
ಬೆಂಗಳೂರು: ಹಿಂಬದಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ರಾಜ್ಯ ಸರ್ಕಾರದ ನಿರ್ಧಾರವಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಮರ್ಥಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಸಂಚಾರ ಪೊಲೀಸ್ ಮತ್ತು ಸಾರಿಗೆ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ `27ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2016' ಉದ್ಘಾಟಿಸಿ
ಮಾತನಾಡಿದ ಅವರು, ಸುರಕ್ಷತೆ ದೃಷ್ಟಿಯಿಂದ ಹಿಂಬದಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಆದರೆ, ರಾಜ್ಯ ಸರ್ಕಾರವೇ ಇದನ್ನು ಜಾರಿಗೆ ತಂದಿದೆ ಎಂದು ಜನರು
ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದರು.
ಪರವಾನಗಿ ಇಲ್ಲದೆ ವಾಹನ ಓಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳೇ ಹೆಚ್ಚು ವಾಹನಗಳನ್ನು ಹೊಂದಿವೆ. ಆದರೆ, ತಮ್ಮ ಸಂಸ್ಥೆಗಳಲ್ಲಿ
ಕೆಲಸ ಮಾಡುವ ಚಾಲಕರು ಮತ್ತು ನಿರ್ವಾಹಕರ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇದರಿಂದ ಅನಾಹುತ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಇನ್ನು ಮುಂದೆ ತಮ್ಮ
ವಾಹನ ಸಿಬ್ಬಂದಿ ಬಗ್ಗೆ ಕಾರ್ಪೊರೇಟ್ ಸಂಸ್ಥೆಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಟ ನಡೆಸಿದಂತೆ, ಸುಗಮ ವಾಹನ ಸಂಚಾರಕ್ಕೂ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ನಗರದ 9 ಕಡೆಗಳಲ್ಲಿ ಇಂಟರ್ ಸೆಪ್ಟರ್‍ಗಳನ್ನು ಅಳವಡಿಸಲಾಗಿದ್ದು, ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ನಗರದಲ್ಲಿ 180 ಕಡೆ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಾಹನ ದಟ್ಟಣೆ ಇರುವ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಜೊತೆಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸಂಚಾರ ದಟ್ಟಣೆನಿವಾರಣೆಗೆ ಸುಮಾರು 18.5 ಸಾವಿರ ಕೋಟಿ ರು.ವೆಚ್ಚದಲ್ಲಿ ಪೂರ್ವ-ಪಶ್ಚಿಮ ಹಾಗೂ ಉತ್ತರ-ದಕ್ಷಿಣ ಕಾರಿಡಾರ್ ಸಮಗ್ರ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಮೂಲ ಸೌಕರ್ಯ ಅಭಿವೃದ್ಧಿ ಸಚಿವ ರೋಷನ್ ಬೇಗ್, ಮೇಯರ್ ಮಂಜುನಾಥ ರೆಡ್ಡಿ, ನಗರ ಪೊಲೀಸ್ ಆಯುಕ್ತ ಮೇಘರಿಕ್, ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತ
ಎಂ.ಎ. ಸಲೀಂ, ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಡಾ.ರಾಮೇಗೌಡ,ಗೃಹಮಂತ್ರಿಗಳ ಸಲಹೆಗಾರ ಕೆಂಪಯ್ಯ ಟಯೋಟ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ನಾವೊಮಿಸಿ ಭಾಗವಹಿಸಿದ್ದರು.
Advertisement