ನಿಜಾಮಾಬಾದ್ ನಲ್ಲಿ ಇವಿಎಂ ಇಲ್ಲ, ಬ್ಯಾಲೆಟ್ ಪೇಪರ್ ಮೂಲಕ ಮತದಾನ, ಕಾರಣ ಏನು ಗೊತ್ತಾ?

ಇವಿಎಂ ಅಥವಾ ಮತಯಂತ್ರಗಳ ಕುರಿತ ಚರ್ಚೆ ನಡುವೆಯೇ ಯಾವುದೇ ಕಾರಣಕ್ಕೂ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದ ಚುನಾವಣಾ ಆಯೋಗವೇ ಒಂದು ಕ್ಷೇತ್ರದಲ್ಲಿ ಬ್ಯಾಲೆಟ್ ಪೇಪರ್ ಮತದಾನಕ್ಕೆ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ಇವಿಎಂ ಅಥವ ಮತಯಂತ್ರಗಳ ಕುರಿತ ಚರ್ಚೆ ನಡುವೆಯೇ ಯಾವುದೇ ಕಾರಣಕ್ಕೂ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದ ಚುನಾವಣಾ ಆಯೋಗವೇ ಒಂದು ಕ್ಷೇತ್ರದಲ್ಲಿ ಬ್ಯಾಲೆಟ್ ಪೇಪರ್ ಮತದಾನಕ್ಕೆ ಮುಂದಾಗಿದೆ.
ಹೌದು.. ತೆಲಂಗಾಣದ ನಿಜಾಮಾಬಾದ್ ನಲ್ಲಿ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಮತದಾನಕ್ಕೆ ಸಿದ್ಧವಾಗುತ್ತಿದೆ. ಅಚ್ಚರಿ ಎಂದರೆ ಇದೇ ಕ್ಷೇತ್ರದಿಂದಲೇ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಅವರೂ ಕೂಡ ಸ್ಪರ್ಧೆ ಮಾಡುತ್ತಿದ್ದು, ಇಂತಹ ಹೈವೋಲ್ಟೇಜ್ ಕ್ಷೇತ್ರದಲ್ಲೇಕೆ ಆಯೋಗ ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನಕ್ಕೆ ಮುಂದಾಗಿದೆ..?
ಈ ಪ್ರಶ್ನೆಗೆ ಉತ್ತರ ಇಲ್ಲಿನ ಅಭ್ಯರ್ಥಿಗಳು.. ಅರೆ ಇಲ್ಲಿನ ಅಭ್ಯರ್ಥಿಗಳೇನೂ ಬ್ಯಾಲೆಟ್ ಪೇಪರ್ ಮತದಾನಕ್ಕೆ ಆಗ್ರಹಿಸಿಲ್ಲ. ಆದರೆ ಈ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಇವಿಎಂ ಮತಯಂತ್ರಕ್ಕೆ ಸೇರಿಸಲಾಗದೇ ಅಸಾಹಾಯಕ ಸ್ಥಿತಿಯಿಂದಾಗಿ ಆಯೋಗ ಬ್ಯಾಲೆಟ್ ಪೇಪರ್ ಮತದಾನಕ್ಕೆ ಮೊರೆ ಹೋಗಿದೆ. ಆಯೋಗ ನೀಡಿರುವ ಮಾಹಿತಿಯನ್ವಯ ಈ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಬರೊಬ್ಬರಿ 185 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 170ಮಂದಿ ರೈತರಂತೆ..
