
ಬೆಂಗಳೂರು: ಸ್ತ್ರೀಯರನ್ನು ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಡುವ ಜತೆಗೆ ಅವರ ಏಳಿಗೆಯನ್ನು ಬೆಂಬಲಿಸಬೇಕು. ಅವರಿಗೂ ಗೌರವ, ಸಹಕಾರ ನೀಡಬೇಕು ಎಂದು
ರಾಜ್ಯಪಾಲ ವಜುಭಾಯ್ ವಾಲಾ ತಿಳಿಸಿದರು.
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಏರ್ಪಡಿಸಿದ್ದ `ದಕ್ಷಿಣ ಭಾರತದ ವಿಜ್ಞಾನ ಹಬ್ಬ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಂಡು ಮಗುವಿಗಿಂತ ಹೆಣ್ಣು ಮಗುವಿಗೆ ಹೆಚ್ಚಿನ ಪ್ರೋತ್ಸಾಹ, ಕಾಳಜಿ ತೋರಿಸಿ. ಹೆಣ್ಣು ಮಕ್ಕಳಲ್ಲಿ ಬುದ್ಧಿವಂತಿಕೆ ಹೆಚ್ಚಿದೆ. ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಿರುವುದು ಖುಷಿಯ ಸಂಗತಿ. ಪ್ರಸ್ತುತ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡಿದ್ದಾರೆ.
ಪ್ರತಿಯೊಬ್ಬರಲ್ಲೂ ಭಿನ್ನರೀತಿಯ ಸೃಜನಾತ್ಮಕ, ಕ್ರಿಯಾತ್ಮಕತೆ, ಇಚ್ಛಾಶಕ್ತಿ ಅಡಗಿರುತ್ತದೆ. ಅಂತಹ ಆಸಕ್ತಿಗೆ ನೀರೆರೆಯಬೇಕು. ಯುವಜನರಿಗೆ ಎಲ್ಲ ರೀತಿಯ ಪ್ರೋತ್ಸಾಹ, ಬೆಂಬಲ ದೊರೆತರೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರಿಗೆ ಬೆಂಬಲ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು.
ದೇಶಿಯ ವಸ್ತುಗಳಿಗೆ ಪ್ರೋತ್ಸಾಹ ನೀಡಬೇಕು. ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಬಳಕೆ ಮಾಡುವುದರಿಂದ ಹಣದ ಹರಿವು ತಪ್ಪುತ್ತದೆ. ನಮ್ಮಲ್ಲಿನ ಸಂಪನ್ಮೂಲಗಳ ಸದುಪಯೋಗವಾಗುತ್ತದೆ. ಅಲ್ಲದೇ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು. ಅಮೆರಿಕ, ರಷ್ಯಾಗಳಿಗಿಂತ ಮಂಗಳಯಾನದಂತಹ ಸಂಶೋಧನೆ ಕೈಗೊಂಡು ವೈಜ್ಞಾನಿಕವಾಗಿ ನಾವು ಸಾಧನೆಗೈದಿದ್ದೇವೆ ಎಂದರು.
ಎನ್‍ಸಿಎಸ್‍ಎಂನ ನಿರ್ದೇಶಕ ಜಿ.ಎಸ್. ರೂಟೆಲಾ ಮಾತನಾಡಿ, ಯಾವುದೇ ಸಮಸ್ಯೆ ಬಗ್ಗೆ ಚಿಂತಿಸುವ ಗುಣ ಬೆಳೆಸಿಕೊಳ್ಳಬೇಕು. ಅಲ್ಲದೇ ಅದನ್ನು ನಿವಾರಿಸುವ ಹಾದಿಯಲ್ಲಿ ಕಾರ್ಯಪ್ರವೃತ್ತರಾದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದರು. ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಪ್ರೊ.ರಾಹುಲ್ ಪಂಡಿತ್ ಮಾತನಾಡಿ, ವೈಜ್ಞಾನಿಕ ಯೋಜನೆಗಳು ವಿದ್ಯಾರ್ಥಿಗಳಲ್ಲಿ ದೃಢತೆ, ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಅಲ್ಲದೇ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Advertisement