ಮಾಲೀಕನ ಮನೆ ದೋಚಿದವರ ಬಂಧನ

ಯುವತಿಯನ್ನು ಚುಡಾಯಿಸಿದ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಿದ್ದ ಮಾಲಿಕರ ಮನೆಯನ್ನೇ ದರೋಡೆ ಮಾಡಿಸಿದ್ದ ಇಬ್ಬರು...
ಬಂಧಿತ ಆರೋಪಿಗಳೊಂದಿಗೆ ಪೊಲೀಸರು
ಬಂಧಿತ ಆರೋಪಿಗಳೊಂದಿಗೆ ಪೊಲೀಸರು

ಬೆಂಗಳೂರು: ಯುವತಿಯನ್ನು ಚುಡಾಯಿಸಿದ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಿದ್ದ ಮಾಲಿಕರ ಮನೆಯನ್ನೇ ದರೋಡೆ ಮಾಡಿಸಿದ್ದ ಇಬ್ಬರು ಕೆಲಸಗಾರರು ಸೇರಿ 12 ಆರೋಪಿಗಳನ್ನು ಕೇಂದ್ರ ವಿಭಾಗ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಮಲ್ಲಪುರಂ ಜಿಲ್ಲೆಯ ಜಿಶಾದ್ (28), ಸಹಲ್ (20), ಸಮೀರ್(25), ಫೈರೋಜ್(40), ಸಂತೋಷ್(26), ಉಮರ್ ಖಾನ್(29), ತೌಫಿಕ್(29), ಶಹಜಾನ್(31), ಸಿಯಾದ್(30), ಬಾಷಾ(39) ವಿನೋದ್(31) ಷಹಜಾನ್ ಖಾನ್(29) ಬಂಧಿತರು. ಇವರಿಂದ ಒಂದು ಜೀಪ್, ರು.8,500 ನಗದು ಹಾಗೂ 15 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಗಳ ಪೈಕಿ ಸಂತೋಷ್ ಹಾಗೂ ಉಮರ್ ಖಾನ್ ರಿಚ್‍ಮಂಡ್ ಟೌನ್‍ನ ಗೋಲ್ಡನ್ ಥ್ರೆಶೋಲ್ಡ್  ಅಪಾರ್ಟ್‍ಮೆಂಟ್ ನಲ್ಲಿ ವಾಸವಿರುವ ಜಲ್ಲಿ ಕ್ರಷಿಂಗ್ ಹಾಗೂ ಗಾರ್ಮೆಂಟ್ಸ್ ಉದ್ಯಮಿ ಅಬ್ದುಲ್ ಫಾರೂಕ್ ಮನೆಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಇವರು ಅಪಾರ್ಟ್ ಮೆಂಟ್ ನಲ್ಲಿ ಯುವತಿಯರನ್ನು ಚುಡಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಮಾಲೀಕರು ಇಬ್ಬರನ್ನು ವೇತನ ನೀಡದೆ ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಕುಪಿತಗೊಂಡಿದ್ದ ಸಂತೋಷ್ ಹಾಗೂ ಉಮರ್ ಖಾನ್  ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದರು. ಅವರ ಮನೆಯಲ್ಲಿ ಲಕ್ಷಾಂತರ ರುಪಾಯಿ ನಗದು ಹಾಗೂ ಚಿನ್ನಾಭರಣ ಇರುವ ಬಗ್ಗೆ ತಿಳಿದಿತ್ತು. ಹೀಗಾಗಿ, ಕೇರಳ ಮೂಲದ ಸ್ನೇಹಿತರ ಮೂಲಕ ಇವರ ಮನೆಯಲ್ಲಿ ದರೋಡೆಗೆ ಸಂಚು ರೂಪಿಸಿದ್ದರು. 

ಅದರಂತೆ ಕೇರಳದ 10 ಸ್ನೇಹಿತರ ತಂಡ ಮಹೀಂದ್ರಾ ಜೀಪ್‍ನಲ್ಲಿ ಸೆ.5ರಂದು ರಾತ್ರಿ 8 ಗಂಟೆ ಸುಮಾರಿಗೆ ಅಪಾರ್ಟ್‍ಮೆಂಟ್‍ಗೆ ನುಗ್ಗಿತ್ತು. ಮುಸುಕು ಧರಿಸಿದ್ದ ಆರೋಪಿಗಳು ಮನೆ ಮಾಲೀಕರು ಅವರ ಪತ್ನಿ ಹಾಗೂ ಮಗನಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಮೊಬೈಲ್ ಫೋನ್ ಸುಮಾರು ರು.2 ಲಕ್ಷ ನಗದು ದೋಚಿ ಕೇವಲ 15 ನಿಮಿಷದಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಬಂಧನಕ್ಕೆ ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪೊಲೀಸರ ತಂಡ ತನಿಖೆ ಆರಂಭಿಸಿತ್ತು. ಈ ವೇಳೆ ಮಾಲೀಕ ಅಬ್ದುಲ್ ಫಾರೂಕ್ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ ಎಂದು ಸುಳಿವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದಾಗ ತಮ್ಮ ಪಾತ್ರವಿಲ್ಲ ಎಂದಿದ್ದರು.

ಆದರೆ, ದರೋಡೆಗೆ ಕೇರಳದಿಂದ ಬಂದಿದ್ದ 10 ಜನರ ತಂಡ ವಾಪಸ್ ಹೋಗುವಾಗ ಮೈಸೂರಿನಿಂದ ಸಂತೋಷ್ ಮೊಬೈಲ್ ಫೋನ್‍ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರ ಒಂದು ತಂಡ ಕೇರಳಕ್ಕೆ ತೆರಳಿ ಮೂರು ದಿನಗಳ ಕಾಲ ಬೀಡು ಬಿಟ್ಟಿ ಅಂತಿಮವಾಗಿ ಕೇರಳದ ವಿವಿಧ ಜಿಲ್ಲೆಗಳಿಂದ 10 ಜನರನ್ನು ಬಂಧಿಸಿದೆ. ಬಂಧಿತರ ವಿರುದ್ಧ ಕೇರಳದ ವಿವಿಧೆಡೆ ಕೊಲೆ, ಕಳ್ಳತನ, ಮಾದಕವಸ್ತು ಮಾರಾಟ, ಹಲ್ಲೆ, ಕೇಸು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com