ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಿಜೆಪಿ ಚುನಾವಣಾ ಪ್ರಣಾಳಿಕೆ: ಬೆಂಕಿಯೊಂದಿಗೆ ಸರಸಬೇಡ ಎಂದ ಮೆಹಬೂಬಾ ಮುಫ್ತಿ

ಬಿಜೆಪಿ ಪ್ರಣಾಳಿಕೆಯಲ್ಲಿ ಸಂವಿಧಾನದ ಕಲಂ 370 ಕುರಿತ ಉಲ್ಲೇಖ ಹಿನ್ನಲೆಯಲ್ಲಿ ಕಿಡಿಕಾರಿರುವ ಕಾಶ್ಮೀರ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬೆಂಕಿಯೊಂದಿಗೆ ಸರಸ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ: ಬಿಜೆಪಿ ಪ್ರಣಾಳಿಕೆಯಲ್ಲಿ ಸಂವಿಧಾನದ ಕಲಂ 370 ಕುರಿತ ಉಲ್ಲೇಖ ಹಿನ್ನಲೆಯಲ್ಲಿ ಕಿಡಿಕಾರಿರುವ ಕಾಶ್ಮೀರ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬೆಂಕಿಯೊಂದಿಗೆ ಸರಸ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ಅತ್ತ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ, ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮೆಹಬೂಬ ಮುಫ್ತಿ, 'ನೀವು ಜಮ್ಮು ಮತ್ತು ಕಾಶ್ಮೀರವನ್ನು ಕಲಂ 370ರಿಂದ ತೆಗೆದು ಹಾಕಿದರೆ, ಭಾರತ ನಕ್ಷೆಯಿಂದ ಜಮ್ಮು ಮತ್ತು ಕಾಶ್ಮೀರವನ್ನು ತೆಗೆದು ಹಾಕಿದಂತೆ. ಈ ಕುರಿತು ನಾನು ಈ ಹಿಂದೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದೇನೆ. ಭಾರತ ದೇಶ ಮತ್ತು ಜಮ್ಮು ಮತ್ತು ಕಾಶ್ಮೀರದೊಂದಿಗೆ ಕಲಂ 370 ಸ್ನೇಹ ಸಂಪರ್ಕ ಸೇತುವೆಯಂತಿದ್ದು, ಅದನ್ನು ತೆಗೆದು ಹಾಕಿದ್ದೇ ಆದರೆ ಕಣಿವೆ ರಾಜ್ಯದ ಮೇಲೆ ಭಾರತ ತನ್ನ ಸಾರ್ವಭೌಮತ್ವವನ್ನು ಕಳೆದುಕೊಂಡಂತೆಯೇ.. ಆಗ ಕಾಶ್ಮೀರ ಭಾರತ ಆಕ್ರಮಿತ ಪ್ರದೇಶವಾಗುತ್ತದೆಯೇ ಹೊರತು ಭಾರತದ ಭಾಗವಾಗಿ ಉಳಿದಿರುವುದಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಕಣಿವೆ ರಾಜ್ಯ ಬೇಗುದಿಯಲ್ಲಿ ಬೇಯುತ್ತಿದ್ದು, ಪುಲ್ವಾಮ ಉಗ್ರ ದಾಳಿ ಇದಕ್ಕೊಂದು ನಿದರ್ಶನ ಅಷ್ಟೇ. ಬಿಜೆಪಿ ಕಲಂ 370 ರದ್ದುಗೊಳಿಸುವಂತಹ ಅನಗತ್ಯ ಹೇಳಿಕೆಗಳನ್ನು ನೀಡುವುದನ್ನು ಈ ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಇಡೀ ಜಮ್ಮು ಮತ್ತು ಕಾಶ್ಮೀರ ಹೊತ್ತಿ ಉರಿಯುತ್ತದೆ. ಹೀಗಾಗಿ ಬೆಂಕಿಯೊಂದಿಗೆ ಸರಸ ಬೇಡ. ನೀವು ಸಣ್ಣ ಕಿಡಿ ಹೊತ್ತಿಸಿದರೂ ಎಲ್ಲವೂ ಸುಟ್ಟು ಬೂದಿಯಾಗುತ್ತದೆ ಎಂದು ಮುಪ್ತಿ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಮುಫ್ತಿ ಮೆಹಬೂಬಾ, ಆಡಳಿತಾತ್ಮಕವಾಗಿ ಬಿಜೆಪಿ ವಿಫಲವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿಭಾಯಿಸುವಲ್ಲಿ ಬಿಜೆಪಿ ವಿಫಲವಾಗಿದ್ದು, ರೈತರ ಸಮಸ್ಯೆಗಳನ್ನೂ ಮೋದಿ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ನಿತ್ಯ ಬಳಕೆಯ ಧಾನ್ಯಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಈ ವಿಚಾರಗಳನ್ನು ಮರೆಮಾಚಿ ಬಿಜೆಪಿ ಕಲಂ 370 ಮತ್ತು ಸೇನೆಯ ವಿಚಾರಗಳನ್ನು ಮತಬೇಟೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com