ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಎಲ್‍ಇಡಿ ಬಲ್ಬ್ ಕಡ್ಡಾಯಕ್ಕೆ ಚಿಂತನೆ

ವಿದ್ಯುತ್ ಕ್ಷಮತೆ ಹೆಚ್ಚಿಸಿ ಅಪವ್ಯಯ ತಡೆಯಲು ರಾಜ್ಯದಲ್ಲಿ ಎಲ್‍ಇಡಿ ಬಲ್ಬ್ ಬಳಕೆ ಕಡ್ಡಾಯಗೊಳಿಸುವುದಕ್ಕೆ ಸರ್ಕಾರ...
Published on

ಬೆಂಗಳೂರು: ವಿದ್ಯುತ್ ಕ್ಷಮತೆ ಹೆಚ್ಚಿಸಿ ಅಪವ್ಯಯ ತಡೆಯಲು ರಾಜ್ಯದಲ್ಲಿ ಎಲ್‍ಇಡಿ ಬಲ್ಬ್ ಬಳಕೆ ಕಡ್ಡಾಯಗೊಳಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಮನೆ, ಬೀದಿ ದೀಪಗಳು, ಸರ್ಕಾರಿ ಕಚೇರಿಗಳಲ್ಲಿ ಎಲ್‍ಇಡಿ ಬಳಕೆ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ಇದರಿಂದ ದಿನಕ್ಕೆ 800ರಿಂದ 900 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಎಲ್‍ಇಡಿ ಬಲ್ಬ್ ಗಳು ದುಬಾರಿ. ಆದರೆ ಸರ್ಕಾರ ಕೇವಲ 100 ರೂಪಾಯಿಗೆ ಈ ಬಲ್ಬ್ ಗಳನ್ನು ಜನರಿಗೆ ತಲುಪಿಸಲಿದೆ. ಪ್ರತಿ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ 10 ಬಲ್ಬ್ ಗಳನ್ನು ನೀಡಲು ನಿರ್ಧರಿಸಲಾಗಿದೆ. ಐದು ವಿದ್ಯುತ್ ಪ್ರಸರಣದ ನಿಗಮದ ನೌಕರರೇ ಪ್ರತಿ ಕುಟುಂಬಕ್ಕೆ ಬಲ್ಬ್ ಗಳನ್ನು ತಲುಪಿಸಿ ಬದಲಾಯಿಸುವ ಕೆಲಸ ಮಾಡುತ್ತಾರೆ. ಜತೆಗೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬೀದಿದೀಪ ಹಾಗೂ ಕಚೇರಿಗಳಲ್ಲಿ ಎಲ್‍ಇಡಿ ಬಲ್ಬ್ ಕಡ್ಡಾಯಗೊಳಿಸಲು ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು. ಈ ಯೋಜನೆಗೆ ಅಗತ್ಯವಾದ ಅನುದಾನ ಒದಗಿಸಲು ಸರ್ಕಾರದಿಂದ ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದರು.

400 ಮುಖಬೆಲೆಯ ಎಲ್‍ಇಡಿ ಬಲ್ಪ್ ಅನ್ನು ಸಬ್ಸಿಡಿ ದರದಲ್ಲಿ ಕೇವಲ 100 ಗೆ ಕೊಡಿಸಲು ಚಿಂತನೆ ನಡೆದಿದೆ.ಈ ಸಂಬಂಧ ಉತ್ಪಾದಕರ ಜತೆ ಬುಧವಾರ ಮಹತ್ವದ ಮಾತುಕತೆ ನಡೆಸಿ ಅಕ್ಟೋಬರ್ 1 ರಂದು ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ. ಈ ಪ್ರಸ್ತಾಪವನ್ನು ಕೆಇಆರ್‍ಸಿ ಮುಂದೆಯೂ ತರಲಾಗುವುದು. ಸರ್ಕಾರದ ಈ ಕ್ರಮಕ್ಕೆ ಕೇಂದ್ರದ ಸಹಮತ,  ಸಹಕಾರವೂ ಇದೆ. ಇದಕ್ಕಾಗಿಯೇ ಪ್ರತ್ಯೇಕ ಏಜೆನ್ಸಿ ರಚನೆಯಾಗಿದೆ ಎಂದರು.

ಪಂಪ್‍ಸೆಟ್‍ಗಳಿಗೆ ತ್ರೀ ಫೇಸ್: ಪ್ರಸ್ತುತ 7500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ.ಆದರೆ, 6152 ಮೆಗಾವ್ಯಾಟ್ ಮಾತ್ರ ಉತ್ಪಾದನೆ ಇದೆ. ಲೋಡ್ ಶೆಡ್ಡಿಂಗ್ ಕಡಿಮೆ ಮಾಡಿ ರೈತರ ಪಂಪ್ ಸೆಟ್‍ಗಳಿಗೆ ದಿನ ಬಿಟ್ಟು ದಿನ 5 ಗಂಟೆ ತ್ರೀ ಫೇಸ್ ವಿದ್ಯುತ್ ಕೊಡಲು
ಇಲಾಖೆ ತೀರ್ಮಾನಿಸಿದೆ.ಕೊರತೆ ಇರುವ 1350 ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡುವ ಅನಿವಾರ್ಯತೆ ಇದೆ. ಇದಕ್ಕೆ ಸರ್ಕಾರದ ಅನುಮತಿಯೂ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com