ಪೌರ ಸದಸ್ಯರಿಗೆ ಸಿದ್ದು ಕ್ಲಾಸ್!

ನೂತನ ಸದಸ್ಯರಿಗೆ ಬಿಬಿಎಂಪಿ ಮೊದಲ ಕೌನ್ಸಿಲ್ ಸಭೆಯಲ್ಲಿ ಮೇಯರ್ ಕ್ಲಾಸ್ ತಗೊಂಡ್ರೋ ಇಲ್ವೋ? ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ನೂತನ ಸದಸ್ಯರಿಗೆ ಬಿಬಿಎಂಪಿ ಮೊದಲ ಕೌನ್ಸಿಲ್ ಸಭೆಯಲ್ಲಿ ಮೇಯರ್ ಕ್ಲಾಸ್ ತಗೊಂಡ್ರೋ ಇಲ್ವೋ? ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಎಲ್ಲರಿಗೂ ಸರಿಯಾಗಿಯೇ ಪಾಠ ಮಾಡಿದ್ದಾರೆ.

ಸರ್ಕಾರದ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪಾಲಿಕೆ ಸದಸ್ಯರಿಗೆ ಆರೋಗ್ಯ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮ ಪಾಠಶಾಲೆಯಂತಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾಗಿದ್ದರು. ಹೆಸರಿಗೆ ಅದು ಆರೋಗ್ಯ ಕಾರ್ಯಕ್ರಮವಾದರೂ, ನಡೆದಿದ್ದು ಮಾತ್ರ ಮುಖ್ಯಮಂತ್ರಿ ಅವರ ಸಲಹೆ, ಸೂಚನೆ, ಎಚ್ಚರಿಕೆ ಮತ್ತು ತಿಳಿವಳಿಕೆ ಪಾಠ. ಮೊದಲಿಗೆ ಬೆಂಗಳೂರನ್ನು ಕಸಮುಕ್ತವನ್ನಾಗಿ ಮಾಡಬೇಕೆಂದು ಮಾತು ಆರಂಭಿಸಿದ ಸಿದ್ದು ಮೇಷ್ಟ್ರು ಸದಸ್ಯರೊಂದಿಗೆ ಒಂದು ತಾಸಿಗೂ ಹೆಚ್ಚು ಕಾಲ ಸಂವಾದಕ್ಕಿಳಿದರು.

ಬೆಂಗಳೂರಿನ ಪ್ರಾಥಮಿಕ ಮಾಹಿತಿಗಳನ್ನು ನೀಡಿದರು. ನಂತರ ಕಸ, ತೆರಿಗೆ, ನೀರು ಮತ್ತು ರಾಜಕಾಲುವೆ, ಕೆರೆಗಳ ಒತ್ತುವರಿ ವಿಚಾರಗಳನ್ನು ಒಂದೊಂದಾಗಿ ಪ್ರಸ್ತಾಪಿಸುತ್ತಾ, ಕಸಮುಕ್ತ ವಾರ್ಡ್ ಮಾಡಿದವರಿಗೆ ಬಹುಮಾನ ನೀಡಲಾಗುವುದು. ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಿ, ಅಕ್ರಮಕ್ಕೆ ಅವಕಾಶ ನೀಡಬೇಡಿ. ಜನರಿಂದ ಛೀಮಾರಿ ಹಾಕಿಸಿಕೊಳ್ಳಬೇಡಿ. ನಿಮ್ಮ ಹಿಂದೆ ನಾನಿರುತ್ತೇನೆ. ಅಷ್ಟೇ ಅಲ್ಲ, ರು.3000 ಕೋಟಿಗಳ ತೆರಿಗೆ ವಸೂಲಿ ಆಗಲೇಬೇಕೆಂದು ಟಾರ್ಗೆಟ್ ನೀಡಿದರು.

