ನಾನು ದರ್ಶನ್ ಅಭಿಮಾನಿ, 'ಸುಮಲತಾ ಅಂಬರೀಶ್ ವಿರುದ್ಧ ನನ್ನ ಪತ್ನಿ ಸ್ಪರ್ಧಿಸುವುದಿಲ್ಲ': ಮಂಜೇ ಗೌಡ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ತೀವ್ರ ಪೈಪೋಟಿ ನೀಡುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಸಂಕಟವೊಡ್ಡಿದ್ದ ಮೂವರು ಸುಮಲತಾರ ಪೈಕಿ ಓರ್ವ ಪಕ್ಷೇತರ ಅಭ್ಯರ್ಥಿ ತಮ್ಮ ನಾಮಪತ್ರ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ತೀವ್ರ ಪೈಪೋಟಿ ನೀಡುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಸಂಕಟವೊಡ್ಡಿದ್ದ ಮೂವರು ಸುಮಲತಾರ ಪೈಕಿ ಓರ್ವ ಪಕ್ಷೇತರ ಅಭ್ಯರ್ಥಿ ತಮ್ಮ ನಾಮಪತ್ರ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.
ಹೌದು.. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಅದೇ ಹೆಸರಿನ ಮೂವರು ಮಹಿಳೆಯರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಮತದಾರರಲ್ಲಿ ಗೊಂದಲ ಮೂಡಲು ಕಾರಣರಾಗಿದ್ದರು. ಈ ಪೈಕಿ ಓರ್ವ ಪಕ್ಷೇತರ ಅಭ್ಯರ್ಥಿ ತಮ್ಮ ನಾಮಪತ್ರ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.
'ನಾನು ಅಪ್ಪಟ ದರ್ಶನ್ ಅಭಿಮಾನಿ, ಯಾರದೋ ಮಾತು ಕೇಳಿ ನನ್ನ ಪತ್ನಿ ನಾಮಪತ್ರ ಸಲ್ಲಿಸಿದ್ದಾಳೆ. ನನ್ನ ಪತ್ನಿಯೊಂದಿಗೆ ತೆರಳಿ ನಾಮಪತ್ರ ವಾಪಸ್ಸು ಪಡೆಯುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಗೊರವಿ ಗ್ರಾಮದ ಸುಮಲತಾ ಪತಿ ಮಂಜೇಗೌಡ ಹೇಳಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಮಂಜೇಗೌಡ, ದರ್ಶನ್ ಅಭಿಮಾನಿಯಾಗಿ ನಾಮಪತ್ರ ವಾಪಸ್ಸು ಪಡೆಯುತ್ತೇನೆ. ಬೂಕನಕೆರೆಯಲ್ಲಿ ಸುಮಲತಾರನ್ನ ಭೇಟಿಯಾಗಿ ನಾಮಪತ್ರ ವಾಪಸ್ಸು ಪಡೆಯುವುದಾಗಿ ಹೇಳಿದ್ದೇನೆ. ನಾನು ದರ್ಶನ್ ಅಭಿಮಾನಿಯಾಗಿರೋ ಕಾರಣ ಸುಮಲತಾಕ್ಕರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೆ ಮೂವರು ಸುಮಲತಾ ಹೆಸರಿನ ಮಹಿಳೆಯರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಕೆ.ಆರ್.ಪೇಟೆ ತಾಲೂಕಿನ ಗೊರವಿ ಗ್ರಾಮದ ಸುಮಲತಾ ಮಂಜೇಗೌಡ ಕೂಡ ಒಬ್ಬರು.