
ಧಾರವಾಡ: ಅವರು ಸೇನೆಯಲ್ಲಿರೋದು ಗೊತ್ತಿದ್ದೂ ವಿವಾಹವಾಗಿದ್ದೆ. ಆದರೆ ಅವರಿಲ್ಲದೆ ಬದುಕುವ ಪಾಠ ಕಲಿಸಿಕೊಟ್ಟಿದ್ದಾರೆ. ನಮ್ಮ ಮಗಳನ್ನು ಚೆನ್ನಾಗಿ ಓದಿಸಿ ಸೇನೆಗೆ ಸೇರಿಸುವುದೇ ನನ್ನ ಮುಖ್ಯ ಗುರಿ ಎಂದು ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಜಯಮ್ಮ ಹೇಳಿದ್ದಾರೆ.
ಹನುಮಂತಪ್ಪ ಕೊಪ್ಪದ್ ಅವರ ಅಂತ್ಯಕ್ರಿಯೆ ಬೆಟಗೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಿನ್ನೆ ನೆರವೇರಿತ್ತು. ಈ ವೇಳೆ ಮಾತನಾಡಿದ ಜಯಮ್ಮ, ನಾನು ನನ್ನ ಪತಿ ಜೊತೆ ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ್ದೇನೆ.ಊರಿಗೆ ಬರೋವಾಗ ಅಲ್ಲಿನ ಪರಿಸ್ಥಿತಿಯ ಕುರಿತ ಸಿಡಿ ತಂದು ತೋರಿಸುತ್ತಿದ್ದರು. ಹಾಗಾಗಿ ಸಿಯಾಚಿನ್ ನಲ್ಲಿ ನಡೆದ ದುರಂತ ಕೇಳಿ ನಾನು ಬೆಚ್ಚಿಬಿದ್ದಿಲ್ಲ. ಯಾಕೆಂದರೆ ದೇಶ ಸೇವೆ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಗಂಡನಿಗೆ ಒಂದಲ್ಲ ಒಂದು ದಿನ ಇಂತಹ ಪರಿಸ್ಥಿತಿ ಬರಬಹುದೆಂದು ಗೊತ್ತಿತ್ತು ಎಂದು ಹೇಳಿದ್ದಾರೆ.
ನನ್ನ ಪತಿ ವೀರಮರಣ ಹೊಂದಿದ್ದಾರೆ. ಈಗ ನಾನು ಧೈರ್ಯಗೆಡಲಾರೆ. ನನ್ನ ಮಗಳನ್ನು ಓದಿಸಿ ಸೇನೆಗೆ ಸೇರಿಸುತ್ತೇನೆ ಎಂದು ಹಂಬಲ ವ್ಯಕ್ತಪಡಿಸಿದ್ದಾರೆ. ಮಗಳು ಕೂಡಾ ಸೇನೆಯಲ್ಲಿರುವವರನ್ನೇ ವಿವಾಹವಾಗಬೇಕೆಂದು ಕೊಪ್ಪದ್ ಒಮ್ಮೆ ಆಸೆ ವ್ಯಕ್ತಪಡಿಸಿದ್ದರು. ಫೆ.2ರಂದು ಮಗಳಿಗೆ ಹುಶಾರಿಲ್ಲವಾಗಿತ್ತು ಆಸ್ಪತ್ರೆಗೆ ಕರೆದೊಯ್ದಿದ್ದೆ. ಆ ದಿನ ಕರೆ ಮಾಡಿದ್ದ ಕೊಪ್ಪದ್ ಮಗಳ ಆರೋಗ್ಯ ವಿಚಾರಿಸಿದ್ದರು. ನಂತರ ಮನೆಗೆ ಬಂದ ಮೇಲೂ ಮೊಬೈಲ್ ಕರೆ ಮಾತನಾಡಿದ್ದೆ. ಅದೇ ಕೊನೆ, ಫೆ.3ರಂದು ಹಿಮಪಾತದ ದುರಂತ ಸಂಭವಿಸಿತ್ತು ಎಂದು ನೊಂದು ನುಡಿದರು.
Advertisement