ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು

ಮಗುವನ್ನು ಒಂಬತ್ತು ತಿಂಗಳು ಹೆತ್ತು ಹೊತ್ತು ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲಹಿ ಕಾಪಾಡುವ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದೇ ಹೇಳಲಾಗುತ್ತದೆ. ಪ್ರತಿಯೊಂದು ಮಗುವಿನ ಜೀವನದಲ್ಲಿ ತಾಯಿ ಎಷ್ಟು ಪ್ರದಾನ ಪಾತ್ರ ವಹಿಸುತ್ತಾಳೋ...
ತಂದೆ ಸ್ಥಾನ: ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು
ತಂದೆ ಸ್ಥಾನ: ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು
Updated on

ಮಗುವನ್ನು ಒಂಬತ್ತು ತಿಂಗಳು ಹೆತ್ತು ಹೊತ್ತು ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲಹಿ ಕಾಪಾಡುವ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದೇ  ಹೇಳಲಾಗುತ್ತದೆ. ಪ್ರತಿಯೊಂದು ಮಗುವಿನ ಜೀವನದಲ್ಲಿ ತಾಯಿ ಎಷ್ಟು ಪ್ರದಾನ ಪಾತ್ರ ವಹಿಸುತ್ತಾಳೋ ಅದೇ ರೀತಿ ತಂದೆಯ ಪಾತ್ರಕ್ಕೂ ಅಷ್ಟೇ  ಪ್ರಧಾನತೆ ಇದೆ. ಅಪ್ಪ ಎಂದೆಂದಿಗೂ ಮಕ್ಕಳ ಭಾವನೆಯಲ್ಲಿ ಕಾಯ್ದ ಹಿಮಾಲಯವಿದ್ದಂತೆ ಹಾಗೂ ನಮ್ಮ ಕಲ್ಪನೆಗೂ ನಿಲುಕದ ಧೃವತಾರೆ.

ಅಪ್ಪ ಎಂದರೆ ಜೀವನ ನೀಡುವ ದೇವರು ಎಂದೇ ಹೇಳಬಹುದು. ಪ್ರೀತಿ, ಸಂಬಂಧ, ನೋವು, ದುಃಖ ಎಂಬುದು ಮನುಷ್ಯರಿಗೆ ಮಾತ್ರವೇ ಅಲ್ಲ  ಪ್ರಾಣಿಗಳಲ್ಲೂ ಇರುತ್ತದೆ. ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ತಂದೆ ತಾಯಿ ಪಾತ್ರಗಳಿರುವ ಪ್ರಧಾನತೆ ಪ್ರಾಣಿಗಳಲ್ಲೂ ಇರುತ್ತದೆ. ಇದು  ಕೊಂಚ ಆಶ್ಚರ್ಯವೆನಿಸದರೂ ಸತ್ಯ. ಪ್ರಾಣಿಗಳ ಜೀವನದಲ್ಲಿರುವ ಈ ಪ್ರೀತಿ, ವಿಶ್ವಾಸ, ನಂಬಿಕೆಗಳು ಕೇಳಿದರೆ ಕೆಲವೊಮ್ಮೆ ಅಚ್ಚರಿಯೆನಿಸಬಹುದು.  ಆದರೂ, ಅವುಗಳು ನಮ್ಮಂತೆಯೇ ಜೀವಿಗಳಲ್ಲವೇ. ಮನುಷ್ಯ ಹಾಗೂ ಜೀವಿಗಳಲ್ಲಿ ತಾಯಿಯ ಪ್ರಧಾನತೆಯನ್ನು ನೀವು ಕೇಳಿರಬಹುದು. ಆದರೆ ಪ್ರಾಣಿಗಳಲ್ಲಿ ತಂದೆಯ ಪಾತ್ರ ಹಾಗೂ ಅವುಗಳ ಜವಾಬ್ದಾರಿಯುತ ನಡೆಯನ್ನು ನೀವು ಕೇಳಿದರೆ ಅಚ್ಚರಿ ಪಡುತ್ತೀರಿ. ಕೆಲವೊಮ್ಮೆ ಮನುಷ್ಯ ಕೂಡ  ನಿಭಾಯಿಸುವಲ್ಲಿ ವಿಫಲನಾಗುತ್ತಾನೆ. ಆದರೆ ಪ್ರಾಣಿಗಳು ತಮ್ಮ ಜವಾಬ್ದಾರಿ ನಿರ್ವಹಣೆಯನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಅಗತ್ಯ  ಬಿದ್ದರೆ ತನ್ನ ಪ್ರಾಣ ತೆತ್ತಾದರೂ ಸರಿ ತನ್ನ ಕುಟುಂಬದ ರಕ್ಷಣೆಗೆ ನಿಲ್ಲುತ್ತದೆ. ಪ್ರಾಣಿ ಜೀವನ ಕುರಿತಂತೆ ಖ್ಯಾತ ಸಂಸ್ಥೆ ನ್ಯಾಷನಲ್ ಜಿಯೋಗ್ರಾಫಿಕ್  ಸಂಸ್ಥೆ "ಉತ್ತಮ ತಂದೆ" ಪಾತ್ರ ನಿರ್ವಹಿಸುವ ಪ್ರಾಣಿಗಳ ಪಟ್ಟಿ  ತಯಾರು ಮಾಡಿದೆ.

