
ಚಿಕ್ಕೋಡಿ: ಹೆಣ್ಣು ಮಗುವನ್ನು ಹೆತ್ತಿದ್ದಾಳೆಂಬ ಕಾರಣಕ್ಕೆ ಬಿಎಸ್ಎಪ್ ಯೋಧನೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆಯೊಂದು ಚಿಕ್ಕೋಡಿ ತಾಲೂಕಿನ ಕುರ್ಲಿಯಲ್ಲಿ ಭಾನುವಾರ ನಡೆದಿದೆ.
ಶಿವಲೀಲಾ ವಾಳಕೆ (25) ಹತ್ಯೆಯಾದ ಮಹಿಳೆಯಾಗಿದ್ದು, ಹಲವು ದಿನಗಳಿಂದಲೂ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆಂದು ಚಿತ್ರಹಿಂಸೆ ನೀಡಿದ್ದಾನೆ. ಇದರಂತೆ ನಿನ್ನೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆಂದು ಶಿವಲೀಲಾ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ 2014ರಲ್ಲಿ ಯೋಧ ಸ್ವಪ್ನಿಲ್ ಗೆ ಪುತ್ರಿಯನ್ನು ಕೊಟ್ಟು ವಿವಾಹ ಮಾಡಲಾಗಿತ್ತು. ಕಳೆದ 5 ತಿಂಗಳ ಹಿಂದೆಯಷ್ಟೇ ಶಿವಲೀಲಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಆಕೆಯ ಅತ್ತೆ, ಮಾವ ಹಾಗೂ ಗಂಡನಿಗೆ ಅಸಮಾಧಾನವಿತ್ತು. ಇದರಂತೆ ಆಕೆಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಶಿವಲೀಲಾ ತಂದೆ ನೀಡಿರುವ ದೂರಿನ ಅನ್ವಯ ಕ್ರಮ ಕೈಗೊಂಡಿರುವ ಪೊಲೀಸರು ಇದೀಗ ಯೋಧ ಸ್ವಪ್ನಿಲ್, ಆತನ ತಂದೆ ಸುಭಾಷ ವಾಳಕೆ, ಅತ್ತೆ ಛಬೂ ಮತ್ತು ಅರ್ಚನಾ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಸ್ವಪ್ನಿಲ್ ಛತ್ತೀಸ್ ಗಡದ ಬಿಎಸ್ಎಫ್ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದು, 15 ದಿನಗಳ ಹಿಂದಷ್ಟೇ ರಜೆ ಮೇಲೆ ಬಂದಿದ್ದರು. ಇದೀಗ ಶಿವಲೀಲಾ ತಂದೆ ಆರೋಪ ವ್ಯಕ್ತಪಡಿಸಿರುವುದರ ಹಿನ್ನೆಲೆಯಲ್ಲಿ ಸ್ವಪ್ನಿಲ್ ರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Advertisement