ರಾಜಕೀಯ ಲಾಭಕ್ಕಾಗಿ ಸ್ವಂತ ಪತ್ನಿಯನ್ನೇ ತೊರೆದ ಪ್ರಧಾನಿ ಮೋದಿ: ಮಾಯಾವತಿ ಟೀಕೆ

ರಾಜಕೀಯ ಲಾಭಕ್ಕಾಗಿ ತಮ್ಮ ಸ್ವಂತ ಪತ್ನಿಯನ್ನು ತೊರೆದ ಪ್ರಧಾನಿ ನರೇಂದ್ರ ಮೋದಿಯವರು ಬೇರೆಯವರ ಸೋದರಿ ಮತ್ತು ಪತ್ನಿಯರಿಗೆ ಗೌರವ ತೋರಿಸುತ್ತಾರೆ...
ಬಿಎಸ್ ಪಿ ನಾಯಕಿ ಮಾಯಾವತಿ
ಬಿಎಸ್ ಪಿ ನಾಯಕಿ ಮಾಯಾವತಿ
ಲಕ್ನೊ: ರಾಜಕೀಯ ಲಾಭಕ್ಕಾಗಿ ತಮ್ಮ ಸ್ವಂತ ಪತ್ನಿಯನ್ನು ತೊರೆದ ಪ್ರಧಾನಿ ನರೇಂದ್ರ ಮೋದಿಯವರು ಬೇರೆಯವರ ಸೋದರಿ ಮತ್ತು ಪತ್ನಿಯರಿಗೆ ಗೌರವ ತೋರಿಸುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷಗಳ ನಾಯಕರು ಇದುವರೆಗೆ ವಿವಿಧ ರೀತಿಯಲ್ಲಿ ವಾಗ್ದಾಳಿ ನಡೆಸಿರಬಹುದು. ಆದರೆ ಇದೇ ಮೊದಲ ಬಾರಿಗೆ ರಾಜಕೀಯ ನಾಯಕರೊಬ್ಬರು ಅವರ ವೈಯಕ್ತಿಕ ಜೀವನದ ವಿಷಯ ಹಿಡಿದುಕೊಂಡು ವಾಗ್ದಾಳಿ ನಡೆಸಿರುವುದು.
ಇಂದು ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಅಲ್ವರ್ ಅತ್ಯಾಚಾರ ಕೇಸಿನಲ್ಲಿ ಮೋದಿಯವರು ರಾಜಕೀಯ ಮಾಡುತ್ತಿದ್ದಾರೆ. ಮದುವೆಯಾದ ಮಹಿಳೆಯರು ತಮ್ಮ ಪತಿಯನ್ನು ನರೇಂದ್ರ ಮೋದಿಯವರ ಬಳಿ ಕಳುಹಿಸಲು ಭಯಪಡುತ್ತಾರೆ. ಮೋದಿಯವರು ತಮ್ಮ ಪತ್ನಿಯನ್ನು ತೊರೆದಂತೆ ತಮ್ಮ ಪತಿಯಂದಿರೂ ಕೂಡ ತಮ್ಮನ್ನು ಬಿಟ್ಟು ಹೋದರೆ ಎಂಬ ಭಯ ಅವರಿಗೆ ಎಂದು ವ್ಯಂಗ್ಯವಾಡಿದರು.
ಮೋದಿಯವರು ದಲಿತರ ಪರ ಟೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಅವರು ನಿಜವಾಗಿಯೂ ಹಿಂದುಳಿದ ಜಾತಿಗೆ ಸೇರಿದ ವ್ಯಕ್ತಿಯಾದರೆ ದಲಿತರು ಮತ್ತು ಹಿಂದುಳಿದ ವರ್ಗದವರು ಬಂಗಲೆಗಳು ಹೊಂದುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಚುನಾವಣೆಯ ಲಾಭಕ್ಕಾಗಿ ತಮ್ಮ ಜಾತಿಯನ್ನು ಅವರು ದಿನಕ್ಕೊಮ್ಮೆ ಬದಲಾಯಿಸುತ್ತಿರುತ್ತಾರೆ ಎಂದರು.
ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಮೈತ್ರಿಯನ್ನು ಮುರಿಯಲು ಮೋದಿಯವರು ಪ್ರಯತ್ನಿಸಿದ್ದರು. ಹಿಂದೆಲ್ಲಾ ನನ್ನನ್ನು ಬೆಹೆನ್ಜಿ ಎಂದು ಕರೆಯುತ್ತಿದ್ದವರು ನಂತರ ಮೈತ್ರಿ ಮುರಿಯುವುದಿಲ್ಲ ಎಂದು ಗೊತ್ತಾದ ಮೇಲೆ ನನ್ನನ್ನು ಬುವಾ ಎಂದು ಕರೆಯಲು ಆರಂಭಿಸಿದರು. ಅಖಿಲೇಶ್ ಯಾದವ್ ಸೇರಿದಂತೆ ದೇಶದ ಸಂಸ್ಕಾರವಂತರು ನನ್ನನ್ನು ಬೆಹೆನ್ಜಿ ಎಂದು ಕರೆಯುತ್ತಾರೆ, ನನ್ನ ಪೋಷಕರು ಕೂಡ ನನ್ನನ್ನು ಹಾಗೆಯೇ ಕರೆಯುತ್ತಾರೆ, ಆದರೆ ಮೋದಿಯವರ ಸಂಬೋಧನೆಯಿಂದಲೇ ಅವರು ಎಂತವರು ಎಂದು ಮನದಟ್ಟು ಮಾಡಿಕೊಳ್ಳಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com