ನಾಲ್ಕು ತಿಂಗಳ ಕಾಲ ಮೊಟ್ಟೆಯಿಂದ ದೂರ ತೆರಳದ ಗಂಡು ಪೆಂಗ್ವಿನ್


ಪ್ರಾಣಿ ಪ್ರಪಂಚದ ಉತ್ತಮ ತಂದೆ ಪಟ್ಟಿಯಲ್ಲಿ ಪೆಂಗ್ವಿನ್ ಕೂಡ ಇದ್ದು, ವಿಶೇಷತೆ ಎಂದರೆ ಹೆಣ್ಣು ಪೆಂಗ್ವಿನ್ ಗಳು ಸಾಮಾನ್ಯವಾಗಿ ಮೊಟ್ಟೆ ಇಟ್ಟ ಬಳಿಕ  ಅವುಗಳ ಆಹಾರಕ್ಕಾಗಿ ಮೊಟ್ಟೆಯನ್ನು ಬಿಟ್ಟು ಹೊರಟು ಹೋಗುತ್ತವೆ. ಆದರೆ ಗಂಡು ಪೆಂಗ್ವಿನ್ ಮಾತ್ರ ಮೊಟ್ಟೆಗಳನ್ನು ಸುರಕ್ಷಿತವಾಗಿ ಕಾಯುತ್ತದೆ.  ವಾತಾವರಣದಲ್ಲಾಗುವ ಏರುಪೇರುಗಳನ್ನು ಗಮನಿಸಿ ಹೆಚ್ಚಾಗಿ ಶೀತ ಮಾರುತಗಳಿದ್ದರೆ ಮೊಟ್ಟೆಗಳನ್ನು ತನ್ನ ದೇಹದ ಕೆಳಗೆ ಹಾಕಿಕೊಂಡು  ಕೂರುತ್ತದೆ. ಆಗ ಮೊಟ್ಟೆಗೆ ಹೆಚ್ಚಾಗಿ ಚಳಿಯಾಗದೇ ಅವರು ಬೆಚ್ಚಿಗನ ವಾತಾವರಣದಲ್ಲಿರುವಂತೆ ನೋಡಿಕೊಳ್ಳುತ್ತದೆ. ತಾಯಿ ಪೆಂಗ್ವಿನ್ ಆಹಾರಕ್ಕಾಗಿ  ಹೋದರೆ ತಂದೆ ಪೆಂಗ್ವಿನ್ ಚಳಿಯಿಂದ ಮೊಟ್ಟೆಗಳಿಗೆ ಅಪಾಯವಾಗದಂತೆ ಸುಮಾರು ನಾಲ್ಕು ತಿಂಗಳು ಕಾವು ಕೊಟ್ಟು ಮೊಟ್ಟೆಯನ್ನು ಕಾಯುತ್ತದೆ.  ಅಲ್ಲದೆ ಮೊಟ್ಟೆಯಿಂದ ಮರಿಗಳು ಹೊರಬಂದ ಮೇಲೂ ಅವುಗಳು ಬೆಳೆಯುವವರೆಗೂ ಅವುಗಳ ಸಂಪೂರ್ಣ ಜವಾಬ್ದಾರಿ ಹೊರುತ್ತದೆ. ಆಹಾರ ಹುಡುಕಿ  ತರುವಲ್ಲಿ ತಾಯಿ ಪೆಂಗ್ವಿನ್ ತಡವಾದರೆ ಅಥವಾ ವಿಫಲವಾದರೆ ತಂದೆ ಪೆಂಗ್ವಿನ್ ಹೋಗಿ ಆಹಾರ ಅರಸಿ ಬರುತ್ತದೆ.

