ಆಟೋ ಚಾಲಕರಿಗೆ ಏಕಿಲ್ಲ ಸೀಟ್ ಬೆಲ್ಟ್?

ಆಟೋ ರಿಕ್ಷಾಗಳನ್ನು ಚಾಲಕರು ನಗರದಲ್ಲಿ ಮನಸೋ ಇಚ್ಛೆ ಓಡಿಸುತ್ತಿದ್ದರೂ, ಅವರಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡುವುದಕ್ಕೆ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಆಟೋ ರಿಕ್ಷಾಗಳನ್ನು ಚಾಲಕರು ನಗರದಲ್ಲಿ ಮನಸೋ ಇಚ್ಛೆ ಓಡಿಸುತ್ತಿದ್ದರೂ, ಅವರಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡುವುದಕ್ಕೆ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಗೆ
ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಆಟೋ ರಿಕ್ಷಾಗಳಲ್ಲಿ ಜನರನ್ನು ತುಂಬಿದ್ದಾರೋ? ಇಲ್ಲವೇ ಸರಕನ್ನು ತುಂಬಿದ್ದಾರೋ ಎಂಬುದೇ ಗೊತ್ತಾಗದಂತೆ ಚಾಲನೆ ಮಾಡುತ್ತಾರೆ. ಒಂದೇ ಪರವಾನಗಿ ಪಡೆದು ಮೂರು ನಾಲ್ಕು ಆಟೋಗಳನ್ನು ಓಡಿಸಿರುತ್ತಾರೆ. ಆದರೆ, ಪೊಲೀಸರು ಅವರಿಂದ ಹಣವನ್ನು ಪಡೆದು ಬಿಟ್ಟುಬಿಡುತ್ತಿದ್ದಾರೆ ಎಂದು ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ರಸ್ತೆಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ, ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಅಪಘಾತ ಉಂಟಾದ ಸಂದರ್ಭಗಳಲ್ಲಿ ಗಾಯಾಳುಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುವುದಕ್ಕಾಗಿ ಪ್ರಮುಖ ರಸ್ತೆಗಳಲ್ಲಿ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ಇದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ನಕಲಿ ಚಾಲನಾ ಪರವಾನಗಿ ಬಳಸಿ ಅಪಘಾತಕ್ಕೆ ಕಾರಣವಾಗಿದ್ದ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪ್ರಯಾಣಿಕರಿಗಾಗಿಯೇ ಮೀಸಲಿಟ್ಟ ವಾಹನಗಳಲ್ಲಿ ಜನರನ್ನು ಮಾತ್ರ ಸಾಗಣೆ ಮಾಡಬೇಕು. ಆದರೆ, ಸರಕುಗಳನ್ನು ತುಂಬಿಕೊಂಡು ಹೋಗುತ್ತಿದ್ದು, ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಆಟೋಗಳಿಗಾಗಿ ಪ್ರತ್ಯೇಕ ರಸ್ತೆಯನ್ನು ನಿಗದಿಪಡಿಸಿದ್ದರೂ, ಯಾವೊಬ್ಬ ಆಟೋ ಚಾಲಕನೂ ಈ ನಿಯಮವನ್ನು ಪಾಲಿಸುತ್ತಿಲ್ಲ. ಪಾದಚಾರಿ ಮಾರ್ಗವನ್ನೂ ಬಿಡಲ್ಲ: ದ್ವಿಚಕ್ರ ವಾಹನಗಳ ಮೇಲೆ ಪಿಜ್ಜಾ, ಬರ್ಗರ್ ಪೆಟ್ಟಿಗೆಗಳನ್ನಿಟ್ಟುಕೊಂಡು ಪಾದಚಾರಿಗಳ ರಸ್ತೆಗಳ ಮೇಲೆ ಚಲಾಯಿಸುತ್ತಾರೆ. ಇದರಿಂದಾಗಿ ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಹೀಗಾಗಿ, ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ  ಸಭೆ ನಡೆಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ನ್ಯಾಯ ಪೀಠ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಹೈಕೋರ್ಟ್ ಹೇಳಿದ್ದೇನು?

  • ಆಟೋ ರಿಕ್ಷಾಗಳಲ್ಲಿ ಜನರನ್ನು ತುಂಬಿದ್ದಾರೋ? ಇಲ್ಲವೇ ಸರಕನ್ನು ತುಂಬಿದ್ದಾರೋ?
  • ಒಂದೇ ಪರವಾನಗಿ ಪಡೆದು ಮೂರ್ನಾಲ್ಕು ಆಟೋ ಓಡಿಸಿದರೂ ಕ್ರಮ ಏಕಿಲ್ಲ?
  • ಪೊಲೀಸರು ಆಟೋ ಚಾಲಕರಿಂದ ಹಣವನ್ನು ಪಡೆದು ಬಿಟ್ಟುಬಿಡುತ್ತಿದ್ದಾರೆ; ಕಿಡಿ
  • ಬೈಕ್‍ಗಳ ಮೇಲೆ ಪಿಜ್ಜಾ, ಬರ್ಗರ್ ಪೆಟ್ಟಿಗೆ ಇಟ್ಟುಕೊಂಡು ಪಾದಚಾರಿ ರಸ್ತೆ ಮೇಲೆ ಚಲಾಯಿಸುತ್ತಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com