ಬಿಬಿಎಂಪಿ: ಬದಲಾದ ಪಾಲಿಕೆಯ ನಿತ್ಯದ ಚಿತ್ರಣ

ಮೇಯರ್ ಚುನಾವಪಣೆಯಿಂದಾಗಿ ಶುಕ್ರವಾರ ಬಿಬಿಎಂಪಿಯ ನಿತ್ಯದ ಚಿತ್ರಣ ಸಂಪೂರ್ಣ ಬದಲಾಗಿತ್ತು. ಬಿಬಿಎಂಪಿಯ ಎಲ್ಲ ದ್ವಾರಗಳಲ್ಲಿ ಪೊಲೀಸ್ ಸಿಬ್ಬಂದಿಯ ಸರ್ಪಗಾವಲು ಸೃಷ್ಟಿಯಾಗಿತ್ತು...
ಮೇಯರ್ ಚುನಾವಣೆ ವೇಳೆ ಪೌರ ಸಭಾಂಗಣದಲ್ಲಿ ತುಂಬಿರುವ ಶಾಸಕರು, ಸಚಿವರು ಹಾಗೂ ಕಾರ್ಪೊರೇಟರ್ ಗಳು (ಫೋಟೋ ಕೃಪೆ: ಕೆಪಿಎನ್)
ಮೇಯರ್ ಚುನಾವಣೆ ವೇಳೆ ಪೌರ ಸಭಾಂಗಣದಲ್ಲಿ ತುಂಬಿರುವ ಶಾಸಕರು, ಸಚಿವರು ಹಾಗೂ ಕಾರ್ಪೊರೇಟರ್ ಗಳು (ಫೋಟೋ ಕೃಪೆ: ಕೆಪಿಎನ್)

ಬೆಂಗಳೂರು: ಮೇಯರ್ ಚುನಾವಪಣೆಯಿಂದಾಗಿ ಶುಕ್ರವಾರ ಬಿಬಿಎಂಪಿಯ ನಿತ್ಯದ ಚಿತ್ರಣ ಸಂಪೂರ್ಣ ಬದಲಾಗಿತ್ತು. ಬಿಬಿಎಂಪಿಯ ಎಲ್ಲ ದ್ವಾರಗಳಲ್ಲಿ ಪೊಲೀಸ್ ಸಿಬ್ಬಂದಿಯ ಸರ್ಪಗಾವಲು ಸೃಷ್ಟಿಯಾಗಿತ್ತು.

ಹೀಗಾಗಿ ನಿತ್ಯ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ಕಚೇರಿ ಸಿಬ್ಬಂದಿಗೆ ಚುನಾವಣೆಯ ದಿನ ಸುಲಭವಾಗಿ ಸಂಚರಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯ ದಿನಗಳಲ್ಲಿ ಬಿಬಿಎಂಪಿಯ ಸುತ್ತಮುತ್ತ ಗುಂಪುಗಟ್ಟಿ ಮಾತನಾಡುವುದು ಹಾಗೂ ಒಳಗೆ ಹೋಗುವ ಹಾಗೂ ಹೊರಗೆ ಬರುವ ರೂಢಿ ಹೆಚ್ಚಿರುತ್ತದೆ. ಆದರೆ ಸಾರ್ವಜನಿಕರಿಗೆ ಚುನಾವಣೆ ದಿನ ಮಾತ್ರ ಒಳಗೆ ಪ್ರವೇಶವಿರಲಿಲ್ಲ. ಬಿಬಿಎಂಪಿ ಕಚೇರಿ ಬಳಿಯಿರುವ ದೇವಸ್ಥಾನಕ್ಕೆ ನಿತ್ಯ ಭಕ್ತರು ಬರುತ್ತಾರೆ. ಆದರೆ ನಿತ್ಯ ಕೆಲವು ಮಹಿಳೆಯರು ಹಾಗೂ ಉದ್ಯೋಗಿಗಳಿಗೆ ಚುನಾವಣೆಯ
ದಿನ ಅಚ್ಚರಿ ಕಾದಿತ್ತು. ಚುನಾವಣೆ ಬಗ್ಗೆ ತಿಳಿಯದ ಮಂದಿ ಒಳಗೆ ದೇವಸ್ಥಾನಕ್ಕೆ ಹೋಗಬೇಕು ಎಂದು ನಿರಾಸೆಯಾಗಿ ಹಿಂದಿರುಗುತ್ತಿದ್ದರು.

ಪಾಸ್ ಇಲ್ಲದೆ ಒಳಗೆ ಬಿಡುವುದಿಲ್ಲ ಎಂದು ಹೇಳುತ್ತಿದ್ದ ಸಿಬ್ಬಂದಿ ನಿರ್ದಾಕ್ಷಿಣ್ಯವಾಗಿ ಹೊರಗೆ ಕಳುಹಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಬಿಬಿಎಂಪಿ ಕಚೇರಿ ಸಿಬ್ಬಂದಿಯೂ ಚುನಾವಣೆಯಿಂದ ಕಿರಿಕಿರಿ ಅನುಭವಿಸಿದರು.