ಮೊಟ್ಟೆಗಳು ನಾಶವಾಗದಂತೆ ಕಾಯುತ್ತದೆ ಜಿರಳೆ


ಜಿರಳೆಗಳಲ್ಲಿ ವಿಶಿಷ್ಟ ಗುಣಗಳಿವೆ. ಇಲ್ಲಿ ತಾಯಿ ಜಿರಳೆ ಮೊಟ್ಟೆಗಳನಿಟ್ಟರೆ ತಂದೆ ಜಿರಳೆ ಮೊಟ್ಟೆಗಳನ್ನು ಕಾಯುವುದಷ್ಟೇ ಅಲ್ಲದೇ ಮೊಟ್ಟೆಗಳು  ಯಾವುದೇ ರಾಸಾನಿಕಗಳಿಂದ ಕೆಡದಂತೆ ಎಚ್ಚರಿಕೆ ವಹಿಸುತ್ತದೆ. ಒಂದು ವೇಳೆ ಮೊಟ್ಟೆಗಳ ಸುತ್ತಮುತ್ತಲಿನ ವಾತವಾರಣ ಕಲುಷಿತವಾದಂತಿದ್ದರೆ  ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತದೆ ಈ ಗಂಡು ಜಿರಳೆ.

ಮರಿಗಳನ್ನು ಬಾಯೊಳಗೆ ಹಾಕಿ ಕಾಯುತ್ತವೆ ಕಪ್ಪೆಗಳು


ಉತ್ತಮ ತಂದೆ ಪಾತ್ರದಾರಿ ಪ್ರಾಣಿಗಳಲ್ಲಿ ಉಭಯವಾಸಿ ಕಪ್ಪೆ ಕೂಡ ಒಂದು. ಸಾಮಾನ್ಯವಾಗಿ ಹೆಣ್ಣು ಕಪ್ಪೆಗಳು ಮೊಟ್ಟೆ ಇಡುತ್ತವೆ ಎಂದು ನಮಗೆ  ತಿಳಿದಿದೆ. ಆದರೆ ಮೊಟ್ಟೆಗಳ ಪಾಲನೆ ಪೋಷಣೆ ಮಾಡುವುದು ಗಂಡು ಕಪ್ಪೆಗಳು. ಅಪಾಯಕಾರಿ ಪರಿಸ್ಥಿತಿಗಳು ಬಂದರೆ ಕೆಲವು ಪ್ರಭೇದದ ಕಪ್ಪೆಗಳು  ತಮ್ಮ ಮರಿಗಳನ್ನು ಬಾಯಿಯೊಳಗೆ ಹಾಕಿಕೊಂಡು ಅವುಗಳ ರಕ್ಷಣೆ ಮಾಡುತ್ತವೆ. ಕೆಲವೊಂದು ಜಾತಿಯ ಕಪ್ಪೆಗಳು ತಮ್ಮ ಬೆನ್ನ ಮೇಲೆ ಮರಿಗಳನ್ನು  ಸಲಹುತ್ತವೆ.

