರುಕ್ಮಿಣಿ ಬ್ಯಾನರ್ಜಿ ಮೊದಲಾದವರು ಹೊಸ ಕಥೆಗಳನ್ನು ಬರೆಯಲಿದ್ದಾರೆ. ಪ್ರಿಯಕುರಿಯನ್, ಸೌಮ್ಯ ಮೆನನ್ ಚಿತ್ರಕಾರರು
ಕಥೆಗಳಿಗೆ ಚಿತ್ರಗಳನ್ನು ಬರೆಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com