ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಒಟ್ಟಾರೆ 23,516 ವಿದೇಶಿಯರು ನೆಲೆಸಿದ್ದು, ಆ ಪೈಕಿ ವೀಸಾ ಅವಧಿ ಮುಕ್ತಾಯಗೊಂಡಿರುವ 1,087 ಮಂದಿ ವಿದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ.
ಬೆಂಳೂರಿನಲ್ಲಿನ ಪ್ರಾಂತೀಯ ವಿದೇಶಿಯರ ನೋಂದಣಿ ಕಚೇರಿ(ಎಫ್ ಆರ್ ಆರ್ ಓ) ಪೊಲೀಸರಿಗೆ ವರದಿಯೊಂದನ್ನು ಸಲ್ಲಿಸಿದ್ದು, ಅದರಲ್ಲಿ 1,087 ರಷ್ಟು ವಿದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ತಿಳಿಸಲಾಗಿದೆ.
ಎಫ್ ಆರ್ ಆರ್ ಓ ಅಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತ ನಡೆಸಿದ ಸಭೆಯಲ್ಲಿ ವರದಿ ನೀಡಲಾಗಿದೆ. ಪೂರ್ವ ವಲಯದಲ್ಲಿ 6,683 ವಿದೇಶಿಯರು ನೆಲೆಸಿದ್ದು, ಆ ಪೈಕಿ 503 ಮಂದಿಯ ವೀಸಾ ಅವಧಿ ಮುಕ್ತಾಯಗೊಂಡಿದ್ದು, ಅಕ್ರಮವಾಗಿ ನೆಲೆಸಿದ್ದಾರೆ.
ಅಕ್ರಮವಾಗಿ ನೆಲೆಸಿರುವವರ ಗಡಿಪಾರು ಮಾಡುವಂತೆ ಎಫ್ ಆರ್ ಆರ್ ಓ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದ್ದು, ವಿದೇಶಾಂಗ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೃಹ ಸಚಿವರ ಆದೇಶದ ಮೇರೆಗೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಗಡಿಪಾರು ಮಾಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.