ಆಂಧ್ರ ಪ್ರದೇಶ: ಅನಂತಪುರ್ ಜಿಲ್ಲೆಯಲ್ಲಿ ಮತದಾನ ವೇಳೆ ಘರ್ಷಣೆ; ಇಬ್ಬರು ಕಾರ್ಯಕರ್ತರ ಸಾವು, ಮೂವರಿಗೆ ಗಾಯ

ತೆಲುಗು ದೇಶಂ ಪಾರ್ಟಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ಗಂಭೀರ ಗಾಯಗೊಂಡ...

Published: 11th April 2019 12:00 PM  |   Last Updated: 11th April 2019 02:01 AM   |  A+A-


Ihe injured in clash

ಗಲಭೆಯಲ್ಲಿ ಗಾಯಗೊಂಡವರ ಸ್ಥಿತಿ

Posted By : SUD SUD
Source : The New Indian Express
ಅನಂತಪುರ್(ಆಂಧ್ರ ಪ್ರದೇಶ): ತೆಲುಗು ದೇಶಂ ಪಾರ್ಟಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರು ಮೃತಪಟ್ಟಿದ್ದು ಮೂವರಿಗೆ ಗಾಯವಾಗಿದೆ.

ಅನಂತಪುರ ಜಿಲ್ಲೆಯ ತಡಿಪತ್ರಿ ವಿಧಾನಸಭಾ ಕ್ಷೇತ್ರದ ವೀರಪುರಂ ಗ್ರಾಮದಲ್ಲಿ ಟಿಡಿಪಿ ಮತ್ತು ವೈಎಸ್ಆರ್ ಸಿಪಿ ಕಾರ್ಯಕರ್ತರ ನಡುವೆ ಇಂದು ಬೆಳಗ್ಗೆ ಮತದಾನ ಆರಂಭವಾದ ನಂತರ ತೀವ್ರ ಗಲಭೆ ನಡೆಯಿತು.

ಪುತ್ತಲಪಟ್ಟು ಮೀಸಲು ಕ್ಷೇತ್ರದ ತೊಡಿಪತ್ರಿಯಲ್ಲಿ ಮತದಾನದ ವೇಳೆ ಟಿಡಿಪಿ ಮತ್ತು ವೈಎಸ್​ಆರ್​ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಮತದಾನದ ವಿಷಯವಾಗಿ ಹೊಡೆದಾಟ ಆರಂಭವಾಗಿ, ಎರಡು ಪಕ್ಷದ ತಲಾ ಓರ್ವ ಕಾರ್ಯಕರ್ತರು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಸತ್ತೆನಪಲ್ಲೆ ಕ್ಷೇತ್ರದ ಇನುಮೆಟ್ಲ ಗ್ರಾಮದಲ್ಲಿ ವೈಎಸ್ಆರ್ ಸಿಪಿ ಕಾರ್ಯಕರ್ತರ ದಾಳಿಯಿಂದಾಗಿ ಸಭಾಪತಿ ಡಾ ಕೊಡೆಲಾ ಶಿವಪ್ರಸಾದ್ ರಾವ್ ತಲೆಸುತ್ತಿ ಬಿದ್ದರು.ಅವರ ಮೇಲೆ ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರು ರಾಡ್ ನಿಂದ ಹಲ್ಲೆ ಮಾಡಿದ್ದರು.

ಅನಂತಪುರ ಜಿಲ್ಲೆಯ ತಡಿಪಟ್ರಿ ಕ್ಷೇತ್ರದ ಮೀರಪುರಂನಲ್ಲಿ ವೈಎಸ್ಆರ್ ಸಿ ಕಾರ್ಯಕರ್ತರ ದಾಳಿಯಿಂದ ಸ್ಥಳೀಯ ಟಿಡಿಪಿ ನಾಯಕ ಸಿದ್ದ ಭಾಸ್ಕರ್ ರೆಡ್ಡಿ ಮತ್ತು ವೈಎಸ್ ಆರ್ ಕಾಂಗ್ರೆಸ್ ನ ಪುಲ್ಲಾ ರೆಡ್ಡಿ ಮೃತಪಟ್ಟಿದ್ದಾರೆ.

ಅನಂತಪುರ ಜಿಲ್ಲೆಯ ತಾಡಪತ್ರಿ ಕ್ಷೇತ್ರದ ಮೀರಾಪುರಂನ ಮತಗಟ್ಟೆ 197ರಲ್ಲಿ ಈ ದುರ್ಘಟನೆ ಸಂಭವಿಸಿದೆ.

ಆಂಧ್ರಪ್ರದೇಶದಲ್ಲಿ ಮೊದಲು ಶಾಂತಿಯುತವಾಗಿಯೇ ಮತದಾನ ಪ್ರಾರಂಭವಾಯಿತು. ಅಧಿಕ ಸಂಖ್ಯೆಯಲ್ಲಿ ಮತದಾರರೂ ಮುಂಜಾನೆಯೇ ಆಗಮಿಸಿದರು. ಆದರೆ ಗುಂಟೂರು ಮತ್ತು ಚಿತ್ತೂರಿನಲ್ಲಿ ಮಾತ್ರ ವೈಎಸ್​ಆರ್​ ಹಾಗೂ ಟಿಡಿಪಿ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಬೆಳೆದು ಅದು ನಂತರ ಹಿಂಸಾಚಾರಕ್ಕೆ ತಿರುಗಿತು. ವಿದ್ಯುನ್ಮಾನ ಮತಯಂತ್ರಗಳನ್ನು ನಾಶಪಡಿಸಲಾಯಿತು. ಮೀರಾಪುರಂ ಗ್ರಾಮದ ಮತಗಟ್ಟೆಯ ಬಳಿ ಎರಡೂ ಪಕ್ಷಗಳ ಕಾರ್ಯಕರ್ತರ ವಾಗ್ವಾದ ತೀವ್ರಗೊಂಡು ಪರಸ್ಪರ ಕಲ್ಲು ತೂರಾಟ ನಡೆಸಿಕೊಂಡಿದ್ದಾರೆ.

ಪೊಲೀಸರು ಹರಸಾಹಸಪಟ್ಟು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗಲಭೆ ಕಾರಣರಾದ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆ ಖಂಡಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ 25 ಲೋಕಸಭಾ ಮತ್ತು 175 ವಿಧಾನಸಭಾ ಸ್ಥಾನಗಳಿಗೆ ಇಂದು ಏಕಕಾಲದಲ್ಲಿ ಮತದಾನ ನಡೆಯುತ್ತಿದೆ.
Stay up to date on all the latest ದೇಶ news with The Kannadaprabha App. Download now
facebook twitter whatsapp