ಜನರ ಸಮಸ್ಯೆ ಗುರುತಿಸುವಲ್ಲಿ ಜನಪ್ರತಿನಿಧಿಗಳು ವಿಫಲ

ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ಜನಪ್ರತಿನಿಧಿಗಳು ಹಿಂದೆ ಉಳಿದಿದ್ದೇವೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ವಿಷಾದಿಸಿದ್ದಾರೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ಜನಪ್ರತಿನಿಧಿಗಳು ಹಿಂದೆ ಉಳಿದಿದ್ದೇವೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ವಿಷಾದಿಸಿದ್ದಾರೆ.

ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸೋಮವಾರ ಕಬ್ಬನ್‍ಪಾರ್ಕ್‍ನ ಸಚಿವಾಲಯ ಕ್ಲಬ್ ನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ `ಯುವ ಸಂಸತ್' ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ವಿಧಾನಸಭೆ ಮತ್ತು ವಿಧಾನ ಪರಿಷತ್ ಇರುವುದು ಜನರ ಸಮಸ್ಯೆಗಳನ್ನು ವ್ಯಕ್ತಪಡಿಸಲು. ಆದರೆ, ಸಾರ್ವಜನಿಕರ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ಜನಪ್ರತಿನಿಧಿಗಳು ಹಿಂದೆ ಉಳಿದಿದ್ದೇವೆ ಎಂದನಿಸುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರೇ ಮುಖ್ಯ. ಅದರಲ್ಲೂ ಜನಪ್ರತಿನಿಧಿಗಳು ಸಂಸತ್‍ನಲ್ಲಿ ಕಾರ್ಯಕಲಾಪಗಳನ್ನು ಯಾವ ರೀತಿ ನಡೆಸುತ್ತಾರೆ ಎಂಬುದು ಸಾರ್ವಜನಿಕರಿಗೂ ತಿಳಿಯುವಂತೆ ಮಾಡುವುದು ಬಹುಮುಖ್ಯವಾದದ್ದು. ಈ ಹಿಂದೆ ಕೇವಲ ಟಿವಿಗಳಲ್ಲಿ ಸಂಸತ್ ಕಲಾಪ ನಡೆಯುವುದನ್ನು ನೋಡಿ ತಿಳಿಯಬೇಕಾಗುತ್ತಿತ್ತು. ಆದರೀಗ ನೇರವಾಗಿ ನೋಡಿ ತಿಳಿದುಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ ಎಂದರು.

ಬಹುತೇಕ ಕಾನೂನುಗಳು ಚರ್ಚೆಯಾಗದೆ ಅಂಗೀಕಾರವಾಗುತ್ತಿವೆ. ಹಾಗಾಗಿ ಚರ್ಚೆಯಾದ ನಂತರವಷ್ಟೇ ಕಾನೂನುಗಳು ಅಂಗೀಕಾರವಾದರೆ ಉತ್ತಮ. ಆದರೆ, ಬಲ ಪ್ರಯೋಗ ಹಾಗೂ ಬಹುಮತದ ಆಧಾರವೇ ಮುಖ್ಯವಾಗುತ್ತಿದೆ. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಂಸತ್ ಅಣಕು ಸ್ಪರ್ಧೆಯು ಮಾದರಿಯಾಗಿದೆ. ಇದರಿಂದ ಸಾರ್ವಜನಿಕರಿಗೆ ಸಂಸತ್ ನಲ್ಲಿ ನಡೆಯುವ ಕಲಾಪ ಹೇಗಿರುತ್ತದೆ ಎಂಬುದು ಅರ್ಥವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಂಸತ್ ಅಣಕು ಪ್ರದರ್ಶನದಲ್ಲಿ ಮೌಢ್ಯಪ್ರತಿಬಂಧಕ ಮಸೂದೆಗೆ ಒಪ್ಪಿಗೆ ಸಿಗಲಿಲ್ಲ. ಅದೇ ರೀತಿ ಹಿಂದೆ ತಾವು ಮಂಡಿಸಿದ ಮೌಢ್ಯ ಪ್ರತಿಬಂಧಕ ಮಸೂದೆಗೆ ಯಶಸ್ಸು ಸಿಗಲಿಲ್ಲ ಎಂದು ಸಮಾರಂಭದಲ್ಲಿ ನಗೆ ಚಟಾಕಿ ಹರಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ ಸೇಠ್, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಎಸ್ .ಬಿ.ಗುಂಜಿಗಾವಿ ಹಾಗೂ ಕಾನೂನು ಇಲಾಖೆಯ ನಟರಾಜ್ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com