
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಮಳೆ ಅಬ್ಬರಿಸಿದೆ. ಗುಡುಗು ಸಹಿತ ಆರ್ಭಟಿಸಿದ ವರ್ಷ ಹಲವು ಗಂಟೆ ಕಾಲ ಎಡೆಬಿಡದೆ ಸುರಿದಿದೆ. ಇದರಿಂದ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತವಾಗಿವೆ. ಇದರಿಂದ ಶಾಪಿಂಗ್ ಹಾಗೂ ಗಣೇಶನ ವಿಸರ್ಜನೆಗೂ ತೊಡಕುಂಟಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದರೆ, ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿತ್ತು. ಕೆಲವು ರಸ್ತೆಗಳಲ್ಲಿ ನೀರಿನ ಹರಿವು ಹೆಚ್ಚಿ ವಾಹನಗಳ ಸಂಚಾರ ನಿಧಾನವಾಗಿತ್ತು. ಮನೆ ಸೇರಲು ವಿಳಂಬವಾಯಿತು.
ಪರದಾಟ: ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಕೆಲವು ಪ್ರದೇಶಗಳಲ್ಲಂತೂ ಒಳಚರಂಡಿಗಳಲ್ಲಿ ನೀರು ತುಂಬಿ ಹರಿಯುತ್ತಿದ್ದವು. ಇದರಿಂದ ಮ್ಯಾನ್‍ಹೋಲ್‍ಗಳು ಬಾಯಿ ತೆರೆದುಕೊಂಡು ಕೊಚ್ಚೆ ನೀರು ರಸ್ತೆಗೆ ಬಂದಿದ್ದವು. ನಾಗವಾರ ಹಾಗೂ ಹಲಸೂರು ಕೆರೆ ಪ್ರದೇಶದಲ್ಲಿ ಗಣೇಶ ವಿಸರ್ಜನೆಗೆ ಮಳೆ ಅಡ್ಡಿಪಡಿಸಿತು. ಉಳಿದಂತೆ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಜಯನಗರ, ಎಂ.ಜಿ ರಸ್ತೆ, ರಾಜಾಜಿನಗರ, ಮಡಿವಾಳ, ಶೇಷಾದ್ರಿಪುರ, ಕನಕಪುರ ರಸ್ತೆ, ಹಳೇ ಮದ್ರಾಸ್ ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆ, ಮಾಗಡಿ ರಸ್ತೆ, ಬನ್ನೇರುಘಟ್ಟ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದ ಕಾರಣ ವಾಹನ ಸಂಚಾರ ನಿಧಾನಗತಿ ಯಲ್ಲಿತ್ತು ಎಂದು ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದರು.
ನಗರದಲ್ಲಿ ಭಾರಿ ಮಳೆ ಬಂದರೂ ಯಾವುದೇ ಪ್ರದೇಶದಲ್ಲಿ ಮರ ಬಿದ್ದಿರುವ ಬಗ್ಗೆ ವರದಿ ಯಾಗಿಲ್ಲ ಎಂದು ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಹಾಗೂ ಬಿಬಿಎಂಪಿ ನಿಯಂತ್ರಣ ಕೊಠಡಿ ಸಿಬ್ಬಂದಿ ತಿಳಿಸಿದ್ದಾರೆ. ವಾರಾಂತ್ಯದ ಶಾಪಿಂಗ್ ಮಜಾ ಅನುಭವಿಸಲು ಸಿದ್ಧರಾಗಿದ್ದವರಿಗೆ ಮಾತ್ರ ವರುಣ ನಿರಾಸೆ ಮಾಡಿದ್ದಾನೆ. ಮುಂಗಾರು ಅಂತ್ಯದ ಮಳೆ ಚುರುಕು: ರಾಜ್ಯದಲ್ಲಿ ಮುಂಗಾರು ಅಂತ್ಯಕಾಲದ ಮಳೆ ಚುರು ಕಾಗಿದ್ದು, ಉತ್ತರ ಒಳನಾಡಿನ ಬಹುತೇಕ ಕಡೆ ಮಳೆ ಸುರಿದಿದೆ. ಪಶ್ಚಿಮ ಬಂಗಾಳದಿಂದ ಆಂಧ್ರಪ್ರದೇಶದ ಗಡಿಯವರೆಗೆ ಮಾರುತ ಬೀಸಲಾರಂಭಿಸಿದ್ದು, ಟ್ರಾ ಮಾದರಿಯ ಹವಾಮಾನ ವ್ಯವಸ್ಥೆ ಸೃಷ್ಟಿಯಾ ಗಿದೆ. ಇದರ ಪರಿಣಾಮ ಉತ್ತರ ಕರ್ನಾಟಕದ ಗಡಿ ಹಾಗೂ ಆಂಧ್ರಭಾಗದಲ್ಲಿ ಮಾರುತ ಚುರಕಾಗಿ ಮಳೆ ಸುರಿಯುತ್ತಿದೆ. ಇದೇ ಪರಿಸ್ಥಿತಿ ಇನ್ನೆರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement