ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸ ವಿಲೇವಾರಿ ಜವಾಬ್ದಾರಿಯನ್ನು ಆರೋಗ್ಯ ಮತ್ತು ಘನತಾಜ್ಯ ವಿಭಾಗಕ್ಕೆ ವಹಿಸಿ ಪಾಲಿಕೆ ಆಯುಕ್ತ ಜಿ. ಕುಮಾರನಾಯಕ್ ಆದೇಶಿಸಿದ್ದಾರೆ.
ಘನತಾಜ್ಯ ನಿರ್ವಹಣೆಗೆ ಪ್ರತ್ಯೇಕ ಎಂಜಿನಿಯರ್‍ಗಳು ಇಲ್ಲದಿರುವುದರಿಂದ ಸಮರ್ಪಕವಾಗಿ ಕಸವನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಪರಿಸರ ಘಟಕವನ್ನು ಸೃಜಿಸಿದ್ದರೂ ಕಸದ ಸಮಸ್ಯೆ ಕಡಿಮೆಯಾಗಿರಲಿಲ್ಲ. ಹೀಗಾಗಿ ಘನತಾಜ್ಯ ಮತ್ತು ಆರೋಗ್ಯ ವಿಭಾಗ ಜೊತೆಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.
ಕಿರಿಯ ಆರೋಗ್ಯ ಪರಿವೀಕ್ಷಕರಿಂದ ವಲಯದ ಮುಖ್ಯ ಆರೋಗ್ಯಾಧಿಕಾರಿಗಳವರೆಗೆ ಎಲ್ಲರೂ ತಮ್ಮ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು.
ಕಿರಿಯ ಆರೋಗ್ಯ ನಿರೀಕ್ಷಕರು ನಿತ್ಯ ಬೆಳಗ್ಗೆ 6.30ರಿಂದ ಮಧ್ಯಾಹ್ನ 2.30ರವರೆಗೆ ತಮ್ಮ ವ್ಯಾಪ್ತಿಯ ವಾರ್ಡ್ ಗಳಲ್ಲಿ ಹಾಜರಿದ್ದು, ಕಸ ಸಾಗಿಸುವ ಲಾರಿಗಳು, ತಳ್ಳು ಗಾಡಿಗಳ ಸಂಖ್ಯೆ, ಪೌರ ಕಾರ್ಮಿಕರ ಹಾಜರಾತಿ ತೆಗೆದುಕೊಳ್ಳಬೇಕು. ಮುಖ್ಯವಾಗಿ ಬೀದಿಗಳಲ್ಲಿ ಸ್ವಚ್ಛತೆ ಕಾಪಾಡಿ, ಸಾಧ್ಯವಾದಷ್ಟು ಬ್ಲಾಕ್ ಸ್ಪಾಟ್ ಗಳನ್ನು ಮುಕ್ತವಾಗಿಸಬೇಕು ಎಂದು ಸೂಚಿಸಿದ್ದಾರೆ.
ಹಿರಿಯ ಆರೋಗ್ಯ ನಿರೀಕ್ಷಕರು ಸಗಟು ಪ್ರಮಾಣದಲ್ಲಿ ಉತ್ಪಾದನೆಯಾಗುವ ಕಸ ಸಮರ್ಪಕವಾಗಿ ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
Advertisement