ಸಮುದ್ರ ಕುದುರೆ


ಸಮುದ್ರ ಕುದುರೆಗಳು ಬಹುತೇಕ ಏಕಾಂಗಿ. ಸಾಮಾನ್ಯವಾಗಿ ಪ್ರಾಣಿ, ಪಕ್ಷಿ ಅಥವಾ ಕೀಟಗಳಲ್ಲಿ ಹೆಣ್ಣು ಗರ್ಭಿಣಿಯಾದರೆ ಸಮುದ್ರ ಕುದುರೆಯಲ್ಲಿ  ಗಂಡು ಕುದುರೆ ಗರ್ಭಿಣಿಯಾಗುತ್ತದೆ. ಹೆಣ್ಣು ಸಿ ಹಾರ್ಸ್ ಗಂಡು ಸಿ ಹಾರ್ಸ್ ನ ದೇಹದಲ್ಲಿರುವ ಚೀಲದಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಸುಮಾರು ೪೫  ದಿನಗಳವರೆಗೂ ಗಂಡು ಸಿ ಹಾರ್ಸ್ ಮೊಟ್ಟೆಗಳನ್ನು ಜೋಪಾನವಾಗಿ ಕಾಪಾಡುತ್ತದೆ. ೪೫ ದಿನಗಳ ನಂತರ ಮೊಟ್ಟೆಯೊಡೆದು ಮರಿ ಹೊರಬರುತ್ತವೆ.

ಮಾರ್ಮಿಸೆಟ್  ಜಾತಿಯ ಕೋತಿ


ಮಾರ್ಮಿಸೆಟ್ ಜಾತಿಯ ಕೋತಿಗಳಲ್ಲಿ ಒಂದು ವಿಶೇಷ ಗುಣವಿದೆ. ಮರಿಗಳ ಜನ್ಮಕ್ಕೆ ಕಾರಣವಾಗುವ ಮಾರ್ಮಿಸೆಟ್ ಜಾತಿ ಕೋತಿಗಳು ಮರಿಗಳಿಗೆ  ಕೇವಲ ಆಹಾರ ಒದಗಿಸುವುದಷ್ಟೇ ಅಲ್ಲದೆ ಮರಿ ಹಾಕಿದ ತಾಯಿ ಕೋತಿಗೂ ಆಹಾರವನ್ನು ಅರಸಿ ತಂದು ನೀಡುತ್ತದೆ. ತಾಯಿ ಕೋತಿ ಮರಿಗಳು  ದೊಡ್ಡದಾಗಿ ಬೆಳೆಯುವವರೆಗೂ ಮರಿಗಳ ಆರೈಕೆ ಮಾಡುತ್ತದೆ.

ಕಪ್ಪು ಕುತ್ತಿಗೆಯ ಹಂಸಗಳು


ಈ ಜಾತಿಯ ಹಂಸಗಳು ಸಾಮಾನ್ಯವಾಗಿ ಒಂದು ವರ್ಷದ ವರೆಗೂ ತಮ್ಮ ಮರಿಗಳನ್ನು ಕಾಯುತ್ತವೆ. ಮತ್ತು ಮರಿಗಳಿಗೆ ಜೀವನ ಕಲೆಗಳನ್ನು  ಕಲಿಸುತ್ತವೆ. ಅಪಾಯ ಬಂದಾಗ ಮತ್ತು ನೀರಿನಲ್ಲಿದ್ದಾಗ ಮರಿಗೆ ವಿಶ್ರಾಂತಿ ಅವಶ್ಯವಿದ್ದಾಗ ತಮ್ಮ ಬೆನ್ನಮೇಲೆ ಕೂರಿಸಿಕೊಳ್ಳುತ್ತವೆ.

ಜೈಂಟ್ ವಾಟರ್ ಬಗ್  (ದೊಡ್ಡ ನೀರಿನ ತಿಗಣೆ)


ಗೈಂಟ್ ವಾಟರ್ ಬಗ್ ಮಕ್ಕಳನ್ನು ಕಾಪಾಡುವ ತಂತ್ರವನ್ನು ನಮ್ಮ ಮಾನವ ಜನ್ಮಕ್ಕೆ ಹೊಲಿಸಬಹುದು. ತಾಯಿ ಹೇಗೆ ಮಗುವಿಗೆ ಜನ್ಮ ನಿಡುವ  ಮೊದಲು ತನ್ನ ಹೊಟ್ಟೆಯಲ್ಲಿ ೯ ತಿಂಗಳು ಆಸರೆ ನೀಡುತ್ತಾಳೆ ಹಾಗೆ ಗಂಡು ಜೈಂಟ್ ವಾಟರ್ ಬಗ್  ತನ್ನ ಮೊಟ್ಟೆಗಳನ್ನು ತನ್ನ ರೆಕ್ಕೆಗಳ ಮೇಲೆ  ಇಟ್ಟುಕೊಂಡು ರಕ್ಷಿಸುತ್ತದೆ.  ಯಾರಾದರೂ ಮೊಟ್ಟೆಯನ್ನು ಕದಿಯಲು ಕೈ ಹಾಕಿದರೆ ಸಾಕು ವಾಟರ್ ಬಗ್ ಅವರನ್ನು ಕಚ್ಚುತ್ತದೆ.

