ಚಾರ್ಮಾಡಿ ಘಾಟ್ ನಲ್ಲಿ ಸಾವಿರಕ್ಕೂ ಹೆಚ್ಚು ಪ್ರಾಣ ಉಳಿಸಿದ ಹಸನಬ್ಬ

ಚಾರ್ಮಾಡಿಘಾಟ್ ನಲ್ಲಿ ಎಲ್ಲೇ ಅಪಘಾತವಾದರೂ ಕೂಡಲೇ ಧಾವಿಸುವ ಈ ವ್ಯಕ್ತಿ ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅವರ ಪ್ರಾಣ ಉಳಿಸುತ್ತಾರೆ. ಹೀಗೆ ಇವರು ಉಳಿಸಿದ ಪ್ರಾಣದ ಸಂಖ್ಯೆ...
ಒನ್ ಮ್ಯಾನ್ ಆ್ಯಂಬುಲೆನ್ಸ್ ಖ್ಯಾತಿಯ ಹಸನಬ್ಬ ಅಲಿಯಾಸ್ ಚಾರ್ಮಾಡಿ ಹಸನಬ್ಬ
ಒನ್ ಮ್ಯಾನ್ ಆ್ಯಂಬುಲೆನ್ಸ್ ಖ್ಯಾತಿಯ ಹಸನಬ್ಬ ಅಲಿಯಾಸ್ ಚಾರ್ಮಾಡಿ ಹಸನಬ್ಬ
Updated on

ಬೆಂಗಳೂರು: ಚಾರ್ಮಾಡಿ ಘಾಟ್ ಹೆಸರು ಕೇಳಿದರೆ ಅಪಘಾತ ಎಂಬ ಪದ ನೆನಪಿಗೆ ಬರುತ್ತದೆ. ಏಕೆಂದರೆ ಕರ್ನಾಟಕ ಬೇರೆಡೆ ನಡೆಯುವ ಅಪಘಾತಗಳ ಸಂಖ್ಯೆಗಿಂತ ಈ ವಲಯದಲ್ಲಿ  ನಡೆಯುವ ಅಪಘಾತಗಳ ಸಂಖ್ಯೆಯೇ ಹೆಚ್ಚು.

ಆದರೆ ಇಂತಹ ಅಪಘಾತವಲಯದಲ್ಲೇ ಓರ್ವ ವ್ಯಕ್ತಿ ಸರಿ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಿದ್ದಾರೆ. ಚಾರ್ಮಾಡಿಘಾಟ್ ನಲ್ಲಿ  ಎಲ್ಲೇ ಅಪಘಾತವಾದರೂ ಕೂಡಲೇ ಧಾವಿಸುವ ಈ ವ್ಯಕ್ತಿ ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅವರ ಪ್ರಾಣ ಉಳಿಸುತ್ತಾರೆ. ಹೀಗೆ ಇವರು ಉಳಿಸಿದ ಪ್ರಾಣದ ಸಂಖ್ಯೆ  ಒಂದು ಸಾವಿರವನ್ನೂ ಮೀರಿದೆ ಎಂದರೆ ಅಚ್ಚರಿಯಾಗಬಹುದು.

ಇವರ ಹೆಸರು ಹಸನಬ್ಬ ಅಲಿಯಾಸ್ ಚಾರ್ಮಾಡಿ ಹಸನಬ್ಬ. ಇವರಿಗೆ ಈ ಹೆಸರು ಬರಲು ಕಾರಣವೇ ಅವರ ಕಾಯಕ. ಏಕೆಂದರೆ ಚಾರ್ಮಾಡಿ ಘಾಟ್ ನ ಯಾವುದೇ ಭಾಗದಲ್ಲಿ  ಅಪಘಾತವಾದರೂ ಮೊದಲು ವಿಚಾರ ತಿಳಿಯುವುದೇ ಈ ಹಸನಬ್ಬ ಅವರಿಗೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸುವ ಹಸನಬ್ಬ ಅವರು ಅಪಘಾತಕ್ಕೀಡಾದ ವ್ಯಕ್ತಿಗಳನ್ನು  ರಕ್ಷಿಸಿ ಅವರಿಗೆ ಅಗತ್ಯ ಬಿದ್ದರೆ ಪ್ರಾಥಮಿಕ ಚಿಕಿತ್ಸೆ ನೀಡಿ ಅಥವಾ ನೇರ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಹೀಗಾಗಿ ಹಸನಬ್ಬ ಅವರನ್ನು ಸ್ಥಳೀಯರು ಚಾರ್ಮಾಡಿ ಹಸನಬ್ಬ ಎಂದು  ಕರೆಯುತ್ತಾರೆ. ಹಸನಬ್ಬ ಅವರ ಈ ವಿಶೇಷ ಕಾರ್ಯದಿಂದಲೇ ಅವರನ್ನು ಒನ್ ಮ್ಯಾನ್ ಆ್ಯಂಬುಲೆನ್ಸ್ ಎಂದು ಕರೆಯುತ್ತಾರೆ.

