ಒಳಚರಂಡಿ ಕಾಮಗಾರಿ ಅವಘಡ: ಕೂಲಿ ಸಾವು, ಇಬ್ಬರಿಗೆ ಗಾಯ,

ಜಲಮಂಡಳಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ ವೇಳೆ 30 ಅಡಿ ಆಳದ ಗುಂಡಿಗೆ ಬಿದ್ದು ಕಾರ್ಮಿಕನೊಬ್ಬ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮೈಸೂರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಲಮಂಡಳಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ ವೇಳೆ 30 ಅಡಿ ಆಳದ ಗುಂಡಿಗೆ ಬಿದ್ದು ಕಾರ್ಮಿಕನೊಬ್ಬ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯ ಮಾರ್ಕಂಡೇಶ್ವರ ನಗರದಲ್ಲಿ ಸೋಮವಾರ ನಡೆದಿದೆ.

ಅಲ್ಲದೆ ಇನ್ನಿಬ್ಬರು ಕಾರ್ಮಿಕರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಜರಾತ್ ಮೂಲದ ಅತಿಲಾ ಕಾಟು(25) ಮೃತಪಟ್ಟ ಕಾರ್ಮಿಕ. ಚಂಗಡ ಮಂಗು ಮತ್ತು ಅಂಕಿತ್ ಗಾಯಗೊಂಡ ಇನ್ನಿಬ್ಬರು ಕಾರ್ಮಿಕರು. ಮೂವರು ಕಾರ್ಮಿಕರು ಗುಜರಾತ್ ಮೂಲದವರು. ಕೆಲಸದ ನಿಮಿತ್ತ ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಅಲ್ಲದೆ, ನಾಯಂಡಳ್ಳಿಯಲ್ಲಿರುವ ಕಾರ್ಮಿಕರ ಶೆಡ್‍ನಲ್ಲಿ ವಾಸವಾಗಿದ್ದರು.

ಮಧ್ಯಾಹ್ನ 1.30ರ ವೇಳೆಯಲ್ಲಿ ಈ ಮೂವರು ಸುಮಾರು 30 ಅಡಿ ಆಳದ ಗುಂಡಿಯ ಮೇಲೆ ನಿಂತು ಒಳಚರಂಡಿ ಪೈಪ್ ಲಿಂಕ್ ಮಾಡುತ್ತಿದ್ದರು. ಈ ವೇಳೆ ಇದಕ್ಕಿದ್ದಂತೆ ಗುಂಡಿಯ ಗೋಡೆ ಕುಸಿದಿದ್ದರಿಂದ ಮೂವರು ಈ ಆಳದ ಗುಂಡಿಗೆ ಬಿದ್ದಿದ್ದಾರೆ. ಕೂಡಲೇ ಕಾರ್ಮಿಕರ ನೆರವಿಗೆ ಧಾವಿಸಿದ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಕಾರ್ಮಿಕರನ್ನು ಮೇಲೆ ತಂದು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಈ ಪೈಕಿ ಅತಿಲಾ ಕಾಟು ಚಿಕಿತ್ಸೆ
ಫಲಕಾರಿಯಾಗದೆ ಮೃತಪಟ್ಟಿದ್ದ. ಉಳಿದಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಜಗಜೀವನರಾಂ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ಕೆಲಸದ ವೇಳೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಗುತ್ತಿಗೆದಾರ ಹಾಗೂ ಜಲಮಂಡಳಿ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪದ ಕೇಸು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com