ಬಾರ್‍ಗಳಲ್ಲಿ ಮಕ್ಕಳ ಬಳಸಿದರೆ ಸೆರೆವಾಸ

ಮಕ್ಕಳ ಸಂರಕ್ಷಣೆ ಕುರಿತು ಕಾನೂನು ಮಾಡುವಂತೆ ಮಾಡಿದ್ದ ಮನವಿಯನ್ನು ಪುರಸ್ಕರಿಸಿರುವ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿರುವ ಸಂಸದ ರಾಜೀವ್ ...
ರಾಜೀವ್ ಚಂದ್ರ ಶೇಖರ್
ರಾಜೀವ್ ಚಂದ್ರ ಶೇಖರ್

ಮಕ್ಕಳ ಸಂರಕ್ಷಣೆ ಕುರಿತು ಕಾನೂನು ಮಾಡುವಂತೆ ಮಾಡಿದ್ದ ಮನವಿಯನ್ನು ಪುರಸ್ಕರಿಸಿರುವ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿರುವ ಸಂಸದ ರಾಜೀವ್ ಚಂದ್ರಶೇಖರ್, ಕಾನೂನನ್ನು ಸರಿಯಾದ ರೀತಿ ಅನುಷ್ಠಾನ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಾರ್ ಹಾಗೂ ಪಬ್‍ಗಳಲ್ಲಿ ಮದ್ಯ ಪೂರೈಕೆ ಮಾಡಲು ಮಕ್ಕಳನ್ನು ಬಳಸುವುದು ಕಾನೂನು ಬಾಹಿರವಾಗಿದ್ದು, ಇಂತಹವರ ವಿರುದ್ಧ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರು. ದಂಡ ವಿಧಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದ `ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳ ಕಾಯ್ದೆ-2015'ರ ಸೆಕ್ಷನ್ 78ರಲ್ಲಿ ಮಕ್ಕಳನ್ನು ಬಾರ್ ಹಾಗೂ ಪಬ್‍ಗಳಲ್ಲಿ ಮದ್ಯ ಪೂರೈಕೆ ಮಾಡಲು ಬಳಸುವುದು ಕಾನೂನಿನ ಉಲ್ಲಂಘನೆ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದೆ. ಅಷೇ ಅಲ್ಲದೆ ಮಕ್ಕಳನ್ನು ಬಳಸಿದ ಸಂಸ್ಥೆಯ ಮಾಲೀಕರಿಗೆ 7ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಲಾಗುತ್ತದೆ.

ಈ ಹಿಂದೆ ಬೆಂಗಳೂರಿನ ಕೆಲವೊಂದು ದುಬಾರಿ ಬಾರ್‍ಗಳು ಹಾಗೂ ಪಬ್‍ಗಳು ಕಾನೂನುಗಳನ್ನು ಉಲ್ಲಂಘಿಸಿ ಅಪ್ರಾಪ್ತ ಹಾಗೂ ಶಾಲಾ ಮಕ್ಕಳನ್ನು ಮದ್ಯ ಪೂರೈಕೆ ಬಳಸುತ್ತಿದ್ದರು. ಈ ಕುರಿತು ಪೋಷಕರು ಹಾಗೂ ಶಿಕ್ಷಕರಿಂದ ದೂರುಗಳು ಕೇಳಿ ಬಂದಾಗ ಸಂಸದ ರಾಜೀವ್ ಚಂದ್ರಶೇಖರ್ ಅವರು ದೂರುಗಳ ಸಮೇತ ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಅವರ ಸೂಚನೆ ಮೇರೆಗೆ ಕಳೆದ ವರ್ಷ ಜುಲೈನಲ್ಲಿ ರಾಜ್ಯ ಅಬಕಾರಿ ಆಯುಕ್ತರು ರಾಜ್ಯದಲ್ಲಿ ಅಪ್ರಾಪ್ತ ಹಾಗೂ ಶಾಲಾ ಮಕ್ಕಳನ್ನು  ಬಾರ್ ಮತ್ತು ಪಬ್‍ಗಳಲ್ಲಿ ಮದ್ಯ ಪೂರೈಕೆ ಮಾಡಲು ಬಳಸಿಕೊಳ್ಳುವಂತಿಲ್ಲ ಎಂದು ರಾಜ್ಯದ ಎಲ್ಲ ಮದ್ಯ ಮಾರಾಟ ಸಂಸ್ಥೆಗಳಿಗೆ ಆದೇಶ ಹೊರಡಿತ್ತು.

ಈ ಹಿಂದೆ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳ ಕಾನೂನು-2000 ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ-1965ರಲ್ಲಿ ಮಾದಕ ದ್ರವ್ಯ ಹಾಗೂ ಅಮಲೇರಿಸುವ ವಸ್ತುಗಳ ಮಾರಾಟದಲ್ಲಿ ಮಕ್ಕಳನ್ನು ಬಳಸುವುದು ದಂಡನಾರ್ಹ ಅಪರಾಧ ಎಂದು ತಿಳಿಸಲಾಗಿತ್ತು. ಬಲವಾದ ಕಾನೂನುಗಳು, ಅವುಗಳ ಜಾರಿ ವ್ಯವಸ್ಥೆಯ ಸಮರ್ಪಕವಾಗಿಲ್ಲದ ಕಾರಣ ಕಾನೂನು ಉಲ್ಲಂಘಿಸಿದವರು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಮಕ್ಕಳ ಸಂರಕ್ಷಣೆ ವಿಷಯದಲ್ಲಿ ಪ್ರಬಲ ನೂತನ ಕಾನೂನು ಜಾರಿಗೆ ಬರುತ್ತಿದ್ದು, ಮದ್ಯ ಪೂರೈಕೆಗೆ ಮಕ್ಕಳ ಬಳಕೆ ಕಡಿಮೆ-ಯಾಗಲಿದೆ ಎಂದು ಅವರು ಆಶಾವಾದ ವ್ಯಕ್ತ ಪಡಿಸಿದ್ದಾರೆ.

ನೂತನ ಕಾಯ್ದೆ ಉಲ್ಲಂಘಿಸುವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸರ್ಕಾರವು ಬಾರ್ ಹಾಗೂ ಪಬ್ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ನೀಡಬೇಕು. ರಾಜ್ಯದಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆಗಳು ಬಾರ್ ಹಾಗೂ ಪಬ್‍ಗಳಲ್ಲಿ ಮಕ್ಕಳ ಬಳಕೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಕಾನೂನು ಉಲ್ಲಂಘಿಸುವವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com