ಜಕಾನ  ಹಕ್ಕಿ


ಗಂಡು ಜಾಕನ ಹಕ್ಕಿಯ ನಿಷ್ಠೆಯನ್ನು ನೀವು ಎಲ್ಲರೂ ಮೆಚ್ಚಲೇ ಬೇಕು. ಯಾಕಂದರೆ ಒಮ್ಮೆ  ಹೆಣ್ಣು ಹಕ್ಕಿ ಒಮ್ಮೆ ಮೊಟ್ಟೆಯಿಟ್ಟ ಮೇಲೆ ಗಂಡನ್ನು  ತೊರೆದು ಬೇರೆ ಗಂಡಿನ ಸಂಗವನ್ನು ಬಯಸುತ್ತದೆ. ಆದರೆ ಗಂಡು ಅ ಮೊಟ್ಟೆಗಳಿಗಾಗಿ ಗೊಡನ್ನು ಕಟ್ಟಿ, ಮರಿ ಮಾಡಿ ಸಾಕಿ  ಸಲಹುತ್ತದೆ. ಇದಲ್ಲದೆ  ಬೇರೆ ಗಂಡು ಹಕ್ಕಿಯ ಸಂಗ ಮಾಡಿದ ಅದೇ ಹೆಣ್ಣು  ಹಕ್ಕಿ ಮೊಟ್ಟೆ ಇಟ್ಟರೆ ಅವಕ್ಕೂ ಸಹ ಆಶ್ರಯ ನೀಡುತ್ತದೆ.

ಮಂಗಟ್ಟೆ ಹಕ್ಕಿ (ಹಾರ್ನ್ ಬಿಲ್)



ಹೆಣ್ಣು ಹಾರ್ನ್ ಬಿಲ್ ಮೊಟ್ಟೆಯಿಡುವ ಸಂದರ್ಭದಲ್ಲಿ, ಮರದ ಪೊಟರೆಯನ್ನು ಆಯ್ಕೆ ಮಾಡಿ, ಪೊಟರೆಯ ಒಳಗೆ ಹೋಗಿ ಪೊಟರೆಯ ದ್ವಾರವನ್ನು  ಕೇವಲ ಕೊಕ್ಕು ಇಳಿ ಬಿಡುವಷ್ಟು ಜಾಗ ಉಳಿಸಿ ಮುಚ್ಚಿ ಬಿಡುತ್ತದೆ. ಪೊಟರೆಯ ಒಳಗೆ ಮೊಟ್ಟೆಯಿಟ್ಟು, ಮರಿ ಮಾಡಿ ಒಮ್ಮೆ ಮರಿಗಳು ಬಲಿತ ಮೇಲೆ  ಪೊಟರೆಯ ದ್ವಾರವನ್ನು ಗಂಡು ಹಕ್ಕಿ ಒಡೆಯುತ್ತದೆ. ಆಗ ಹೆಣ್ಣು ಹಕ್ಕಿ ಮರಿಗಳೊಂದಿಗೆ ಹೊರಗೆ ಬರುತ್ತದೆ. ಅಲ್ಲಿಯವರೆಗೆ ಗಂಡು ಹಕ್ಕಿ ಪ್ರತಿ ದಿನವೂ  ಆಹಾರವನ್ನು ತಂದು ಅ ಪೊಟರೆಯ ಒಳಗೆ ಹಾಕುತ್ತದೆ. ಹೆಣ್ಣು ಹಕ್ಕಿ ಅದನ್ನೇ ಸೇವಿಸಿ ಬದುಕುತ್ತದೆ. ಮೊಟ್ಟೆಯೊಡೆದು ಮರಿ ಬರುವ ತನಕ ಹೆಣ್ಣು  ಹಕ್ಕಿಗೆ ಹೊರಗಿನ ಪ್ರಪಂಚದ ಸಂಪರ್ಕವೇ ಇರುವುದಿಲ್ಲ. ಅಕಸ್ಮಾತ್ ಗಂಡು ಹಕ್ಕಿ ವಾಪಾಸ್ ಬರದಿದ್ದರೆ ಹೆಣ್ಣು ಹಕ್ಕಿ ಅದೇ ಪೊಟರೆಯಲ್ಲಿ ತನ್ನ ಕಡೆ  ಉಸಿರು ಬಿಡುತ್ತದೆ.

