ಒಡಿಶಾದಲ್ಲಿ ನಕ್ಸಲರ ಅಟ್ಟಹಾಸ: ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ!

ಲೋಕಸಭಾ ಚುನಾವಣೆ ನಿಮಿತ್ತ ದೇಶಾದ್ಯಂತ 2ನೇ ಹಂತದ ಮತದಾನಕ್ಕೆ ಸಜ್ಜಾಗಿರುವಂತೆಯೇ ಅತ್ತ ಒಡಿಶಾದಲ್ಲಿ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದು, ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಭುವನೇಶ್ವರ್: ಲೋಕಸಭಾ ಚುನಾವಣೆ ನಿಮಿತ್ತ ದೇಶಾದ್ಯಂತ 2ನೇ ಹಂತದ ಮತದಾನಕ್ಕೆ ಸಜ್ಜಾಗಿರುವಂತೆಯೇ ಅತ್ತ ಒಡಿಶಾದಲ್ಲಿ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದು, ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಚುನಾವಣಾ ಕರ್ತವ್ಯ ತೆರಳಿದ್ದ ಮಹಿಳಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ನಡೆದಿದ್ದು, ಸಂಜುಕ್ತಾ ಕಂದಮಾಲ್ ಹತ್ಯೆಗೀಡಾದ ಚುನಾವಣಾ ಅಧಿಕಾರಿ ಎಂದು ತಿಳಿದುಬಂದಿದೆ.
ಬೆಳಗಿನ ಜಾವ ಅಧಿಕಾರಿ ಮನೆಯಿಂದ ಚುನಾವಣಾ ಮತಗಟ್ಟೆಗೆ ತೆರಳುತ್ತಿದ್ದ ವೇಳೆ ಅವರ ವಾಹನವನ್ನು ಅಡ್ಡಗಟ್ಟಿದ ಬಂದೂಕುದಾರಿ ನಕ್ಸಲರು ವಾಹನಕ್ಕೆ ಬೆಂಕಿ ಹಚ್ಚಿ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. 
ಚುನಾವಣೆಯನ್ನು ನಕ್ಸಲರು ಬಹಿಷ್ಕರಿಸಿದ್ದು, ಕರಪತ್ರ ಬ್ಯಾನರ್ ಗಳನ್ನು ಅಂಟಿಸಿ ಚುನಾವಣೆಯನ್ನು ವಿರೋಧಿಸಿದ್ದಾರೆ. ಅಲ್ಲದೆ ಚುನಾವಣಾ ಅಧಿಸೂಚನೆ ಹೊರಬಿದ್ದ ನಂತರ ಈವರೆಗೆ ಒಡಿಶಾದಲ್ಲಿ ಸುಮಾರು 7ಕ್ಕೂ ಹೆಚ್ಚು ಬಾರಿ ಸುಧಾರಿತ ಸ್ಫೋಟಗಳನ್ನು ಬಳಸಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ವರ್ಷ ನವೆಂಬರ್​ 11 ರಂದು ನಡೆಸಲಾಗಿದ್ದ ದಾಳಿಯಲ್ಲಿ ಬಿಎಸ್​ಎಫ್​ನ ಓರ್ವ ಸಬ್​ ಇನ್ಸ್​ಪೆಕ್ಟೆರ್​ ಮೃತಪಟ್ಟಿದ್ದರೆ ಹಲವರು ಗಾಯಗೊಂಡಿದ್ದರು. ಅಲ್ಲದೆ ಏಪ್ರಿಲ್ 9 ರಂದು ಛತ್ತೀಸ್​ಗಢದಲ್ಲೂ ನಕ್ಸಲರು ಬಾಂಬ್ ದಾಳಿ ನಡೆಸುವ ಮೂಲಕ ದಾಂತೇವಾಡದ ಕ್ಷೇತ್ರದ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿ 5 ಜನ ಪೊಲೀಸರನ್ನು ಹತ್ಯೆ ಮಾಡಿದ್ದರು. ಇದೇ ಕಾರಣಕ್ಕೆ ನಕ್ಸಲರ ಹಾವಳಿ ಹೆಚ್ಚಿರುವ ಕಡೆಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆದರೂ, ಭದ್ರತೆಯನ್ನು ಮೀರಿ ಈ ದಾಳಿ ನಡೆದಿರುವುದು ಒಡಿಶಾದಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ನಕ್ಸಲ್​ ಪೀಡಿತ ಒಡಿಶಾ ರಾಜ್ಯದ 21 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೇ ಹಂತದಲ್ಲಿ ಅಸ್ಕಾ, ಬಾರಾಗಡ್, ಬೋಲಂಗೀರ್, ಸುದರ್ ಗಡ್​ ಹಾಗೂ ಕಂಧಮಲ್ ಸೇರಿದಂತೆ ಒಟ್ಟು 5 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಅಲ್ಲದೆ ಒಡಿಶಾ ವಿಧಾನಸಭೆಗೂ ಇದರ ಜೊತೆಯೇ ಚುನಾವಣೆ ನಡೆಸಲಾಗುತ್ತಿದ್ದು, ಈ ಐದು ಲೋಕಸಭಾ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಇಂದೇ ಮತದಾನ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com