
ಬೆಂಗಳೂರು: ದುಷ್ಕರ್ಮಿಗಳು ಎಟಿಎಂ ಕೇಂದ್ರಗಳಿಗೆ ನುಗ್ಗಿ ಹಣ ದೋಚಿ, ಕಾವಲುಗಾರರನ್ನು ಕೊಲೆ ಮಾಡಿ ಹೋದ ಹಲವು ಸುದ್ದಿಗಳನ್ನು ಓದಿದ್ದೇವೆ. ಆದರೆ, ಇಲ್ಲೊಬ್ಬ ಕಾವಲುಗಾರ ಎಟಿಎಂ ದರೋಡೆ ಸಂಚನ್ನು ವಿಫಲಗೊಳಿಸಿದ್ದೂ ಅಲ್ಲದೆ, ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜ್ಞಾನಭಾರತಿ ಸಮೀಪದ ತಿಗಳರಪಾಳ್ಯದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ನಂದಿನಿ ಬಡಾವಣೆ ಸಮೀಪದ ಕಂಠೀರವ ನಗರ ನಿವಾಸಿ ಚಂದ್ರ(30) ಬಂಧಿತ ಆರೋಪಿ.
ನಸುಕಿನ 2.45ರ ಸುಮಾರಿಗೆ ತಿಗಳರಪಾಳ್ಯದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ ಒಳಗೆ ಕಟ್ಟಿಂಗ್ ಪ್ರಯರ್ ಸಮೇತ ನುಗ್ಗಿದ ಆರೋಪಿ, ಹಣ ದೋಚಲು ಎಟಿಎಂಗೆ ಕೈ ಹಾಕಿದ್ದಾನೆ. ಆದರೆ, ಎಟಿಎಂ ಕೇಂದ್ರದ ಒಳಗಿನ ಬ್ಯಾಟರಿ ಕ್ಯಾಬಿನ್‌ನಲ್ಲಿ ಮಲಗಿದ್ದ ಕಾವಲುಗಾರ ಲೋಕೇಶ್‌ಗೆ, ಸದ್ದು ಕಿವಿಗೆ ಬಿದ್ದಿತು. ಕೂಡಲೇ ಎಚ್ಚರಗೊಂಡ ಕಾವಲುಗಾರ ಲೋಕೇಶ್ ಚಂದ್ರನ ಮೇಲೆರಗಿ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ತಾವರೆಕೆರೆ ಪೊಲೀಸರನ್ನು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಕುಣಿಗಲ್ ತಾಲೂಕಿನ ಸಿಂಗವನಹಳ್ಳಿ ಗ್ರಾಮದ ಆರೋಪಿ ಚಂದ್ರ, ಪತ್ನಿ ಹಾಗೂ ಮಕ್ಕಳೊಂದಿಗೆ ಕಂಠೀರವ ನಗರದಲ್ಲಿ ವಾಸವಿದ್ದು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ. ವೈಯಕ್ತಿಕ ಕಾರಣಗಳಿಗಾಗಿ 12 ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಸಾಲ ತೀರಿಸಲು ಎಟಿಎಂ ದೋಚುವ ಸಂಚು ರೂಪಿಸಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಚಂದ್ರ ಹೇಳಿಕೊಂಡಿದ್ದಾನೆ.
Advertisement