ಹೌವ್ಲರ್ ಕೋತಿ


ತಾಯಿ ಕೋತಿ ತನ್ನ ಮರಿಗಳನ್ನು ತೊರೆಯುತ್ತದೆ. ಆಗ ಮರಿಗಳ ಜವಾಬ್ದಾರಿ ಹೊರುವ ತಂದೆ ಕೋತಿ ಅವುಗಳ ಆಹಾರದಿಂದ ಹಿಡಿದು  ರಕ್ಷಣೆಯವರೆಗಿನ ಎಲ್ಲ ಜವಾಬ್ದಾರಿ ಹೋರುತ್ತದೆ. ಮರಿಗಳನ್ನು ಯಾವಾಗಲೂ ಶುದ್ಧವಾಗಿರುವಂತೆ ನೋಡಿಕೊಳ್ಳುತ್ತದೆ.

ಆರೋವನ ಮೀನು


ಗಂಡು ಆರೋವನ ಮೀನು ತನ್ನ ಮರಿಗಳನ್ನು ಇತರ ಜೀವಿಗಳಿಂದ ರಕ್ಷಿಸುವ ಕ್ರಮ ನಿಜಕ್ಕೂ ಅಚ್ಚರಿ. ಇತರೆ ಜೀವಿಗಳಿಂದ  ಅಪಾಯದ ಸೂಚನೆ  ಕಂಡಾಗ ತನ್ನ ಮರಿಗಳನ್ನು ತನ್ನ ಬಾಯಿ ತೆಗೆದು ಬಾಯಿಯ ಒಳಗೆ ಆಶ್ರಯ ನೀಡುತ್ತದೆ. ಒಮ್ಮೆ ಸುರಕ್ಷಿತ ಎನ್ನುವವರೆಗೂ ಅವುಗಳನ್ನು  ಕಾಪಾಡುತ್ತದೆ.

ಕೆಂಪು ನರಿ


ಕೆಂಪು ನರಿಗಳ ಪ್ರೀತಿ ಗಳಿಕೆ ಬಹಳ ಕಷ್ಟಕರ. ಕೆಂಪು ನರಿಗಳು ಮರಿಹಾಕಿದಾಗ ಅವುಗಳು ಬೇಟೆಯಾಡಲು ನಿಶಕ್ತಿದಾಯಕವಾಗಿರುತ್ತವೆ. ಈ ವೇಳೆ  ಗಂಡು ಕೆಂಪು ನರಿಗಳು ತನ್ನ ಸಂಗಾತಿಗೆ ಬೇಟೆಯಾಡಲು ಸಿದ್ಧವಾಗುವವರೆಗೂ ಅವುಗಳಿಗೆ ಪ್ರತೀ 4-5 ಗಂಟೆಗಳಿಗೆ ಆಹಾರವನ್ನು ಒದಗಿಸುತ್ತಲೇ  ಇರಬೇಕಾಗುತ್ತದೆ. ಕೆಂಪು ನರಿಗಳು ತನ್ನ ಮರಿಗಳನ್ನು ಬಹಳ ಪ್ರೀತಿಯಿಂದ ನೋಡುಕೊಳ್ಳುತ್ತದೆ. ತಾಯಿ ಮಲಗಿದ ನಂತರ ತನ್ನ ಮರಿಗಳನ್ನು ತನ್ನ  ಬಳಿಗೆ ಕರೆದು ಅವುಗಳೊಂದಿಗೆ ಆಯಾಸವಿಲ್ಲದಂತೆ ಆಟವಾಡುತ್ತದೆ. ಮೂರು ತಿಂಗಳ ನಂತರ ಮಕ್ಕಳು ಸ್ವಯಂ ಪ್ರೇರಿತವಾಗಿ ಆಹಾರ ತಿನ್ನುವಂತೆ  ಸೂಚಿಸುತ್ತದೆ.

