ಚುನಾವಣೆಯಲ್ಲಿ ಅಭ್ಯರ್ಥಿಯ ಅರ್ಹತೆಯನ್ನು ನೋಡಿ ಮತಹಾಕುವುದು ಮುಖ್ಯ: ಪ್ರಕಾಶ್‌ ರೈ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಟ, ಬರಹಗಾರ, ಹೋರಾಟಗಾರ ಪ್ರಕಾಶ್ ರೈ ನಾಮಪತ್ರ ಸಲ್ಲಿಸಿದ್ದಾರೆ. ...
ಪ್ರಕಾಶ್ ರೈ
ಪ್ರಕಾಶ್ ರೈ
ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಟ, ಬರಹಗಾರ, ಹೋರಾಟಗಾರ ಪ್ರಕಾಶ್ ರೈ ನಾಮಪತ್ರ ಸಲ್ಲಿಸಿದ್ದಾರೆ. 
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಪ್ರಕಾಶ್‌ ರೈ, ಸಮಾಜದಲ್ಲಿ ಮತದಾರರ ಜವಾಬ್ದಾರಿ ಬಹಳಷ್ಟು ಇದೆ. ಚುನಾವಣೆ ಎನ್ನುವುದು ರಾಷ್ಟ್ರೀಯ ಹಬ್ಬವಾಗಬೇಕು. ಚುನಾವಣೆಯಲ್ಲಿ ಪ್ರತಿನಿಧಿಸುವುದು ಮುಖ್ಯವೇ ಹೊರತು ಸೋಲು ಗೆಲುವಲ್ಲ. ರಾಜಕೀಯ ಪಕ್ಷಗಳನ್ನು ನೋಡಿ ಮತ ಹಾಕುವುದಕ್ಕಿಂತ ಅಭ್ಯರ್ಥಿಗಳನ್ನು ನೋಡಿ ಮತಹಾಕುವುದು ಮುಖ್ಯ ಎಂದು ಹೇಳಿದರು.
ಜನರು ತಾವು ಆರಿಸಿ ಕಳುಹಿಸಿದವರು ಏನು ಕೆಲಸ ಮಾಡಿದ್ದಾರೆ. ನಿಂತು ಸೋತವರು ಏನು ಮಾಡಿದ್ದಾರೆ ಎನ್ನುವುದನ್ನು ಮೊದಲು ಅರಿಯಬೇಕು. ಆ ಮೂಲಕ ತಮಗೆ ಸರಿ ಅನಿಸಿದವರಿಗೆ ಮತ ಹಾಕಬೇಕು. ಈ ನಿಟ್ಟಿನಲ್ಲಿ ಮತದಾರರು ಪ್ರಜ್ಞಾವಂತರಾಗಬೇಕು. ನಾನು ಲಾರಿ ಬಸ್ಸುಗಳಲ್ಲಿ ಜನರನ್ನು ಕರೆಸಲ್ಲ. ಜತೆಗೆ, ದುಡ್ಡು ಕೊಟ್ಟು ಮತ ಖರೀದಿಸುವ ಪರಿಸ್ಥಿತಿಯೂ ನನಗಿಲ್ಲ ಎಂದು ತಿಳಿಸಿದರು.
ಸಮಸ್ಯೆಗೆ ಧ್ವನಿಯಾಗುವವರು ಯಾವುದೇ ಪಕ್ಷದಲ್ಲಿದ್ದರೂ ಅವರನ್ನು ಗೆಲ್ಲಿಸಬೇಕು. ಗೆದ್ದ ಬಳಿಕ  ಆ ನಾಯಕರು ಜನರ ನಂಬಿಕೆ ಉಳಿಸಿಕೊಳ್ಳಬೇಕು. ಸಂಘ ಸಂಸ್ಥೆಗಳು , ಮಹಿಳಾ ಸಂಘಟನೆಗಳು ಆಟೋ ಚಾಲಕರು ಸೇರಿದಂತೆ ಇತರರ ಬೆಂಬಲ ನನಗಿದೆ. ನನಗೆ ಯಾವುದೇ ಸ್ಟಾರ್ ಪ್ರಚಾರಕರ ಅಗತ್ಯವಿಲ್ಲ. ನಾನು ಯಾರನ್ನೂ ಪ್ರಚಾರಕ್ಕೆ ಆಹ್ವಾನಿಸುವುದಿಲ್ಲ ಎಂದು ತಿಳಿಸಿದ್ದಾರೆ. 
ನಾನು ನಟ, ಬರಹಗಾರ, ಹೋರಾಟಗಾರ, ಚಿಂತಕನಾಗಿ ಪರಿಚಿತ. ವ್ಯಕ್ತಿತ್ವದ ಮೂಲಕವೇ ಜನರನ್ನು ಗೆಲ್ಲಬೇಕು ಹೋರಟಿದ್ದೇನೆ. ಹಾಗಾಗಿ, ಯಾವುದೇ ಅಡ್ದದಾರಿಯಲ್ಲಿ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸಲ್ಲ ಎಂದ ಪ್ರಕಾಶ್‌ ರೈ, ಸಿನಿಮಾ ರಂಗದ ಬೆಂಬಲದ ಬಗ್ಗೆ ಸ್ಪಷ್ಟವಾಗಿ ತಿಳಿಸಲಿಲ್ಲ. 
ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಈವರೆಗೂ ತಮ್ಮ ರಿಪೋರ್ಟ್ ಕಾರ್ಡ್ ಕೊಟ್ಟಿಲ್ಲ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ. ಆದರೆ, ಅಭಿವೃದ್ಧಿ ಮಾಡುವ ಕುರಿತಂತೆ ಜನಪ್ರತಿನಿಧಿಗಳಿಗೆ ಇಚ್ಛಾ ಶಕ್ತಿ ಕೊರತೆ ಇದೆ. ನಾನು ಜನರ ಪರವಾಗಿ ಹಾಗೂ ಜಾತ್ಯಾತೀತರ ಜೊತೆ ಹೋಗುತ್ತೇನೆ. ಆದರೆ, ಬಿಜೆಪಿ ಜೊತೆ ಹೋಗುವ ಮಾತೆ ಇಲ್ಲ ಎಂದು ಪ್ರಕಾಶ್‌ ರೈ ಸ್ಪಷ್ಟಪಡಿಸಿದ್ದಾರೆ.
 ನನ್ನ ಹಾಗೂ ಕಾಂಗ್ರೆಸ್ ಸಿದ್ಧಾಂತಗಳು ಒಂದೇ ಅಲ್ಲ. ಕಾಂಗ್ರೆಸ್‌ನವರು ದಲಿತರು, ಮುಸ್ಲಿಂ ಸೇರಿದಂತೆ ಹಿಂದುಳಿದ ಎಲ್ಲ ವರ್ಗದವರು ನಮ್ಮ‌ ಪರ ಮತ ಹಾಕುವರು ಎಂದು ಹೇಳಿಕೊಂಡು ತಿರುಗುತ್ತಾರೆ. ನಾನು ಯಾವುದೇ ಪಕ್ಷದ ವಿರೋಧಿಯಲ್ಲ. ನಾನು ಜನಪರ ಕೆಲಸ ಮಾಡಬೇಕಷ್ಟೆ.ಪ್ರಕಾಶ್ ರೈ ಎಂಬುವರನ್ನು ಒಂದು ವ್ಯಕ್ತಿತ್ವವಾಗಿ ನೋಡಿ ಬೆಂಬಲಿಸಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com