ಸಂಗ್ರಹ ಚಿತ್ರ
ದೇಶ
ನೂತನ ಮೋದಿ ಸಂಪುಟಕ್ಕೆ ಅರುಣ್ ಜೇಟ್ಲಿ ಸೇರ್ಪಡೆ ಇಲ್ಲ..?; ಕಾರಣ ಏನು ಗೊತ್ತಾ!
ಯಾವ ಯಾವ ನಾಯಕರನ್ನು ಮೋದಿ ಸರ್ಕಾರದ ಸಂಪುಟಕ್ಕೆ ಸೇರಿಸಬೇಕು ಎಂಬ ಚರ್ಚೆ ನಡೆಯುತ್ತಿರುವಂತೆಯೇ ನೂತನ ಮೋದಿ ಕ್ಯಾಬಿನೆಟ್ ನಿಂದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದು, ನೂತನ ಕ್ಯಾಬಿನೆಟ್ ಗೆ ಯಾವ ಯಾವ ನಾಯಕರನ್ನು ಸೇರಿಸಬೇಕು ಎಂಬ ಚರ್ಚೆ ನಡೆಯುತ್ತಿರುವಂತೆಯೇ ನೂತನ ಮೋದಿ ಕ್ಯಾಬಿನೆಟ್ ನಿಂದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು.. ಮಾಜಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೂತನ ಮೋದಿ ಸರ್ಕಾರದ ಸಂಪುಟದಿಂದ ಹೊರಗುಳಿಯುವ ಸಾಧ್ಯತೆ ಇದ್ದು, ಈ ಕುರಿತು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. ಮೂಲಗಳ ಪ್ರಕಾರ ಕಳೆದ ಆರು ತಿಂಗಳನಿಂದಲೂ ಅರುಣ್ ಜೇಟ್ಲಿ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಸುದೀರ್ಘ ಕಾಲದ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಅವರು ಕಳೆದ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಲಿಲ್ಲ.
ಇದೀಗ ಇದೇ ಅನಾರೋಗ್ಯ ಸಮಸ್ಯೆಯಿಂದಾಗಿ ಅರುಣ್ ಜೇಟ್ಲಿ ಅವರು ಮೋದಿ ಸರ್ಕಾರದ ನೂತನ ಸಂಪುಟದಲ್ಲಿ ತೊಡಗುತ್ತಿಲ್ಲ ಎನ್ನಲಾಗಿದೆ. ಆದರೆ ಬಿಜೆಪಿ ಹಿರಿಯ ನಾಯಕರು ಜೇಟ್ಲಿ ಅವರೂ ಕೂಡ ಮೋದಿ ಸಂಪುಟದಲ್ಲಿ ಇರಬೇಕು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಅರುಣ್ ಜೇಟ್ಲಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ಮೋದಿ ಸಂಪುಟದಲ್ಲಿ ಜೇಟ್ಲಿ ಇರಲ್ಲ: ಬಿಜೆಪಿ ಹಿರಿಯ ನಾಯಕ
ಇನ್ನು ಭಾವಿ ಮೋದಿ ಸಂಪುಟದಿಂದ ದೂರ ಉಳಿಯಲು ಅರುಣ್ ಜೇಟ್ಲಿ ನಿರ್ಧರಿಸಿದ್ದಾರೆ. ಹೀಗಾಗಿ ಮುಂದಿನ ಮೋದಿ ಸಂಪುಟದಲ್ಲಿ ಜೇಟ್ಲಿ ಇರುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಬಿಜೆಪಿ ನಾಯಕರು ರಾಯಿಟರ್ಸ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆ 66 ವರ್ಷದ ಅರುಣ್ ಜೇಟ್ಲಿ, ಕಳೆದ ಮೋದಿ ಸರ್ಕಾರದ ಸಂಪುಟದಲ್ಲಿ ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಜಿಎಸ್ ಟಿ, ನೋಟು ನಿಷೇಧದಂತಹ ಹಲವು ಕ್ಲಿಷ್ಟಕರ ಪರಿಸ್ಥಿತಿಗಳನ್ನು ನಿಭಾಯಿಸಿಕೊಂಡೇ ಜೇಟ್ಲಿ ವಿತ್ತ ಸಚಿವಾಲಯವನ್ನು ನಿರ್ವಹಣೆ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