ಕಡಲ ಕೊಕ್ಕರೆ


ಕಡಲಕೊಕ್ಕರೆಯಲ್ಲಿ ತಾಯ್ತನವಾಗುವುದು ಗಂಡು ಕೊಕ್ಕರೆಯಲ್ಲಿ. ಅಂದರೆ ಇಲ್ಲಿ ಗಂಡು ಕಡಲ ಕೊಕ್ಕರೆ ಮೊಟ್ಟೆ ಇಡುತ್ತದೆ. ಗೂಡು ಕಟ್ಟಿ ಮೊಟ್ಟೆಗಳನ್ನು  ಜೋಪಾನವಾಗಿ ಕಾಯುತ್ತದೆ.

ಸಮುದ್ರ ಬೆಕ್ಕುಮೀನು


ಹೆಣ್ಣು ಸಮುದ್ರ ಬೆಕ್ಕುಮೀನುಗಳು ತನ್ನ ಮೊಟ್ಟೆಗಳನ್ನು ಗಂಡು ಸಮುದ್ರ ಬೆಕ್ಕು ಮೀನಿನ ಬಾಯಿಯಲ್ಲಿ ಇಡುತ್ತದೆ. ನಂತರ ಗಂಡು ಸಮುದ್ರ ಬೆಕ್ಕು  ಮೀನುಗಳು ಮೊಟ್ಟೆಗಳಿಗೆ ತನ್ನ ಬಾಯಿಯಲ್ಲಿಯೇ ಆಶ್ರಯ ನೀಡಿ. ಅವುಗಳನ್ನು ಅಪಾಯದಿಂದ ರಕ್ಷಿಸುತ್ತದೆ. ಮೊಟ್ಟೆ ಒಡೆದು ಮರಿಗಳು ಹೊರ  ಬರುವವರೆಗೂ ಗಂಡು ಸಮುದ್ರ ಮೀನು ತನ್ನ ಮೊಟ್ಟೆಗಳನ್ನು ತನ್ನ ಬಾಯಿಯಲ್ಲಿ ಇಟ್ಟುಕೊಂಡು ರಕ್ಷಿಸುತ್ತದೆ. ಮೊಟ್ಟೆಯೊಡೆದ ನಂತರ ಅವುಗಳು  ಸ್ವತಂತ್ರವಾಗಿ ಓಡಾಡಲು ಎರಡರಿಂದ ಮೂರು ವಾರಗಳವರೆಗೆ ಕಾಲವಕಾಶ ಬೇಕಿರುತ್ತದೆ. ಅಲ್ಲಿಯವರೆಗೂ ಮರಿಗಳ ಸಂಪೂರ್ಣ ಜವಾಬ್ದಾರಿ  ಗಂಡು ಸಮುದ್ರ ಬೆಕ್ಕುಮೀನುಗಳದ್ದೇ ಆಗಿರುತ್ತದೆ.

ಕರಡಿ


ಹೆಣ್ಣು ಕರಡಿಗಳು ಗರ್ಭಿಣಿಯಲ್ಲಿದ್ದಾಗ ಅವುಗಳಿಗೆ ಆಹಾರ ಒದಗಿಸಲು ಗಂಡು ಕರಡಿಗಳು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿದ್ದಾಗ ಹೆಣ್ಣು  ಕರಡಿಗಳ ತೂಕ ಹೆಚ್ಚಾಗುತ್ತದೆ. ಹೆಣ್ಣು ಕರಡಿಗಳು ಮರಿಹಾಕಿದಾಗ ಅವುಗಳ ಸ್ವಾಮ್ಯ ಸಾಧಿಸಲು ಈ ಗಂಡು ಕರಡಿಗಳು ಇತರೆ ಗಂಡು  ಕರಡಿಗಳೊಂದಿಗೆ ಕಾದಾಟಕ್ಕೆ ಮುಂದಾಗುತ್ತದೆ. ಇದರ ಪರಿಣಾಮವಾಗಿ ಮೈ ಮೇಲೆ ಗಾಯಗಳಾಗುತ್ತವೆ. ಕೆಲವೊಮ್ಮೆ ಆಹಾರ ಸಿಗದಿದ್ದಾಗ ಬೆಳೆದ  ಗಂಡು ಕರಡಿಗಳು ತಮ್ಮ ಮರಿ ಕರಡಿಗಳನ್ನೇ ಕೊಂದು ತಿನ್ನುವುದೂ ಉಂಟು. ಈ ವೇಳೆ ತಾಯಿ ಕರಡಿ ತಮ್ಮ ಮರಿಗಳತ್ತ ವಾತ್ಸಲ್ಯ ತೋರಿಸಿ,  ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಅವುಗಳನ್ನು ರಕ್ಷಿಸಲು ಸಕಲ ಪ್ರಯತ್ನ ಮಾಡುತ್ತವೆ.

