ತಮಿಳುನಾಡು: ದಿನಕರನ್ ಗೆ 'ಗಿಫ್ಟ್ ಪ್ಯಾಕ್'' ಕೊಟ್ಟ ಚುನಾವಣಾ ಆಯೋಗ

ತಮಿಳು ನಾಡಿನಲ್ಲಿ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ(ಎಎಂಎಂಕೆ) ಪಕ್ಷಕ್ಕೆ ಚುನಾವಣಾ ಗುರುತಿನ ...
ಟಿಟಿವಿ ದಿನಕರನ್
ಟಿಟಿವಿ ದಿನಕರನ್
ಚೆನ್ನೈ; ತಮಿಳು ನಾಡಿನಲ್ಲಿ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ(ಎಎಂಎಂಕೆ) ಪಕ್ಷಕ್ಕೆ ಚುನಾವಣಾ ಗುರುತಿನ ಚಿಹ್ನೆ ಸಮಸ್ಯೆ ಕೊನೆಗೂ ಬಗೆಹರಿದಿದೆ. ಇಷ್ಟು ದಿನ ತಾತ್ಕಾಲಿಕವಾಗಿ ಪಕ್ಷಕ್ಕೆ ಪ್ರೆಷರ್ ಕುಕ್ಕರ್ ಚಿಹ್ನೆಯನ್ನು ಚುನಾವಣಾ ಆಯೋಗ ನೀಡಿತ್ತು. ಇದೀಗ ಲೋಕಸಭೆ ಮತ್ತು 18 ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಸ್ಪರ್ಧಿಸಲು ಪಕ್ಷಕ್ಕೆ ಶಾಶ್ವತವಾಗಿ ಗಿಫ್ಟ್ ಪ್ಯಾಕ್ ಚಿಹ್ನೆಯನ್ನು ಸಾಮಾನ್ಯ ಚುನಾವಣಾ ಗುರುತನ್ನಾಗಿ ಕೇಂದ್ರ ಚುನಾವಣಾ ಆಯೋಗ ನೀಡಿದೆ.
ಈ ಸಂಬಂಧ ಪಕ್ಷಕ್ಕೆ ಇಂದು ಆಯೋಗದ ಅಧಿಕೃತ ಆದೇಶ ತಲುಪಿದೆ.
ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳುವಿಕೆಗೆ ಇಂದೇ ಕೊನೆಯ ದಿನವಾಗಿದ್ದು ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಇಂದೇ ಚುನಾವಣಾ ಗುರುತುಗಳನ್ನು ಕೂಡ ಆಯೋಗ ಹಂಚಿಕೆ ಮಾಡಿದೆ. ಇದರಿಂದಾಗಿ ಎಎಂಎಂಕೆಗೆ ಇಷ್ಟು ದಿನ ಇದ್ದ ಚುನಾವಣಾ ಗುರುತು ಚಿಹ್ನೆಯ ಸಮಸ್ಯೆ ಬಗೆಹರಿದಂತಾಗಿದೆ.
ಗಿಫ್ಟ್ ಪ್ಯಾಕ್ ಗುರುತನ್ನು ಪಕ್ಷದ ನಾಯಕ ಟಿಟಿವಿ ದಿನಕರನ್, ಉಪ ಪ್ರಧಾನ ಕಾರ್ಯದರ್ಶಿ ಆಯ್ಕೆ ಮಾಡಿ ಚುನಾವಣಾ ಆಯೋಗಕ್ಕೆ ನಿನ್ನೆ ತಿಳಿಸಿದ್ದರು. ನಿನ್ನೆಯೇ ಚುನಾವಣಾ ಆಯೋಗ ಚಿಹ್ನೆಯನ್ನು ಹಂಚಿಕೆ ಮಾಡಿತ್ತು.
ನಮ್ಮ ಪಕ್ಷಕ್ಕೆ ಕುಕ್ಕರ್ ಚಿಹ್ನೆಯನ್ನು ನೀಡಿದ್ದಕ್ಕೆ ಆಡಳಿತಾರೂಢ ಎಐಎಡಿಎಂಕೆ ವಿರೋಧಿಸುತ್ತಿದ್ದರಿಂದ ನಮ್ಮ ಪಕ್ಷದ ಚಿಹ್ನೆ ಏನಾಗಿರುತ್ತದೆ ಎಂದು ಜನರು ಕುತೂಹಲದಿಂದ ಇಷ್ಟು ದಿನ ಕಾಯುತ್ತಿದ್ದರು. ಇದೀಗ ನಮಗೆ ಹೊಸ ಚಿಹ್ನೆ ಲಭ್ಯವಾಗಿದ್ದು, ಇಂದಿನ ಸೈಬರ್ ಯುಗದಲ್ಲಿ, ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವಾಗ ಚುನಾವಣೆಗೆ ದಿನಾಂಕ ಹತ್ತಿರವಾಗಿದ್ದರೂ ಕೂಡ ಚಿಹ್ನೆಯನ್ನು ಪ್ರಚಾರ ಮಾಡುವುದು ಕಷ್ಟವಲ್ಲ, ಸುದ್ದಿವಾಹಿನಿಗಳು, ಪತ್ರಿಕೆಗಳು ಮತ್ತು ಸೋಷಿಯಲ್ ಮೀಡಿಯಾಗಳ ಮೂಲಕ ಜನರಿಗೆ ಈಗಾಗಲೇ ಗೊತ್ತಾಗಿದೆ ಎಂದು ಎಎಂಎಂಕೆ ಪಕ್ಷದ ಹಿರಿಯ ನಾಯಕ ಪಿ ವೆಟ್ರಿವಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com