ಮಹದಾಯಿಗಾಗಿ ಮಹಾಹೋರಾಟ ಶುರು

ಮಹದಾಯಿ ನದಿ ಜೋಡಣೆಗೆ ಒತ್ತಾಯಿಸಿ ಕೂಡಲಸಂಗಮದಿಂದ ಮಹದಾಯಿ ನದಿ ಉಗಮ ಸ್ಥಾನದವರೆಗೆ ಹಮ್ಮಿಕೊಂಡ ರೈತರ ಪಾದಯಾತ್ರೆಗೆ...
ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿದ ರೈತರು ಮತ್ತು ಬೆಂಬಲಿಗರು
ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿದ ರೈತರು ಮತ್ತು ಬೆಂಬಲಿಗರು

ಹುನಗುಂದ: ಮಹದಾಯಿ ನದಿ ಜೋಡಣೆಗೆ ಒತ್ತಾಯಿಸಿ ಕೂಡಲಸಂಗಮದಿಂದ ಮಹದಾಯಿ ನದಿ ಉಗಮ ಸ್ಥಾನದವರೆಗೆ ಹಮ್ಮಿಕೊಂಡ ರೈತರ ಪಾದಯಾತ್ರೆಗೆ ಶುಕ್ರವಾರ ಸಂಗಮನಾಥನ ಸನ್ನಿಧಿ ಸಾಕ್ಷಿಯಾಯಿತು. ಆ ಮೂಲಕ ಮಹದಾಯಿ ಹೋರಾಟ ಹೊಸ ಸ್ವರೂಪ ಪಡೆಯಿತು.

ಕರ್ನಾಟಕ ರೈತ ಸೇನಾ ಹಮ್ಮಿಕೊಂಡ ಪಾದಯಾತ್ರೆಗೆ ಕೂಡಲಸಂಗಮದ ಸಂಗಮನಾಥನ ದೇವಾಲಯದ ಆವರಣದಲ್ಲಿ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,
ಮಹದಾಯಿ ನದಿಯನ್ನು ಮಲಪ್ರಭಾ ನದಿಗೆ ಜೋಡಣೆ ಮಾಡುವುದರಿಂದ ಉತ್ತರ ಕರ್ನಾಟಕದ ಜನರಿಗೆ ಕುಡಿಯಲು ಮತ್ತು ನೀರಾವರಿ ಯೋಜನೆಗಳಿಗೆ ನೀರಿನ  ಸೌಲಭ್ಯ ದೊರೆಯಲಿದೆ. ಆದರೆ ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸ್ಪಂದಿಸದಿರುವುದು ವಿಷಾದದ ಸಂಗತಿ. ರಾಜ್ಯದ ನದಿ ಜೋಡಣೆ ವಿಷಯದಲ್ಲಿ ಕೇಂದ್ರ ಸರ್ಕಾರ ಸದಾ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿದೆ ಎಂದು ಆರೋಪಿಸಿದರು.

ನ್ಯಾಯಾಧಿಕರಣದ ನೆಪ ಹೇಳದೆ ಮೂರೂ ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ ಕರೆದು ಮಹದಾಯಿ ನದಿಯನ್ನು ಮಲಪ್ರಭಾ ನದಿಗೆ ಜೋಡಿಸುವಂತಹ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕು. ರಾಜ್ಯ ಸರ್ಕಾರ ಕೂಡಾ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲು ಮುಂದಾಗಬೇಕು.ಇಲ್ಲದಿದ್ದರೆ ರೈತರ ಶಕ್ತಿಯನ್ನು ಬಳಸಿಕೊಂಡು ಬರುವ ದಿನಗಳಲ್ಲಿ ದೆಹಲಿಯ ಜಂತರಮಂತರದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರೈತ ಸೇನೆ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನೆಪ ಹೇಳದೇ ನಮ್ಮ ಪಾಲಿನ ನೀರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಉತ್ತರ ಕರ್ನಾಟಕದ ರೈತರ ಹಿತ ಕಾಪಾಡಬೇಕು. ಪಾದಯಾತ್ರೆ ಮಹದಾಯಿ ನದಿ ಉಗಮ ಸ್ಥಳ ತಲುಪುವುದರೊಳಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಹಾರ ಘೋಷಣೆ ಮಾಡಬೇಕು. ಸರ್ಕಾರಗಳ ಅಸಡ್ಡೆ ಮುಂದುವರಿದರೆ ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶದ ಶಾಸಕರು, ಸಂಸದರು ಸ್ವಯಂ ಪ್ರೇರಣೆಯಿಂದ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ರೈತರ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.

