ಬೆಂಗ್ಳೂರು-ಮೈಸೂರಲ್ಲಿ ಸಿನಿಮೋತ್ಸವ

ಬೆಂಗಳೂರು ಎಂಟನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಈ ಬಾರಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕಕಾಲಕ್ಕೆ ಸಿನಿಮೋತ್ಸವ ನಡೆಯಲಿದೆ. ಜ.28ರಿಂದ ಫೆಬ್ರವರಿ 4ರ ವರೆಗೆ ಸಿನಿಮೋತ್ಸವ ನಡೆಯಲಿದ್ದು, ಒಂದೇ ಕಡೆ ಸಿನಿಮಾ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಎಂಟನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಈ ಬಾರಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕಕಾಲಕ್ಕೆ ಸಿನಿಮೋತ್ಸವ ನಡೆಯಲಿದೆ. ಜ.28ರಿಂದ ಫೆಬ್ರವರಿ 4ರ ವರೆಗೆ ಸಿನಿಮೋತ್ಸವ ನಡೆಯಲಿದ್ದು, ಒಂದೇ ಕಡೆ ಸಿನಿಮಾ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಓರಿಯನ್ ಮಾಲ್ ನಲ್ಲಿರುವ 11 ಸ್ಕ್ರೀನ್ ಹಾಗೂ ಮೈಸೂರಿನ ಐನಾಕ್ಸ್‍ನಲ್ಲಿ 4 ಸ್ಕ್ರೀನ್‍ಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ ಎಂದು ಸಚಿವ ರೋಷನ್ ಬೇಗ್ ಹೇಳಿದರು.

ಬೆಂಗಳೂರು ಸಿನಿಮೋತ್ಸವ ಅಚ್ಚರಿಯ ರೀತಿಯಲ್ಲಿ ಬೆಳವಣಿಗೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸಿನಿಮೋತ್ಸವಕ್ಕೆ ತನ್ನದೇ ಆದ ಮಹತ್ವವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂದು ಸಚಿವರು ಹೇಳಿದರು. ಈ ಬಾರಿ ನಡೆಯಲಿರುವ 8ನೇ ಸಿನಿಮೋತ್ಸವ ಹಲವು ವಿಶೇಷತೆಗಳಿಂದ ಕೂಡಿದೆ.

 ಮುಂದಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ ಜಾಗದಲ್ಲಿ ಇಂಟರ್ ನ್ಯಾಷನಲ್  ಕನ್ವೆಷನ್ ಸೆಂಟರ್ ನಿರ್ಮಾಣ ಮಾಡಲಾಗುವುದು. ಇಲ್ಲಿ ಮಲ್ಟಿಪ್ಲೆಕ್ಸ್ ಕೂಡ ತಲೆ ಎತ್ತಲಿದ್ದು, ಮುಂದೆ ಅಲ್ಲೇ ಅಂತಾರಾಷ್ಟ್ರೀಯ ಸಿನಿಮೋತ್ಸವ ಮಾಡಲಾಗುವುದು. ಜತೆಗೆ ವರ್ಷ ಪೂರ್ತಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ಈ ಸೆಂಟರ್ ಅನ್ನು ಬಳಕೆ ಮಾಡಲಾವುದು ಎಂದು ರೋಷನ್ ಬೇಗ್ ಮಾಹಿತಿ ನೀಡಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, 8ನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಎಲ್ಲ ಸಿನಿಮಾಗಳು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದು, ವಿಶೇಷವಾಗಿ ಸಿನಿಮೋತ್ಸವಕ್ಕೆ ನೋಂದಣಿ ಮಾಡಿಕೊಂಡಾಗ ನೀಡುವ ಮೊಬೈಲ್ ನಂಬರ್ ಗೆ ಆಯಾ ದಿನದ ಸಿನಿಮಾ ಪ್ರದರ್ಶನದ ಪೂರ್ತಿ ಮಾಹಿತಿಯನ್ನು ಎಸ್ಎಂಎಸ್ ಮೂಲಕ ರವಾನಿಸಲಾಗುವುದು. ಈ ಸಾಲಿನಿಂದ ಚಿತ್ರೋತ್ಸವದಲ್ಲಿ ಗೆದ್ದ ಸಿನಿಮಾಗಳಿಗಹೆ ಕೊಡ ಮಾಡುವ ಬಹುಮಾನದ ಮೊತ್ತವನ್ನು 11 ಲಕ್ಷ ರೂ.ನಿಂದ 16 ಲಕ್ಷ ರೂ.ವರೆಗೂ ಹೆಚ್ಚಿಸಿದ್ದೇವೆ ಎಂದರು.