ತೆಲಂಗಾಣದ ಒಟ್ಟು 17 ಲೋಕಸಭಾ ಕ್ಷೇತ್ರಗಳಿಂದ ಚುನಾವಣಾ ಆಯೋಗಕ್ಕೆ ಒಟ್ಟು 443 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ ನಿಜಾಮಾಬಾದ್ ವೊಂದರಲ್ಲೇ ಗರಿಷ್ಠ ಅಂದರೆ 185 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ 185 ನಾಮಪತ್ರಗಳ ಪೈಕಿ 170 ಮಂದಿ ಅಭ್ಯರ್ಥಿಗಳು ರೈತರಾಗಿದ್ದು, ಸರ್ಕಾರದ ಮೇಲಿನ ಕೋಪದಿಂದ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ಅರಿಶಿಣ ಮತ್ತು ಕೆಂಪು ಜೋಳ ಬೆಳೆಗಳಿಗೆ ಸರ್ಕಾರ ಈ ಹಿಂದೆ ಬೆಂಬಲ ಬೆಲೆ ಘೋಷಣೆ ಮಾಡಿತ್ತು. ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಸಿಎಂ ಪುತ್ರಿಯ ವಿರುದ್ದವೇ ಸ್ಪರ್ಧೆ ಮಾಡುವ ಎಚ್ಚರಿಕೆ ಕೂಡ ನೀಡಿದ್ದರು. ಇದೀಗ ಅದರಂತೆ ನಿಜಾಮಾಬಾದ್ ನಿಂದ ಸ್ಪರ್ಧೆ ಮಾಡುತ್ತಿದ್ದು, ರೈತರ ಪ್ರತಿಭಟನೆಗೆ ತೆಲಂಗಾಣ ಸರ್ಕಾರದೊಂದಿಗೆ ಚುನಾವಣಾ ಆಯೋಗ ಕೂಡ ಬೆ್ಚ್ಚಿಬಿದ್ದಿದೆ.
ಇವಿಎಂ ನಲ್ಲಿ 185 ಅಭ್ಯರ್ಥಿಗಳ ಹೆಸರು ಜೋಡಿಸಲಾಗದೇ ಅನಿವಾರ್ಯವಾಗಿ ಬ್ಯಾಲೆಟ್ ಪೇಪರ್ ಮೊರೆ ಹೋಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ತೆಲಂಗಾಣ ಚುನಾವಣಾ ಅಧಿಕಾರಿ ಕುಮಾರ್ ಅವರು, ಬ್ಯಾಲೆಟ್ ಪೇಪರ್ ಶೈಲಿ ಮತ್ತು ವಿನ್ಯಾಸದ ಕುರಿತು ಶೀಘ್ರ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಅಂತೆಯೇ ಈ ಕುರಿತು ಜನರಲ್ಲಿ ಜಾಗೃತಿ ಅಭಿಯಾನ ಕೂಡ ನಡೆಸುತ್ತೇವೆ ಎಂದು ಹೇಳಿದ್ದಾರೆ.
ದೇಶದ ಚುನಾವಣಾ ಇತಿಹಾಸದಲ್ಲಿ ದಶಕಗಳಿಂದಲೂ ಇವಿಎಂ ಮತಯಂತ್ರಗಳನ್ನು ಬಳಕೆ ಮಾಡುತ್ತಿದ್ದು, ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದ ಕಾರಣದಿಂದ ಬ್ಯಾಲೆಟ್ ಪೇಪರ್ ಮೊರೆ ಹೋದ ಪ್ರಕರಣ ತೀರಾ ಅಪರೂಪ, ಈ ಹಿಂದೆ 1996ರಲ್ಲಿ ನಲ್ಗೊಂಡ ಲೋಕಸಭಾ ಕ್ಷೇತ್ರದಿಂದ 480 ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಈ ವೇಳೆ ಅಲ್ಲಿ ಮತದಾನಕ್ಕೆ ಬ್ಯಾಲೆಟ್ ಪೇಪರ್ ಮೊರೆ ಹೋಗಲಾಗಿತ್ತು. ಆ ಬಳಿಕ 2010ರ ಆಗಸ್ಟ್ ನಲ್ಲಿ ವಿಧಾನಸಭೆ ಉಪ ಚುನಾವಣೆ ವೇಳೆಯಲ್ಲಿ 648 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಪೈಕಿ 145 ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡು, ಅಂತಿಮವಾಗಿ 503 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಆಗಲೂ ಬ್ಯಾಲೆಟ್ ಪೇಪರ್ ಮೊರೆ ಹೋಗಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com