ಸದಸ್ಯರ ಆಗಮನ: ಬೆಳಗ್ಗೆ ಸುಮಾರು 9ಕ್ಕೆ ಸದಸ್ಯರ ಆಗಮನವಾಯಿತು. ಮೂರು ಪಕ್ಷಗಳ ಸದಸ್ಯರು ವಾಹನದಲ್ಲಿ ಬಂದು ಒಳಗೆ ಇಳಿದರು. ಎಲ್ಲ ಸದಸ್ಯರು ಮುಖಾಮುಖಿಯಾಗುತ್ತಿದ್ದಂತೆ ಪರಸ್ಪರ ನಗುಮುಖದಿಂದ ಕುಶಲೋಪರಿ ನಡೆಸಿದರು. ಗೇಟಿನ ಒಳಗೆಯೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಪೌರ ಸಭಾಂಗಣವನ್ನು ಅಲಂಕರಿಸಿದ್ದು, ಮೆಟ್ಟಿಲಿಗೆ ಕೆಂಪು ಹಾಸು ಹಾಸಲಾಗಿತ್ತು. ಬಿಳಿ ಬಣ್ಣದ ಅಂಗಿ, ಜುಬ್ಬಾ ಧರಿಸಿ ಬಂದ ಸದಸ್ಯರು ನಗುಮುಖದಿಂದ ಒಳಗೆ ಪ್ರವೇಶಿಸಿದರು. ಕೌನ್ಸಿಲ್ ಸಭೆಯಲ್ಲಿ ಸದಾ ಖಾಲಿಯಿರುತ್ತಿದ್ದ ಪೌರ ಸಭಾಂಗಣ ಚುನಾವಣೆ ದಿನ ತುಂಬಿತ್ತು. ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರ ಜೊತೆಗೆ ಕುಳಿತ ಕಾರ್ಪೊರೇಟರ್‍ಗಳು ಪರಸ್ಪರ ಶುಭಾಶಯ ಕೋರಿದರು.

ಸತೀಶ್ ರೆಡ್ಡಿ ಹೆಸರಲ್ಲಿ ಪ್ರಮಾಣ: ಬೊಮ್ಮನಹಳ್ಳಿಯ ಬಿಜೆಪಿ ಸದಸ್ಯ ರಾಮಮೋಹನ್ ರಾಜ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಶಾಸಕ ಸತೀಶ್ ರೆಡ್ಡಿ ಹೆಸರಿನಲ್ಲಿ!

ಎಲ್ಲರೂ ಭಗವಂತನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತಿದ್ದರೆ, ರಾಜ್ ಅವರು `ಶಾಸಕ ಸತೀಶ್ ರೆಡ್ಡಿ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ' ಎಂದು ಹೇಳಿ ಅಚ್ಚರಿ ಮೂಡಿಸಿದರು.

ಜ್ವರ ಇದ್ದರೂ ಪ್ರಮಾಣ: ಕೊಡಿಗೇಹಳ್ಳಿ ಸದಸ್ಯ ಕೆ.ಎಂ. ಚೇತನ್ ತೀವ್ರ ಜ್ವರದಿಂದ ಬಳಲುತ್ತಿದ್ದರೂ, ಬಂದು ಪ್ರಮಾಣ ವಚನ ಸ್ವೀಕರಿಸಿದರು. ಕೈಯಲ್ಲಿದ್ದ ಇಂಜೆಕ್ಷನ್ ಚುಚ್ಚುವ ಸಾಧನ ಅವರು ಆಗಷ್ಟೇ ಆಸ್ಪತ್ರೆಯಿಂದ ಬಂದಿದ್ದಾರೆ ಎಂಬುದಕ್ಕೆ ನಿದರ್ಶನವಾಗಿತ್ತು. ನಿತ್ರಾಣರಾಗಿದ್ದಂತೆ ಕಂಡುಬಂದರೂ ಎಲ್ಲರಂತೆ ಸಹಜವಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಂಗ್ಲಿಷ್‍ನಲ್ಲಿ ಪ್ರಮಾಣ ವಚನ: ಶಾಂತಲಾನಗರ ವಾರ್ಡ್ ಸದಸ್ಯ ದ್ವಾರಕಾನಾಥ್ ಹಾಗೂ ಪಾದರಾಯನಪುರ ವಾರ್ಡ್ ಸದಸ್ಯ ಇಮ್ರಾನ್ ಪಾಷಾ ಇಂಗ್ಲಿಷ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸಿಎಂ ಶುಭಾಶಯ: ಸಂಜೆ ತಮ್ಮನ್ನು ಭೇಟಿಯಾದ ನೂತನ ಮೇಯರ್ ಮಂಜುನಾಥ ರೆಡ್ಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ ಕೋರಿದರು. ಸಚಿವರಾದ ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಹಾಜರಿದ್ದರು.

ಟೈಮ್ ಟೇಬಲ್

  • ಬೆ. 9- ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸದಸ್ಯರ ಆಗಮನ, ನಾಮಪತ್ರ ಸಲ್ಲಿಕೆ
  • ಬೆ. 11.30- ಪೌರ ಸಭಾಂಗಣಕ್ಕೆ ಬಂದ ಸದಸ್ಯರು
  • ಮ. 12- ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ ಆರಂಭ
  • ಮ. 12.45-ಕಾಂಗ್ರೆಸ್‍ನ ಮಂಜುನಾಥರೆಡ್ಡಿ ಅವರಿಗೆ ಮತದಾನ, ಕೈಯೆತ್ತಲು ಸದಸ್ಯರಿಗೆ ಸೂಚನೆ
  • ಮ. 1.15-ಬಿಜೆಪಿಯ ಮಂಜುನಾಥ ರಾಜು ಅವರ ಪರ ಮತದಾನಕ್ಕೆ ಸೂಚನೆ
  • ಮ. 2.30- ಮಂಜುನಾಥರೆಡ್ಡಿ ಮೇಯರ್ ಎಂದು ಘೋಷಣೆ, ಉಪಮೇಯರ್‍ಗೆ ಮತದಾನಕ್ಕೆ ಸೂಚನೆ
  • ಸಂ. 4-ಎಸ್.ಪಿ. ಹೇಮಲತಾ ಉಪಮೇಯರ್ ಎಂದು ಘೋಷಣೆ, ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ಆರಂಭ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com