ರಾಜಕೀಯ ಬಿಡಿ: ಬಿಬಿಎಂಪಿ ಚುನಾವಣೆಯಲ್ಲಿ ರಾಜಕೀಯ ಮಾಡಿದ್ದಾಯ್ತು. ಅದನ್ನು ಇನ್ನುಮುಂದೆ ಬಿಟ್ಟು ಬಿಡಿ. ಆ ಪಕ್ಷ, ಈ ಪಕ್ಷ, ಅವರ ಕಡೆಯವರು ಎನ್ನುವುದನ್ನು ಬಿಟ್ಟುಬಿಡಿ. ಈಗ ಪಾಲಿಕೆ ಸದಸ್ಯರೆಲ್ಲರೂ ಒಂದೇ. ಪಕ್ಷ ಮರೆತು ನಗರಾಭಿವೃದ್ಧಿಗೆ ಶ್ರಮಿಸಿ. ಕಸಮುಕ್ತ ವಾರ್ಡ್ ಮತ್ತು ನಗರ ಪ್ರತಿಯೊಬ್ಬ ಗುರಿಯಾಗಬೇಕು. ಎಲ್ಲರೂ ಸವಾಲಿಗೆ ತಕ್ಕಂತೆ ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ಮುಲಾಜು ನೀಡಬೇಡಿ. ತಪ್ಪಾದರೆ, ಅವರು ಕೈಗೆ ಸಿಗುವುದಿಲ್ಲ. ಆಗ ಜನರಿಂದ ಬೈಸಿಕೊಳ್ಳುವವರು ನೀವು. ಜನರ ಕೆಂಗಣ್ಣಿಗೆ ಗುರಿಯಾಗಬೇಡಿ. ಕ್ಲಾಸ್ ಗೆ ಗೈರು ಹಾಜರಾದವರನ್ನು ಬಯ್ಯುವ ಮಾದರಿಯಲ್ಲಿ ಹಿರಿಯ ಸದಸ್ಯ, ಮಾಜಿ ಮೇಯರ್ ಕಟ್ಟೆ ಸತ್ಯ ಅವರನ್ನೂ ಮುಖ್ಯಮಂತ್ರಿ ಟೀಕಿಸಿದರು.

ಪಾಲಿಕೆ ಸದಸ್ಯರು ಸಭೆಗೆ ಕೈ ಬೀಸಿಕೊಂಡು ಬರಬಾರದು. ಮೊದಲೇ ಸಿದ್ಧತೆ ಮಾಡಿಕೊಂಡು, ಮಾಹಿತಿ ತಿಳಿದುಕೊಂಡಿರಬೇಕು. ಹಾಗೆಯೇ ಎಲ್ಲ ಸದಸ್ಯರು ಕೆಎಂಸಿ ಕಾಯ್ದೆಯನ್ನು ಓದಿ, ನಿಯಮಗಳನ್ನು ತಿಳಿದಿರಬೇಕು. ಹಾಗೆಯೇ ಎಲ್ಲ ಸದಸ್ರು ಕೆಎಂಸಿ ಕಾಯ್ದೆಯನ್ನು ಓದಿ, ನಿಯಮಗಳನ್ನು ತಿಳಿದಿರಬೇಕು. ಸಚಿವರಾದ ರಾಮಲಿಂಗಾರೆಡ್ಡಿ, ಯು.ಟಿ.ಖಾದರ್ ಹಾಗೂ ಪಾಲಿಕೆ ಹಿರಿಯ ಅಧಿಕಾರಿಗಳು, ಮಯರ್ ಮಂಜುನಾಥರೆಡ್ಡಿ, ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದರು.

ಎರಡು ವಾರಕ್ಕೊಮ್ಮೆ ನಗರ ಪ್ರದಕ್ಷಿಣೆ: ಹೊಸ ಪಾಲಿಕೆ ಸದಸ್ಯರು ಒಂದಾಗಿ ಕೆಲಸ ಮಾಡಿ ನಾನೂ ನಿಮ್ಮೊಂದಿಗೆ ಇರುತ್ತೇನೆ. 15 ದಿನಗಳಿಗೊಮ್ಮೆ ನಗರ ಪ್ರದಕ್ಷಿಣೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಯಾವುದೇ ಕಾರಣಕ್ಕೂ ಕಸದ ಸಮಸ್ಯೆ ತಲೆದೋರಬಾರದು. ಕಸ ವಿಲೇವಾರಿಯನ್ನು ಸರಿಯಾಗಿ ಮಾಡದ ಅಧಿಕಾರಿಗಳು ಯಾರೇ ಆದರೂ ಬಿಡುವುದಿಲ್ಲ. ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಕಸ ಸಮಸ್ಯೆಯನ್ನು ಯಾರೂ ನಿರ್ಲಕ್ಷ್ಯಿಸಬಾರದು ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com