'ದಂಡಪಿಂಡಗಳು': ಮತದಾನ ಮಾಡದೇ ಪ್ರವಾಸಕ್ಕೆ ಬಂದವರಿಗೆ ವ್ಯಂಗ್ಯಭರಿತ ಸನ್ಮಾನ

ದೇಶಾದ್ಯಂತ ಜನರು ನಿನ್ನೆ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸುತ್ತಿದ್ದರೆ, ಇತ್ತೆ ಕೆಲ ಮಂದಿ ಮತದಾನ ಮಾಡದೇ ಪ್ರವಾಸಕ್ಕೆ ತೆರಳಿ ವಿಶೇಷ ಸನ್ಮಾನ ಸ್ವೀಕರಿಸಿದ್ದಾರೆ.
ಮತದಾನ ಮಾಡದೇ ಪ್ರವಾಸಕ್ಕೆ ಬಂದವರಿಗೆ ವ್ಯಂಗ್ಯಭರಿತ ಸನ್ಮಾನ
ಮತದಾನ ಮಾಡದೇ ಪ್ರವಾಸಕ್ಕೆ ಬಂದವರಿಗೆ ವ್ಯಂಗ್ಯಭರಿತ ಸನ್ಮಾನ
ಚಿಕ್ಕಮಗಳೂರು: ದೇಶಾದ್ಯಂತ ಜನರು ನಿನ್ನೆ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸುತ್ತಿದ್ದರೆ, ಇತ್ತೆ ಕೆಲ ಮಂದಿ ಮತದಾನ ಮಾಡದೇ ಪ್ರವಾಸಕ್ಕೆ ತೆರಳಿ ವಿಶೇಷ ಸನ್ಮಾನ ಸ್ವೀಕರಿಸಿದ್ದಾರೆ.
ಹೌದು... ಪ್ರಜಾತಂತ್ರ ಹಬ್ಬದಲ್ಲಿ ಮತ ಚಲಾಯಿಸುವುದು ಬಿಟ್ಟು ಮೋಜು ಮಸ್ತಿಗೆ ಆಗಮಿಸಿದ್ದ ಪ್ರವಾಸಿಗರಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡು ವ್ಯಂಗ್ಯಭರಿತ ಸನ್ಮಾನ ಮಾಡಿದ್ದಾರೆ. 
ಮತದಾನ ದಿನವೇ ಜಿಲ್ಲೆಗೆ 250ಕ್ಕಿಂತ ಹೆಚ್ಚು ಕಾರುಗಳು ಬೆಂಗಳೂರಿನಿಂದ ಬಂದಿದ್ದವು. ನಗರದ ಮುಳ್ಳಯ್ಯನಗಿರಿ ಕಡೆ ಸಾಲುಗಟ್ಟಿ ಹೋಗುತ್ತಿದ್ದ ಕಾರುಗಳಲ್ಲಿದ್ದ ಪ್ರಯಾಣಿಕರಿಗೆ ಶಾಲು ಹಿಡಿದು, ಪೇಪರ್ ಹಾರ ಹಿಡಿದು ಸನ್ಮಾನ ಮಾಡಲು ಸಂಘದವರು ಬಂದಾಗ ಶಾಕ್ ಆದರು. ನಮಗೇಕೆ ಸನ್ಮಾನ, ಶಾಲು ಎಂದು ಪ್ರಶ್ನಿಸುತ್ತಿದ್ದಂತೆ, ನೀವು ವೋಟು ಹಾಕದೆ ಬಂದಿರುವ ಸಾಧನೆ ನೋಡಿ ನಿಮಗೆ ಸನ್ಮಾನ ಮಾಡುತ್ತಿದ್ದೇವೆ ಎಂದಾಗ ಪ್ರವಾಸಿಗರ ಮುಖ ಚಿಕ್ಕದು ಮಾಡಿಕೊಂಡರು. ನಗರದ ಬೇಲೂರು ರಸ್ತೆ, ಮಾಗಡಿ ಚೆಕ್ ಪೋಸ್ಟ್ ಹಾಗೂ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಹೋಗುವ ಕೈಮರದ ಬಳಿ ಪ್ರವಾಸಿಗರ ಕಾರುಗಳನ್ನು ತಡೆದು ಮತದಾನ ಮಾಡಿರುವ ಬಗ್ಗೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ತಪಾಸಣೆ ಅಭಿಯಾನ ಹಮ್ಮಿಕೊಂಡಿತ್ತು. 
ದಿಢೀರ್ ರಸ್ತೆಯಲ್ಲಿ ಮಾಡಿದ ಸನ್ಮಾನ ಸ್ವೀಕರಿಸಲು ಕೆಲವರು ಹಿಂದೇಟು ಹಾಕಿದರು. ಮತ್ತೆ ಕೆಲವರು ತಮ್ಮ ತಪ್ಪಿನ ಅರಿವಾಗಿ ಸನ್ಮಾಕ್ಕೆ ಕೊರಳೊಡ್ಡಿದ್ದರು. ಮತದಾನ ಮಾಡದೆ ಬಂದವರಿಗೆ ಎಟಿಎಂ ಕಾರ್ಡ್, ಆಧಾರ್, ವೋಟರ್ ಐಡಿ ಸೇರಿ ಸರ್ಕಾರದ ಸೌಲಭ್ಯಗಳ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳಿಂದ ತಯಾರಿಸಿದ ಹಾರ ಹಾಕಲಾಗುತ್ತಿತ್ತು. ಜತೆಗೊಂದು ಗುಲಾಬಿ ನೀಡಿ ಮುಂದಿನ ಚುನಾವಣೆಯಲ್ಲಾದರೂ ತಪ್ಪದೆ ಮತದಾನ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು. 
ಇನ್ನು ಮತದಾನ ಬಿಟ್ಟು ಬಂದಿರುವುದು ತಪ್ಪಾಯಿತೆಂದು ಕೆಲವರು ಕ್ಷಮೆ ಕೋರುತ್ತಿದ್ದರು. ಇನ್ನು ಕೆಲವರು ಮತದಾನ ನಮ್ಮಲ್ಲಿ ಕಡ್ಡಾಯವೇನಿಲ್ಲವೆಂದು ಮೊಂಡು ವಾದ ಮಾಡುತ್ತಿದ್ದರು. ಮತ್ತೆ ಕೆಲವರು ಆಂಧ್ರ, ತಮಿಳುನಾಡಿನಿಂದ ಬಂದಿದ್ದೇವೆ ಎನ್ನುತ್ತಿದ್ದರು. ಇನ್ನು ಕೆಲವರು ಉತ್ತರ ಕರ್ನಾಟಕದ ನಗರಗಳ ಹೆಸರು ಹೇಳಿ ತಪಾಸಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಏಪ್ರಿಲ್ 17ರಿಂದಲೇ ರಜೆ ಇರುವುದರಿಂದ ಹಲವರು ಎರಡು ದಿನ ಮೊದಲೆ ಆಗಮಿಸಿ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್​ ಗಳಲ್ಲಿ ವಸತಿ ಬುಕ್ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com