ಮನ್ರೇಗಾ ಹಣ ಬಿಡುಗಡೆ ಮಾಡದಿರಲು ಕರ್ನಾಟಕವೇನು ಪಾಕಿಸ್ತಾನವೇ: ಎಚ್ ಡಿ ರೇವಣ್ಣ

ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ.
ಮನ್ರೇಗಾ ಹಣ ಬಿಡುಗಡೆ ಮಾಡದಿರಲು ಕರ್ನಾಟಕವೇನು ಪಾಕಿಸ್ತಾನವೇ: ಎಚ್ ಡಿ ರೇವಣ್ಣ
ಮನ್ರೇಗಾ ಹಣ ಬಿಡುಗಡೆ ಮಾಡದಿರಲು ಕರ್ನಾಟಕವೇನು ಪಾಕಿಸ್ತಾನವೇ: ಎಚ್ ಡಿ ರೇವಣ್ಣ
ಹಾಸನ: ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ.  ಹಣ ಬಿಡುಗಡೆ ಮಾಡದಿರಲು ಕರ್ನಾಟಕವೇನು ಪಾಕಿಸ್ತಾನವೇ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಬಿಜೆಪಿ ನಾಯಕರನ್ನು ಖಾರವಾಗಿ ಪ್ರಶ್ನಿಸಿದ್ದಾರೆ. 
ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾವಿರಾರು ಕೋಟಿ ರೂ ಹಣ ಬಿಡುಗಡೆ ಮಾಡಬೇಕು. ಆದರೆ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರಕ್ಕೆ ಹಣ ಬಿಡುಗಡೆ ಮಾಡಿದ್ದಾರೆ, ನಮ್ಮ ರಾಜ್ಯಕ್ಕೆ ಹಣ ನೀಡಿಲ್ಲ. ಹಾಗಾದರೆ ಕರ್ನಾಟಕ ಏನು ಪಾಕಿಸ್ತಾನವೆ? ಎಂದರು. 
ರಾಜ್ಯದ ಬಿಜೆಪಿ ನಾಯಕರಿಗೆ ಮತ ಕೇಳುವ ನೈತಿಕತೆ ಇಲ್ಲ. ಇವರಿಗೆ ನಾಚಿಕೆಯಾಗಬೇಕು. ಈಶ್ವರಪ್ಪ ಜಲ ಸಂಪನ್ಮೂಲ ಸಚಿವರಾಗಿದ್ದರು. ಆಗ ತುಮಕೂರಿಗೆ ಹೇಮಾವತಿ ನಾಲೆಯಿಂದ ನೀರು ಹರಿಸಲು ಮತ್ತು ನಾಲೆ ಅಗಲೀಕರಣ ಮಾಡಲು ಅವರಿಗೆ ಯಾಕೆ ಸಾಧ್ಯವಾಗಲಿಲ್ಲ. ಯಡಿಯೂರಪ್ಪ, ಈಶ್ವರಪ್ಪ ಅವರಿಗೆ ಶಿವಮೊಗ್ಗ ಮಾತ್ರ ಕಾಣುತ್ತಿದೆ. ತಮ್ಮ ತವರು ಜಿಲ್ಲೆಯನ್ನು ಸಹ ಅವರು ಅಭಿವೃದ್ಧಿ ಮಾಡಲಿಲ್ಲ. ಬದಲಿಗೆ ಹಣ ಲೂಟಿ ಮಾಡಲು ಪೈಪೋಟಿ ನಡೆಸಿದ್ದರು ಎಂದರು.