25 ದಿನಗಳ ಪಾದಯಾತ್ರೆ
ರೈತ ಮುಖಂಡರು, ಮಠಾಧೀಶರ ನೇತೃತ್ವದಲ್ಲಿ ಹಮ್ಮಿಕೊಂಡ ಈ ಪಾದಯಾತ್ರೆ 25 ದಿನಗಳ ಕಾಲ ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಸಂಚರಿಸಿ ಅಂತಿಮವಾಗಿ ಮಹದಾಯಿ ನದಿಯ ಉಗಮ ಸ್ಥಳ ಖಾನಾಪುರ ತಾಲೂಕಿನ ಕಣಕುಂಬಿ ತಲುಪುವುದು. 4 ಜಿಲ್ಲೆಗಳ 9 ತಾಲೂಕಿನಲ್ಲಿ ಸುಮಾರು 700 ಕಿ.ಮೀ ದಾರಿಯನ್ನು ಪಾದಯಾತ್ರೆ ಕ್ರಮಿಸಲಿದೆ.
ಕೂಡಲಸಂಗಮ, ಬಾದಾಮಿ, ರೋಣ, ನರಗುಂದ, ರಾಮದುರ್ಗ, ಸವದತ್ತಿ, ನವಲಗುಂದ, ಹುಬ್ಬಳ್ಳಿ-ಧಾರವಾಡ, ಬೈಲಹೊಂಗಲ, ಖಾನಾಪುರ ಮೂಲಕ ಮಹದಾಯಿ ನದಿಯ ಉಗಮ ಸ್ಥಳ ತಲುಪುವುದು. ರಾಜಕಾರಣಿಗಳು ಮತ್ತು ರಾಜಕೀಯ ಹಿನ್ನೆಲೆಯ ಸಂಘಟನೆಗಳನ್ನು ಬದಿಗಿಟ್ಟು ರೈತರೇ ಪಾದಯಾತ್ರೆ ಕೈಗೊಂಡಿರುವುದು ವಿಶೇಷ.

ಸೋನಿಯಾ ನೇತೃತ್ವ ವಹಿಸಲಿ: ಶೆಟ್ಟರ್
ಮಹದಾಯಿ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕಕ್ಕೆ ನ್ಯಾಯ ಸಲ್ಲಿಸುವ ನಿಟ್ಟಿನ ಹೋರಾಟಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವ ವಹಿಸಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದೆ. ಕಾಂಗ್ರೆಸ್ ವಿವಾದವನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದೆಯೇ ವಿನಃ ಪರಿಹಾರದ ಯೋಚನೆ ಮಾಡುತ್ತಿಲ್ಲ. ಸಿದ್ದರಾಮಯ್ಯ ಹೈಕಮಾಂಡ್
ನಿಲುವುಗಳನ್ನು ಮೀರಲು ಸಿದ್ಧರಿಲ್ಲ. ಸೋನಿಯಾ ಗಾಂಧಿ ಗೋವಾ ಕಾಂಗ್ರೆಸ್ ಒಪ್ಪಿಸುವ ಕೆಲಸ ಮಾಡಿದರೆ, ನಾವು ಕೇಂದ್ರದಲ್ಲಿ ಈ ಕುರಿತು ಪೂರಕ ಪ್ರತಿಕ್ರಿಯೆ ದೊರಕಿಸಿಕೊಡುತ್ತೇವೆ
ಎಂದರು.

2007ರಲ್ಲಿ ನಡೆದ ಗೋವಾ ಚುನಾವಣೆ ವೇಳೆ ಭಾಷಣ ಮಾಡಿದ್ದ ಸೋನಿಯಾರವರು, ಯಾವುದೇ ಕಾರಣದಿಂದ ಕರ್ನಾಟಕಕ್ಕೆ ಮಹದಾಯಿ ನೀರು ಕೊಡುವುದಿಲ್ಲವೆಂದು ಶಪಥಗೈದಿದ್ದರು. ಕಾಂಗ್ರೆಸ್‍ನವರಿಗೆ ನಿಜಕ್ಕೂ ನಾಡಿನ ರೈತರ ಬಗ್ಗೆ ಕಾಳಜಿ ಇದ್ದರೆ ಹೈಡ್ರಾಮಾ ಬಿಟ್ಟು 3 ರಾಜ್ಯಗಳಲ್ಲಿರುವ ತಮ್ಮ ಮಖಂಡರನ್ನು ಮಹದಾಯಿ ಪರ ಒಪ್ಪಿಸಿಕೊಂಡು ಬರುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.

ಸಾಲ ಬಾಧೆ ತಾಳಲಾರದೆ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಪರಿಹಾರ ನೀಡುವ ಸಂಬಂಧ ಅಡ್ಡಿಯಾಗಿರುವ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಬೇಕಾಗಿದೆ. ಸರ್ಕಾರ ಈ ಪ್ರಯತ್ನ ನಡೆಸದೇ ಕಾಲಹರಣ ಮಾಡಲಾಗುತ್ತಿದೆ ಎಂದು ಶೆಟ್ಟರ್ ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com