ಮೆಕ್ಸಿಕೋ, ಇರಾನ್, ಟರ್ಕಿ ದೇಶಗಳ ಸಿನಿಮಾಗಳ ಮೇಲಿನ ವಿಶೇಷ ಅವಲೋಕನ, ಪ್ರಸಿದ್ಧ ನಿರ್ದೇಶಕ-ರಾದ ಹಂಗೇರಿಯ ಇಸ್ಟ್ವಾನ್ ಝೆಬೋ, ಡೆನ್ ಮಾರ್ಕ್ ನ ನೀಲ್ಸ್ ಮ್ಯಾಲ್ಮರೋಸ್ ಅವರ ಚಿತ್ರಗಳ ಪ್ರದರ್ಶನಕ್ಕೆ ಒತ್ತು, ಕಲಾವಿದರ ಸಿಂಹಾವಲೋಕನ ವಿಭಾಗದಲ್ಲಿ ಪಂಚಭಾಷಾ ತಾರೆ ಬಿ ಸರೋಜದೇವಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ವಿಭಾಗದಲ್ಲಿ ಮೃಣಾಲ್ ಸೇನ್, ಅಡೂರ್ ಗೋಪಾಲ್ ಕೃಷ್ಣ ಹಾಗೂ ಕನ್ನಡ ಸಿದ್ಧಲಿಂಗಯ್ಯ ಹಾಗೂ ಕೆಎಸ್‍ಎಲ್ ಸ್ವಾಮಿ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರ ಚಿತ್ರಗಳ ಪ್ರದರ್ಶನ ಮಾಡಲಾಗುವುದು. ಸಿನಿಮೋತ್ಸವದಲ್ಲಿ 50ಕ್ಕೂ ಹೆಚ್ಚು ದೇಶಿ ಹಾಗೂ ವಿದೇಶಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮೈಸೂರಿನಲ್ಲಿ ನಡೆಯಲಿರುವ ಮುಕ್ತಾಯ ಸಮಾರಂಭಕ್ಕೆ ಇಡೀ ಚಿತ್ರರಂಗ ಭಾಗವಹಿಸುವ ನಿಟ್ಟಿನಲ್ಲಿ ಫೆಬ್ರವರಿ 4 ರಂದು ಚಿತ್ರೋದ್ಯಮಕ್ಕೆ ರಜೆ ಘೋಷಿಸಲು ಚಿತ್ರರಂಗ ನಿರ್ಧರಿಸಿದೆ ಎಂದು ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ತಿಳಿಸಿದರು.

ಸಿನಿಮಾ ಪ್ರದರ್ಶನದ ಜತೆಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದು ಸೌಂಡ್ ಡಿಸೈನಿಂಗ್ ಬಗ್ಗೆ ನಡೆಯುವ ವಿಚಾರ ಸಂಕಿರಣಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ರಸೂಲ್ ಪೂಕುಟ್ಟಿ, ಸಿನಿಮಾಟೋಗ್ರಫಿ ಕುರಿತು ನಡೆಯುವ ವಿಚಾರ ಸಂಕಿರಣಕ್ಕೆ ಪ್ರಸಿದ್ಧ ಛಾಯಾಗ್ರಾಹಕ ಅನಿಲ್ ಮೆಹ್ತಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.

ಸಿನಿಮೋತ್ಸವದಲ್ಲಿ ಭಾಗವಹಿಸಲು ಚಲನಚಿತ್ರ ಅಕಾಡೆಮಿ, ಸುಚಿತ್ರ ಫಿಲಂ ಸೊಸೈಟಿ, ವಾರ್ತಾ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಿನಿಮೋತ್ಸವದ ವಿವಿಧ ವಿಭಾಗಗಳಲ್ಲಿ ತೊಡಗಿಸಿ-ಕೊಂಡಿರುವ ಗಿರೀಶ್ ಕಾಸರವಳ್ಳಿ, ಜಯಮಾಲ, ಶಂಕರ್ ಮೋಹನ್, ವಿದ್ಯಾಶಂಕರ್ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com