ಕೇಂದ್ರ ಸರ್ಕಾರಕ್ಕೆ ರೈತರು, ಬಡವರು ಬೇಕಿಲ್ಲ. ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಅವರು ಕೃಷಿಕರ ಸಾಲ ಮನ್ನಾ  ಮಾಡುತ್ತಿದ್ದರು. ಇಷ್ಟಕ್ಕೂ ರಾಜ್ಯಕ್ಕೆ ಬಿಜೆಪಿಯ ಕೊಡುಗೆ ಏನೇನು ಇಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ವರ್ಷ ಸಚಿವರಾಗಿ ಮಜಾ ಉಡಾಯಿಸಿದ ಬಿಜೆಪಿ ಅಭ್ಯರ್ಥಿ ಎ ಮಂಜು ತಮಗೆ ಬುದ್ದಿ ಹೇಳಲು ಬಂದಿದ್ದಾರೆ. ಬಿಜೆಪಿಯವರಿಗೆ ಬೇರೆ ಯಾರು ಅಭ್ಯರ್ಥಿಗಳು ಇರಲಿಲ್ಲವೆ?. ಟಿಕೆಟ್ ಕೊಡುವ ಮುನ್ನ ಐದು ವರ್ಷ ಪಕ್ಷಕ್ಕಾಗಿ ದುಡಿಯುವಂತೆ ಸೂಚಿಸಬೇಕಿತ್ತು. ಆದರೆ ಆತ ತಮ್ಮ ಪುತ್ರನನ್ನು 2.75 ಲಕ್ಷ ಮತಗಳ ಅಂತರದಿಂದ  ಸೋಲಿಸುತ್ತೇನೆ ಎಂದು ಹೇಳುತ್ತಿದ್ದಾನೆ. ಈತನಿಂದ ದೇವೇಗೌಡ, ಕುಮಾರಸ್ವಾಮಿ ಪಾಠ ಕಲಿಯಬೇಕೆ ಎಂದು ವಾಕ್ಪ್ರಾಹಾರ ನಡೆಸಿದರು. 
ಬಿಜೆಪಿ ಅಭ್ಯರ್ಥಿ ತಮ್ಮ ವಿರುದ್ದ ಕರಪತ್ರ ಮಾಡಿಸಿ ಹಂಚುತ್ತಿದ್ದಾರೆ. ಮೂರು ವರ್ಷ ವಸೂಲಿ ಮಾಡಿ, ಈಗ ಸಿದ್ದರಾಮಯ್ಯ ನನ್ನ ನಾಯಕ ಅನ್ನುತ್ತಿದ್ದಾರೆ. ಜನ ಶಕ್ತಿ ನೀಡಿದರೆ ರಾಜಕೀಯ ಮಾಡುತ್ತೇನೆ. ಇಲ್ಲವಾದಲ್ಲಿ ಮುದ್ದೆ ತಿಂದು ತಿಂದು ಮಲಗುತ್ತೇನೆ. ಬೆಂಗಳೂರು ಡಾನ್ ಬೇಕೋ ಇಲ್ಲವೆ, ಒಳ್ಳೆಯ ಕೆಲಸ ಮಾಡುವ ಯುವಕ ಬೇಕೋ ಎನ್ನುವುದನ್ನು ಜಿಲ್ಲೆಯ ಜನತೆ ತೀರ್ಮಾನ ಮಾಡಲಿ ಎಂದರು. 
ಬಿಜೆಪಿ ನಾಯಕರು ಕುಮಾರಸ್ವಾಮಿ, ನಿಖಿಲ್ ವಿರುದ್ದವೂ ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ವೈಯುಕ್ತಿಕವಾಗಿ ಟೀಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ. ಇಂತಹ ಆಟಾಟೋಪಗಳಿಗೆಲ್ಲಾ ಚುನಾವಣಾ ಆಯೋಗ ತಡೆ ಹಾಕಬೇಕು ಎಂದರು. 
