24 ಟಿಎಂಸಿ ನೀರು ಎಲ್ಲಿಂದ ತರ್ತೀರಿ? ಶೋಭಾ

ರಾಜ್ಯ ಸರ್ಕಾರ ಶತಾಯಗತಾಯ ಜಾರಿಗೊಳಿಸಲು ಹೊರಟಿರುವ ಎತ್ತಿನಹೊಳೆ ಯೋಜನೆಯಲ್ಲಿ ಹರಿಯಬೇಕಾಗಿರುವ 24 ಟಿಎಂಸಿ...
ಸಾಂದರ್ಭಿಕ ಚಿತ್ರ ಮತ್ತು ಸಂಸದೆ ಶೋಭಾ ಕರಂದ್ಲಾಜೆ
ಸಾಂದರ್ಭಿಕ ಚಿತ್ರ ಮತ್ತು ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ರಾಜ್ಯ ಸರ್ಕಾರ ಶತಾಯಗತಾಯ ಜಾರಿಗೊಳಿಸಲು ಹೊರಟಿರುವ ಎತ್ತಿನಹೊಳೆ ಯೋಜನೆಯಲ್ಲಿ ಹರಿಯಬೇಕಾಗಿರುವ 24 ಟಿಎಂಸಿ ನೀರನ್ನು ಎಲ್ಲಿಂದ ತರಲಾಗುತ್ತದೆ ಎಂಬುದನ್ನು ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಅದರ ಫಲಾನುಭವಿ ಜಿಲ್ಲೆಗಳ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯನ್ನು ಅಧ್ಯಯನ ಮಾಡಿರುವ ಟಾಟಾ ಇನ್‍ಸ್ಟಿಟ್ಯೂಟ್ ಈ ಹೊಳೆಯಲ್ಲಿ ಕೇವಲ 7 ಟಿ.ಎಂ.ಸಿ. ನೀರು ಲಭ್ಯವಿದೆ ಎಂದು ಹೇಳಿದೆ. ಆದರೆ ಸರ್ಕಾರ 24 ಟಿ.ಎಂ.ಸಿ. ನೀರು ನೀಡುವುದಾಗಿ ಕೋಲಾರ, ಚಿಕ್ಕಬಳ್ಳಾಪುರ ಜನರಿಗೆ ಹೇಳುತ್ತಿದೆ. ಈ ಹೆಚ್ಚುವರಿ ನೀರನ್ನು ಸರ್ಕಾರ ಎಲ್ಲಿಂದ ತರುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದರು.

ಟೆಂಡರ್ ಕರೆಯಲಾಗಿದೆ, ಕಾಮಗಾರಿ ಆರಂಭವಾಗಿದೆ. ಈಗ ಸರ್ಕಾರ ಯೋಜನೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಲಾಗುವುದು ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.

ಪರಮಶಿವಯ್ಯ ವರದಿ ಪ್ರಕಾರ ಪಶ್ಚಿಮಘಟ್ಟದ ತುದಿಯಲ್ಲಿ ಸಂಗ್ರಹ ವಾಗುವ ಮಳೆ ನೀರನ್ನು ಅಲ್ಲಲ್ಲಿ ಸಂಗ್ರಹಿಸಿ ಅದನ್ನು ಸರಪಣಿಯಂತೆ ಒಂದಕ್ಕೊಂದು ಜೋಡಿಸಿ ಅಗತ್ಯವಿರುವ  ಜಿಲ್ಲೆಗಳಿಗೆ ಪೂರೈಕೆ ಮಾಡುವ ಯೋಜನೆಯಾಗಿತ್ತು. ಆದರೆ ಈಗಿನ ಸರ್ಕಾರ ಅದನ್ನು ಕೈಬಿಟ್ಟು, ಘಟ್ಟದ ಬುಡದಲ್ಲಿರುವ ಎತ್ತಿನಹೊಳೆ ನದಿಯ ನೀರನ್ನು ಪೈಪ್‍ಲೈನ್ ಗಳ ಮೂಲಕ ಸಾಗಿಸುವ ಯೋಜನೆ ಜಾರಿಗೊಳಿಸ ಹೊರಟಿದೆ. ಇದಕ್ಕೆ ಜನರ ವಿರೋಧ ಇದೆ ಎಂದು ಹೇಳಿದರು.

ನೀರಿನ ಮೂಲ ಎಷ್ಟಿದೆ ಎಂಬುದು ಗೊತ್ತಿಲ್ಲ. ನೀರು ಸಂಗ್ರಹಕ್ಕೆ ಅಣೆಕಟ್ಟು ಕಟ್ಟಿಲ್ಲ. ಆದರೆ ಬೃಹತ್ ಗಾತ್ರದ ಪೈಪ್‍ಗಳನ್ನು ತಂದು ಹಾಕಿ ಯೋಜನೆ ಕಾಮಗಾರಿ ಆರಂಭಿಸಲಾಗಿದೆ. ಈ ಪೈಪ್‍ಗಳ ವ್ಯವಹಾರದಲ್ಲಿಯೇ ಭಾರೀ ದಂಧೆ ನಡೆದಿರುವಂತೆ ಕಾಣುತ್ತಿದೆ.
● ಶೋಭಾ ಕರದ್ಲಾಂಜೆ, ಸಂಸದೆ

ಗ್ರಾಮವಾರು ಪ್ರತಿಭಟನೆ
ಎತ್ತಿನಹೊಳೆ, ನೇತ್ರಾವತಿ, ಕುಮಾರಧಾರ ಸೇರಿದಂತೆ ಪಶ್ಚಿಮಘಟ್ಟದ ತಪ್ಪಲಿನ ನದಿಗಳ ತಿರುವು ವಿರುದ್ಧ ಪ್ರತಿ ಗ್ರಾಮ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಮುಂದೆ ಪ್ರತಿಭಟನಾ ಸಭೆಯನ್ನು ನಡೆಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆ ನಿರ್ಧರಿಸಿದೆ. ಇದರ ಅಂಗವಾಗಿ ಸೆ.26ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಯಲಿದೆ. ನದಿ ತಿರುವು ಯೋಜನೆಗೆ ವಿರೋಧವಿರುವ ಬಗ್ಗೆ ಪ್ರತಿ ಗ್ರಾಪಂಗಳಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಿಕೊಡುವಂತೆ ಈ ಸಭೆ ಒತ್ತಾಯಿಸಲಿದೆ. ನದಿ ತಿರುವಿಗೆ ಜಿಲ್ಲೆಯ ಜನತೆಯ ಸ್ಪಷ್ಟ ವಿರೋಧ ಇದೆ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಈ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಸಮಿತಿಯ ಪ್ರಮುಖರಾದ ಸುಭಾಷಿಣಿ ಶಿವರಾಂ ತಿಳಿಸಿದ್ದಾರೆ. ಈ ಪ್ರತಿಭಟನಾ ಜಾಗೃತಿ ಸಭೆಯು ಇಂದಿನಿಂದ ಸೆ.29ರ ತನಕ 20 ಗ್ರಾಮಗಳಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com