ಚಾರ್ಮಾಡಿ ಘಾಟ್ ನ ಬೆಳ್ತಂಗಡಿಯಲ್ಲಿ ಒಂದು ಸಣ್ಣ ರೆಸ್ಟೋರೆಂಟ್ ನಡೆಸುತ್ತಿರುವ ಹಸನಬ್ಬ ಅವರು, 1986ರಿಂದ ಈ ವರೆಗೂ ಸುಮಾರು 1 ಸಾವಿರಕ್ಕೂ ಅಧಿಕ ಮಂದಿಯ ಪ್ರಾಣ ಉಳಿಸಿದ್ದಾರೆ.  1986ರಲ್ಲಿ ನಡೆದ ಟ್ರಕ್ ಅಪಘಾತದಲ್ಲಿ  ಅಪ್ಪ ಮತ್ತು ಮಗ ಸಿಲುಕಿಕೊಂಡಿದ್ದರು. ಮದ್ಯರಾತ್ರಿ ನಡೆದ ಅಪಘಾತದಲ್ಲಿ ಇಬ್ಬರೂ ಪ್ರಾಣಾಪಾಯಕ್ಕೆ ಸಿಲುಕಿದ್ದರು. ಆದರೆ ಆ ಸಂದರ್ಭದಲ್ಲಿ ಯಾರೂ  ಕೂಡ ಅವರ ಸಹಾಯಕ್ಕೆ ಬರಲಿಲ್ಲ. ಆಗ ಹಸನಬ್ಬ ಅವರೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಂದು ಆರಂಭಗೊಂಡ ಹಸನಬ್ಬ ಅವರ ಕಾರ್ಯ ಇಂದಿಗೂ ಮುಂದುವರೆದಿದೆ.

ತಮ್ಮ ಈ ವಿಶೇಷ ಕಾಯಕದ ಬಗ್ಗೆ ಸಂತಸದಿಂದಲೇ ಮಾತನಾಡುವ ಹಸನಬ್ಬ ಅವರು, ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ಭೀಕರ ಅಪಘಾತವನ್ನು ಖಂಡಿಸಿದ್ದಾರೆ. "ರಸ್ತೆ ಅಪಘಾತದಲ್ಲಿ  ಸಾವು-ಬದುಕಿನ ಹೋರಾಟದ ನಡುವೆಯೂ ಅಂಗಾಂಗ ದಾನ ಮಾಡಲು ಮುಂದಾಗಿದ್ದ ಯುವಕನನ್ನು ರಕ್ಷಿಸುವ ಬದಲಿಗೆ ಅಲ್ಲಿದ್ದ ಜನ ಆತನ ಫೋಟೊ ತೆಗೆಯುತ್ತಿದ್ದ ರೀತಿ ನಿಜಕ್ಕೂ  ಖಂಡನಾರ್ಹವಾಗಿದೆ" ಎಂದು ಹಸನಬ್ಬ ಅವರು ಅಭಿಪ್ರಾಯಪಟ್ಟಿದ್ದಾರೆ.

"ಪ್ರಾಣ ಹೋಗುತ್ತಿದೆ ಎಂಬ ಕಠಿಣ ಸಂದರ್ಭದಲ್ಲಿಯೂ ಆ ಯುವಕ ಹರೀಶ್ ತನ್ನ ಅಂಗಾಂಗಳು ಮತ್ತೊಬ್ಬರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಸಹಾಯಕ್ಕೆ ಮೊರೆ ಇಡುತ್ತಿದ್ದರೆ, ಅಲ್ಲಿದ್ದ  ಕರುಣೆ ಇಲ್ಲದ ಜನ ಮಾತ್ರ ಆತನ ವಿಡಿಯೋ ಮತ್ತು ಫೋಟೊ ತೆಗೆಯುತ್ತಿದ್ದರು. ಮಾನವೀಯತೆ ಇದ್ದಿದ್ದರೆ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಉಳಿಸುವ ಪ್ರಯತ್ನ  ಮಾಡಬಹುದಾಗಿತ್ತು. ಆತ ಬದುಕುತ್ತಾನೆಯೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಕನಿಷ್ಠ ಆತನಿಗೆ ನೀರನ್ನಾದರೂ ನೀಡಿ ಉಪಚರಿಸಬೇಕಿತ್ತು" ಎಂದು ಹಸನಬ್ಬ ಹೇಳಿದ್ದಾರೆ.

"ಅಲ್ಲದೆ ನ್ಯಾಯಾಲಯಕ್ಕೆ ಅಲೆಯುವ ಭೀತಿಯಿಂದಲೋ ಅಥವಾ ಪೊಲೀಸ್ ವಿಚಾರಣೆಯ ಭಯದಿಂದಲೋ ಇಂತಹ ಪ್ರಕರಣಗಳಲ್ಲಿ ಸಹಾಯಕ್ಕೆ ಜನ ಮುಂದೆ ಬರುವುದಿಲ್ಲ. ಆದರೆ  ನಾನೊಂದು ಕೇಳುತ್ತೇನೆ.. ಅದೇ ಪರಿಸ್ಥಿತಿಯಲ್ಲಿ ಅವರ ಕುಟುಂಬಸ್ಥರು ಯಾರಾದರೂ ಇದ್ದಿದ್ದರೆ ಹಾಗೆಯೇ ಬಿಟ್ಟು ಹೋಗುತ್ತಿದ್ದರೆ ಎಂದು ಹಸನಬ್ಬ ಕಿಡಿಕಾರಿದ್ದಾರೆ. ನಮ್ಮ ಒಂದು ನಿರ್ಲಕ್ಷ್ಯ  ಒಂದು ಜೀವ ಅಥವಾ ಇಡೀ ಕುಟುಂಬಕ್ಕೆ ಹಾನಿಯಾಗಬಲ್ಲದು" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com