
ಬೆಂಗಳೂರು: ಮೈಸೂರು ಸಮೀಪದ ಇಲವಾಲ ಬಳಿ ಪೊಲೀಸರಿಂದಲೇ ಹವಾಲಾ ಹಣ ದರೋಡೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಸರಿಯಾಗಿ ನಡೆಸಿಲ್ಲವೆಂದು ಪತ್ರಕರ್ತ ನೀಡಿದ್ದ ದೂರನ್ನು ಕಾನೂನು ವ್ಯಾಪ್ತಿ ಮೀರಿ ಸಿಐಡಿ ಡಿವೈಎಸ್ಪಿ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದ ಹಲಸೂರು ಗೇಟ್ ಠಾಣೆ ಇನ್ಸ್‍ಪೆಕ್ಟರ್ ಹಾಗೂ ಸಬ್ ಇನ್ಸ್‍ಪೆಕ್ಟರ್‍ನ್ನು ಅಮಾನತುಗೊಳಿಸಲಾಗಿದೆ.
ಇನ್ಸ್‍ಪೆಕ್ಟರ್ ಆನಂದ್ ಕುಮಾರ್ ಹಾಗೂ ಎಸ್‍ಐ ವಜ್ರಮುನಿ ಅಮಾ ನತುಗೊಂಡಿರುವ ಅಧಿಕಾರಿಗಳು. ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿದ್ದ ಇಲವಾಲದ ರು.2.25 ಕೋಟಿ ಹವಾಲಾ ಹಣದ ದರೋಡೆ ಪ್ರಕರಣ ಸಂಬಂಧ ಹಲಸೂರು ಪೊಲೀಸರು ಹಿರಿಯ ಅಧಿಕಾರಿಗಳಿಗೆ ತಿಳಿಸದೆ ಆ.4 ರಂದು ಪತ್ರಕರ್ತನ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದ್ದರು.
ಇದನ್ನರಿತ ಸಿಐಡಿ ಅಧಿಕಾರಿಗಳು, ನಗರ ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ದೂರಿದರು. ಈ ಹಿನ್ನೆಲೆ ಯಲ್ಲಿ ಆಂತರಿಕ ತನಿಖೆಗೆ ಪ್ರತಾಪ ರೆಡ್ಡಿ ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ಅವರಿಗೆ ಸೂಚಿ-ಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಡಿಸಿಪಿ ತಮ್ಮ ಗಮನಕ್ಕೆ ತಾರದೆ ಎಫ್ಐಆರ್ ದಾಖಲಿಸಿರುವ ಬಗ್ಗೆ ವರದಿ ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಇನ್ಸ್‍ಪೆಕ್ಟರ್, ಎಸ್ಸೈಯನ್ನು ಪ್ರತಾಪ್ ರೆಡ್ಡಿ ಅಮಾನತು-ಗೊಳಿಸಿದ್ದಾರೆ. 2014ರ ಜನವರಿ 7 ರಂದು ಇಲವಾಲ ಬಳಿ ಮೈಸೂರಿನಿಂದ ಕೇರಳದ ಕಲ್ಲಿಕೋಟೆಗೆ ತೆರಳುತ್ತಿದ್ದ ಖಾಸಗಿ ಬಸ್ ಮೇಲೆ ಇಲವಾಲ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ರು.2.25 ಕೋಟಿ ಹವಾಲಾ ಹಣ ಪತ್ತೆಯಾಗಿತ್ತು. ಆದರೆ ಕೇವಲ ರು.20 ಲಕ್ಷ ಮಾತ್ರ ಸಿಕ್ಕಿದೆ ಎಂದು ಎಸ್ಸೈ, ಸಿಬ್ಬಂದಿ ಲೆಕ್ಕ ತೋರಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಕೇರಳದ ವ್ಯಾಪಾರಿಗಳು, ಗೃಹ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿ ಮಾಡಿ ತಮಗೆ ಸೇರಿದ ರು.2.25 ಕೋಟಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರು. ತನಿಖೆಯಲ್ಲಿ ಪೊಲೀಸರೇ ರು.2.25 ಕೋಟಿ ಜಪ್ತಿ ಮಾಡಿ ರು.20 ಲಕ್ಷದ ಲೆಕ್ಕ ನೀಡಿರುವುದು ಬಹಿರಂಗವಾಗಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸಿಐಡಿ ಡಿವೈಎಸ್ಪಿ ರಾಘವೇಂದ್ರ ಹೆಗಡೆ ಅವರ ತಂಡ ಜೂ.30 ನ್ಯಾಯಾಲ ಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಹಂತದಲ್ಲಿ ಪತ್ರಕರ್ತ ಕರುಣಾಕರ ಎಂಬಾತ, ಇಲವಾಲ ದರೋಡೆ ಪ್ರಕರಣದ ತನಿಖೆ ಸಮಪರ್ಕವಾಗಿ ನಡೆಯುತ್ತಿಲ್ಲವೆಂದು ಆರೋಪಿಸಿ ಡಿವೈಎಸ್ಪಿ ರಾಘವೇಂದ್ರ ಹೆಗಡೆ ಹಾಗೂ ಕೇರಳ ಮೂಲದ ವ್ಯಾಪಾರಿಗಳ ವಿರುದ್ಧ ದೂರು ದಾಖಲಿಸಿದ್ದರು.
ಗಮನಕ್ಕೆ ತಾರದೆ ಎಫ್ಐಆರ್ ಸಿಐಡಿ ಡಿವೈಎಸ್ಪಿ ವಿರುದ್ಧ ದೂರು ಬಂದಾಗ ಅದನ್ನು ಇನ್ಸ್‍ಪೆಕ್ಟರ್ ಹಾಗೂ ಡಿಸಿಪಿ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳಬೇಕು. ಆದರೆ, ಎಸ್ಸೈ ವಜ್ರಮುನಿಯವರು ಯಾರಿಗೂ ಹೇಳದೆ ಕೇಳದೆ ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ದಾಖಲಾದ ಬಳಿಕ ತಮ್ಮ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಜವಾಬ್ದಾರಿ ಹೊತ್ತಿರುವ ಠಾಣಾಧಿಕಾರಿ ಆನಂದಕುಮಾರ್ ಅವರು ಪರಿಶೀಲನೆ ನಡೆಸುವ ಗೋಜಿಗೆ ಹೋಗಿರಲಿಲ್ಲ.
ಈ ಮೂಲಕ ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ ಎಂದು ಡಿಸಿಪಿ ಸಂದೀಪ್ ಪಾಟೀಲ್ ವರದಿ ನೀಡಿದ್ದರು. ಅಪರಾಧ ಪ್ರಕರಣದ ತನಿಖೆ ಪೂರ್ಣಗೊಳಿಸಿದ ನಂತರ ಲೋಪಗಳಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು. ಅಧಿಕಾರಿಗಳ ವಿರುದ್ಧವೇ ಎಫ್ಐಆರ್ ದಾಖಲಿಸಲು ಅವಕಾಶವಿಲ್ಲ. ಈ ಬಗ್ಗೆ ತಿಳಿದೋ ತಿಳಿಯದೆಯೇ ಎಸ್ಸೈ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.
Advertisement