ಹೋರಾಟಕ್ಕೆ ವಿದ್ಯಾರ್ಥಿಗಳ ಸಾಥ್

ಎತ್ತಿನಹೊಳೆ ಯೋಜನೆ ವಿರುದ್ಧ ವಿದ್ಯಾರ್ಥಿ ಶಕ್ತಿ ಅಬ್ಬರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಶನಿವಾರ ತರಗತಿ ಬಹಿಷ್ಕರಿಸಿ ಬೀದಿಗಿಳಿದು ಆಕ್ರೋಶ...
ವಿದ್ಯಾರ್ಥಿಗಳ ಪ್ರತಿಭಟನೆ(ಸಾಂದರ್ಭಿಕ ಚಿತ್ರ)
ವಿದ್ಯಾರ್ಥಿಗಳ ಪ್ರತಿಭಟನೆ(ಸಾಂದರ್ಭಿಕ ಚಿತ್ರ)

ಮಂಗಳೂರು:ಎತ್ತಿನಹೊಳೆ ಯೋಜನೆ ವಿರುದ್ಧ ವಿದ್ಯಾರ್ಥಿ ಶಕ್ತಿ ಅಬ್ಬರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಶನಿವಾರ ತರಗತಿ ಬಹಿಷ್ಕರಿಸಿ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಕರಾವಳಿಗರೇ ಆಗಿರುವ, ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಕಾರಣರಾಗಿರುವ ಆರೋಪ ಹೊತ್ತ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಂಸದ ಡಾ. ಎಂ. ವೀರಪ್ಪಮೊಯ್ಲಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ,ಅಲ್ಲಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಯೋಜನೆ ಬಗ್ಗೆ ಚಕಾರ ಎತ್ತದ ಕರಾವಳಿ ಭಾಗದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅಂಬೇಡ್ಕರ್ ವೃತ್ತದ ಬಳಿ ಸೇರಿದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲಿ ಮಾತನಾಡಿದ ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ ನ ಗೌರವಾಧ್ಯಕ್ಷರೂ ಆಗಿರುವ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಹೋರಾಟದ ಕಿಚ್ಚು ಕೊನೆಯ ತನಕ ಇರಬೇಕು.
ಎತ್ತಿನಹೊಳೆ ಯೋಜನೆ ರದ್ದುಗೊಳ್ಳುವ ತನಕ ಹೋರಾಟ ಮುಂದುವರಿಯಬೇಕು.ಕೇವಲ ಬೀದಿಗಿಳಿದು ಹೋರಾಟ ಮಾಡಿ ಬೊಬ್ಬೆ ಹಾಕಿದರೆ ಸಾಲದು, ಕಾನೂನಾತ್ಮಕವಾಗಿಯೂ ಹೋರಾಟ ಮಾಡಬೇಕಿದೆ ಎಂದರು. ಹೋರಾಟದ ಹಿನ್ನೆಲೆಯಲ್ಲಿ ರಾಜಕಾರಣಿಗಳನ್ನು ಬಯ್ಯುವ ಬದಲು ಅವರ ಮನಃಪರಿವರ್ತನೆ ಮಾಡಿ ಹೋರಾಟಕ್ಕೆ ಕೈ ಜೋಡಿಸುವಂತೆ ಮಾಡಬೇಕಿದೆ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯ ಕಾನೂನ ಸಲಹೆಗಾರ ದಿನಕರ ಶೆಟ್ಟಿ,ಅರಣ್ಯ ನಿಯಮ ಉಲ್ಲಂಘಿಸಿ ಎತ್ತಿನಹೊಳೆ ಯೋಜನೆ ಆರಂಭವಾಗಿದ್ದರೂ ಈ ಭಾಗದವರೇ ಆಗಿರುವ ಅರಣ್ಯ ಖಾತೆ ಸಚಿವರು ಚಕಾರವೆತ್ತುತ್ತಿಲ್ಲ. ಇಲ್ಲಿನ ರಾಜಕಾರಣಿಗಳಿಂದ ಜಿಲ್ಲೆಯ ಕಗ್ಗೊಲೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ರೋಹಿಣಿ ಮಾತನಾಡಿ, ಜಿಲ್ಲೆಗೆ ಅನ್ಯಾ ಯವಾಗುತ್ತಿದ್ದರೂ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ,ಇಂತಹ ಜನಪ್ರತಿನಿಧಿಗಳು ನಮಗೆ ನಮಗೆ ಬೇಕಾ? ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ,ಇಲ್ಲವಾದಲ್ಲಿ ಸೀಟು ಬಿಟ್ಟುಕೊಡಿ ಎಂದು ಸವಾಲು ಹಾಕಿದರು.

ಯೋಜನೆ ಡಿವಿಎಸ್ ಕಾಲದ್ದು
ಯೋಜನೆಯನ್ನು ವಿರೋಧಿಸುವುದಕ್ಕೆ ಕಾಲ ಮಿಂಚಿದೆ. ಈ ಯೋಜನೆ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದ.ಕ. ಜಿಲ್ಲೆಯವರೇ ಆಗಿರುವ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಮಂಜೂರಾಗಿತ್ತು.ಅದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಯಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಈ ಯೋಜನೆ ವೈಜ್ಞಾನಿಕವೋ ಅವೈಜ್ಞಾನಿಕವೋ, ಗುರಿ ಮುಟ್ಟುತ್ತದೋ ಇಲ್ಲವೋ ಎಂಬುದೆಲ್ಲಾ ಆಗಲೇ
ಚರ್ಚೆ ಆಗಬೇಕಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ ಏನಿದ್ದರೂ ಅದನ್ನು ಅನುಷ್ಠಾನಗೊಳಿಸುವುದಷ್ಟೇ ಎಂದು ಸ್ಪಷ್ಟಪಡಿಸಿದರು.

ಎತ್ತಿನಹೊಳೆ ಯೋಜನೆ ಎಂಬ ಬಸ್ ಹೊರಟಾಗಿದೆ,ಅದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. ಅದನ್ನೀಗ ತಡೆದು ನಿಲ್ಲಿಸುವುದು ಸಾಧ್ಯವಿಲ್ಲ.
●ಯು.ಟಿ. ಖಾದರ್, ಆರೋಗ್ಯ ಸಚಿವ

ಪೂಜಾರಿಯಂತಹವರು ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಅವರ ವೈಯಕ್ತಿಕ ದ್ವೇಷಕ್ಕೆ ಎತ್ತಿನಹೊಳೆ ಯೋಜನೆ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಈ ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಬದಲು ಪೂಜಾರಿ ಅವರು ಬಯಲು ಸೀಮೆ ಜನತೆಯ ಕುಡಿಯುವ ನೀರಿನ ಬಗ್ಗೆ, ಮಾನವೀಯತೆಯ ಬಗ್ಗೆ ಮೊದಲು ಯೋಚಿಸಲಿ.
●ಡಿ.ವಿ.ಸದಾನಂದ ಗೌಡ, ಕೇಂದ್ರ ಕಾನೂನು ಸಚಿವ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com