
ಬೆಂಗಳೂರು: ಮಲಗಿರುವ ಸರ್ಕಾರ ಈಗಲಾದರೂ ಮೇಲೆದ್ದು ಕೆರೆ ಒತ್ತುವರಿ ತೆರವು ಮಾಡಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ದಲ್ಲಿದ್ದ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸರ್ಕಾರ ಈಗಲಾದರೂ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮತ್ತಷ್ಟು ಭೂ ಒತ್ತುವರಿಯಾಗಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಹೇಳಿದರು.
ಹಣ ಚೆಲ್ಲುವವರು ಒತ್ತುವರಿ ಮಾಡಿ ಹಣ ಮಾಡುತ್ತಿದ್ದಾರೆ. ಅವರ ಅಕ್ರಮಗಳನ್ನು ಕಂಡು ಹಿಡಿಯಲು ತಹಸೀಲ್ದಾರ್‍ಗಳೇ ಸಾಕು. ಸಂಬಂಧಪಟ್ಟ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿ ಸರ್ವೇ ಮಾಡಿಸಿದರೆ ತಪ್ಪಿತಸ್ಥರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಕೆರೆಗಳ ಒತ್ತುವರಿ ಮತ್ತು ಸಂರಕ್ಷಣಾ ಸಮಿತಿಯು ವರದಿ ಬಹಿರಂಗಗೊಳಿಸಿ ಚರ್ಚೆಯಾಗುತ್ತಿದ್ದರು ಮಂತ್ರಿಗಳು ಸುಮ್ಮನಿರುವುದು ಸರ್ಕಾರದ ನಿದ್ರಾವಸ್ತೆಗೆ ಹಿಡಿದ ಕನ್ನಡಿಯಾಗಿದೆ ಎಂದರು. ಬಿಡಿಎ ವಿರುದ್ಧ ಕ್ರಮ ಜರುಗಿಸಲಿ: ಬಿಡಿಎ ಕೆರೆ ಒತ್ತುವರಿ ಮಾಡಿ ನಿರ್ಮಿಸಿರುವ ಬಡಾವಣೆಯಲ್ಲಿ ತಮ್ಮದು ನಿವೇಶನವಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್, ಬಿಡಿಎ ನಮಗೆ ನಿವೇಶನ ನೀಡಿದೆ ಎಂದರೆ ಅದು ಕಾನೂನು ಬದ್ಧವೆ ಆಗಿರುತ್ತದೆ. ಆದರೆ ಕೆರೆ ಒತ್ತುವರಿ ಮಾಡಿ ನಿವೇಶನ ಮಾಡಿರುವುದು ಅದರ ತಪ್ಪಾಗುತ್ತದೆ.
ಕಾನೂನು ತೆಗೆದುಕೊಳ್ಳುವ ತಿರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಲು ಸರ್ಕಾರ ಧೈರ್ಯ ತೋರಬೇಕು. ಸರ್ಕಾರಿ ಸಂಸ್ಥೆಗಳೇ ಕೆರೆ ಒತ್ತುವರಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಸಾವಿರಾರು ಕೆರೆಗಳ ಒತ್ತುವರಿ ಸಂಬಂಧಿಸಿದಂತೆ ರಚನೆಯಾಗಿರುವ ಸದನ ಸಮಿತಿಯು ವಿಧಾನ ಮಂಡಲದ ಗಮನಕ್ಕೆ ತಾರದೆ ವರದಿ ಬಹಿರಂಗೊಳಿಸಿದ್ದು, ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೆರೆಗಳ ಒತ್ತುವರಿ ಈ ಮಟ್ಟಿಗೆ ನಡೆಯುತ್ತಿದ್ದರೂ ನೀರಾವರಿ ಸಚಿವರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು.
ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿರುವ ಒಂದೇ ಒಂದು ಪ್ರಕರಣ ನಮ್ಮ ಮುಂದಿಲ್ಲ. ಈ ಅವ್ಯವಸ್ಥೆ ತುಂಬಿ ತುಳುಕುತ್ತಿದ್ದರೂ ಪಾರದರ್ಶಕ ಆಡಳಿತ ನಡೆಸುತ್ತಿದ್ದೇವೆ ಎನ್ನುವವರು ಮತ್ತೊಮ್ಮೆ ಯೋಚಿಸಬೇಕು. ರಾಜ್ಯದ 136 ತಾಲೂಕುಗಳಲ್ಲಿ ಬರ ವ್ಯಾಪಿಸಿದ್ದು, ಸಚಿವರು ಪ್ರತಿ ತಾಲೂಕಿಗೂ ಭೇಟಿ ನೀಡಿ ಪೂರ್ವ ತಯಾರಿ ನಡೆಸಿಕೊಳ್ಳಬೇಕು ಎಂದು ಸ್ಪೀಕರ್ ಒತ್ತಾಯಿಸಿದರು.
Advertisement