ತಂದೆ ಸ್ಥಾನ ಉಳಿಸಿಕೊಳ್ಳಲು ಯುದ್ಧ ಸಾರುತ್ತವೆ ಗೆಲಡ ಜಾತಿಯ ಕೋತಿ..!


ಹೌದು. ಗೆಲಡ ಜಾತಿಗೆ ಸೇರಿದೆ ಮಂಗಗಳು ತಮ್ಮ ತಂದೆ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಡುವ ಪರಿ ಅಷ್ಟಿಷ್ಟಲ್ಲ. ಸಂಗಾತಿ ಮತ್ತು ಮಕ್ಕಳ  ರಕ್ಷಣೆಗಾಗಿ ಈ ಜಾತಿಯ ಕೋತಿಗಳು ಯುದ್ಧವನ್ನೇ ಮಾಡುತ್ತವೆ. ಆಗಷ್ಟೇ ಬೇದೆಗೆ ಬಂದಿರುವ ಕೋತಿಗಳು ಹೊಸ ಸಂಗಾತಿ ಹುಡುಕಾಟದಲ್ಲಿ  ತೊಡಗಿದರೆ, ಈಗಾಗಲೇ ತನ್ನ ತಂದೆ ಪಾತ್ರ ನಿರ್ವಹಿಸುತ್ತಿರುವ ಕೋತಿ ತನ್ನ ಕುಟುಂಬ ರಕ್ಷಣೆ ಮತ್ತು ತಂದೆ ಸ್ಥಾನದ ಉಳಿವಿಗೆ ಹೊಡೆದಾಡಲು  ಸಿದ್ಧವಾಗುತ್ತದೆ. ಸಾಮಾನ್ಯವಾಗಿ ಜಲಡ ಜಾತಿಯ ಕೋತಿ ಮಹಿಳಾ ಪ್ರಧಾನ ಪ್ರಭೇದವಾಗಿದ್ದು, ಇಲ್ಲಿ ಹೆಣ್ಣುಕೋತಿಗಳು ಬೇಕೆಂದಾಗ ತಮ್ಮ  ಸಂಗಾತಿಯನ್ನು ಬದಲಿಸಲಬಲ್ಲವು ಅಥವಾ ಗಂಡು ಕೋತಿಗಳು ಸಂಘರ್ಷಕ್ಕೆ ಇಳಿದಾಗ ಅವುಗಳಲ್ಲಿ ಗೆಲ್ಲುವ ಕೋತಿಗಳು ಸಂಗಾತಿಯನ್ನು  ಸೇರಬಲ್ಲವು. ಹೀಗಾಗಿ ತಂದೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಗಂಡು ಕೋತಿಗಳು ಹೋರಾಡುತ್ತಲೇ ಇರುತ್ತವೆ.

ಬಬೂನ್


ವರ್ವೆಟ್ ಜಾತಿಯ ಕೋತಿಗಳು ತಂದೆಯ ಸ್ಥಾನ ಸಂಪಾದನೆಗಾಗಿ ಹೆಣ್ಣಿನ ಬಳಿ ಇರುವ ಮರಿಕೋತಿಗಳನ್ನೇ ಕೊಂದು ಹಾಕುತ್ತವೆ. ಸಂಗಾತಿಯನ್ನು  ಒಲಿಸಿಕೊಳ್ಳಲು ಈ ಜಾತಿಯ ಕೋತಿಗಳು ಮಾಡುವ ಪ್ರಮುಖ ಪ್ರಯತ್ನ ಅಷ್ಟಿಷ್ಟಲ್ಲ.

-ಮಂಜುಳ ವಿ.ಎನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com