ತಮ್ಮ ಮಗ ಪ್ರಜ್ವಲ್ ದೇವೇಗೌಡರ ಬಳಿ ಸಾಲ‌ ಪಡೆದಿರುವುದನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ. ಆದರೆ ಆತ ಎಚ್.ಡಿ. ದೇವೇಗೌಡರ ಬಳಿ ಸಾಲ ಪಡೆದಿಲ್ಲ. ಇದನ್ನು ಮುಂದಿಟ್ಟಕೊಂಡು ಜಿಲ್ಲಾಧಿಕಾರಿ ನನ್ನ ಮಗನಿಗೆ ನೋಟೀಸ್ ನೀಡಿದ್ದಾರೆ. ಬಿಜೆಪಿ ಪರವಾಗಿ ಜಿಲ್ಲಾಧಿಕಾರಿ ಕೆಲಸ ಮಾಡಬಾರದು ಎಂದು ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದರು. 
ಈಶ್ವರಪ್ಪ ತಮ್ಮ ಮೇಲೆ ವೈಯುಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ. ಅವರ ಮೇಲೆ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಮುಖ್ಯಮಂತ್ರಿಗೆ ನೆಗೆದು ಬೀಳುತ್ತಾನೆ ಎಂದು ಹೇಳುತ್ತಾರೆ, ಆತನ ಹಾಸನ ಶಾಸಕ ಪ್ರೀತಂ ಗೌಡ] ಮೇಲೂ ಕೇಸ್ ದಾಖಲಿಸದೆ ಆಯೋಗ ಕಣ್ಣು ಮುಚ್ಚಿ ಕುಳಿತಿದೆ ಎಂದರು. 
ನಮ್ಮ ವಿರುದ್ಧ ಮಾತನಾಡುವ ಬಿಜೆಪಿ ನಾಯಕ ಈಶ್ವರಪ್ಪ ಅವರಿಗೆ ನಾಚಿಕೆಯಾಗಬೇಕು. ಈತ ಬುಡುಬಡುಕೆಯವ.  ಯಡಿಯೂರಪ್ಪ ಅವರನ್ನು ಹೀನಾ ಮಾನವಾಗಿ ಬೈದ ಈಶ್ವರಪ್ಪ ಮತ್ತೆ ಓಮ್ ನಮಃ ಶಿವಾಯ ಎಂದು ಅದೇ ಯಡಿಯೂರಪ್ಪ ಅವರ ಕಾಲು ಹಿಡಿದುಕೊಂಡರು. ಬೆಳಿಗ್ಗೆ ಎದ್ದರೆ ಯಡಿಯೂರಪ್ಪ ಅವರ ಜಪ‌ ಮಾಡಬೇಕು. ಇಲ್ಲವಾದಲ್ಲಿ ಈಶ್ವರಪ್ಪ ಅವರನ್ನು ಮನೆಗೆ ಕಳಿಸುತ್ತಾರೆ ಎಂದು ವ್ಯಂಗ್ಯವಾಡಿದರು. 
ಯಡಿಯೂರಪ್ಪ, ಈಶ್ವರಪ್ಪ ಹೇಳಿದವರ ಕೆಲಸ ಮಾಡಿಕೊಟ್ಟಿದ್ದೇನೆ. ಹಾಗಾದರೆ ಅವರು ಕಮಿಷನ್ ತೆಗೆದುಕೊಂಡಿರಬೇಕಲ್ಲವೇ?. ಇವರೆಲ್ಲ ಜೈಲಿಗೆ ಹೋಗಿ ಬಂದಿದ್ದರು. ಪರ್ಸೆಂಟೆಜ್ ತೆಗೆದುಕೊಳ್ಳುವವರೇ ಬಿಜೆಪಿಯವರು. ಐಟಿ ದಾಳಿ ನಡೆದಾಗ ನೋಟು ಎಣಿಸುವ ಯಂತ್ರ  ಯಾರ ಮನೆಯಲ್ಲಿ ಸಿಕ್ಕಿತ್ತು. ಬಿಜೆಪಿಯವರ ಮನೆಯಲ್ಲಿ ‌ದುಡ್ಡಿದೆ. ಅವರ ಮೇಲೆ‌ ದೂರು ನೀಡಿದರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಿಲ್ಲ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com