ಮಕ್ಕಳಿಗೆ ಜನ್ಮ ಕೊಟ್ಟರೂ ಈತ ಅಪ್ಪನಲ್ಲ..!

ಹೌದು..ಕಾಲ ಬದಲಾಗಿದೆ. ಬೇಕೆಂದಾಗ ಸಿಗುವ ಫಾಸ್ಟ್ ಫುಡ್ ನಂತೆ ಈಗ ಬೇಕೆಂದಾಗ ಮಕ್ಕಳು ಸಿಗುತ್ತಾರೆ. ರಕ್ತದಾನ, ನೇತ್ರದಾನ, ವಿದ್ಯಾದಾನ, ಅನ್ನದಾನದಂತೆ ಈಗ ವೀರ್ಯದಾನ ಕೂಡ...
ವಿರ್ಯದಾನ (ಸಾಂದರ್ಭಿಕ ಚಿತ್ರ)
ವಿರ್ಯದಾನ (ಸಾಂದರ್ಭಿಕ ಚಿತ್ರ)

ಹೌದು..ಕಾಲ ಬದಲಾಗಿದೆ. ಬೇಕೆಂದಾಗ ಸಿಗುವ ಫಾಸ್ಟ್ ಫುಡ್ ನಂತೆ ಈಗ ಬೇಕೆಂದಾಗ ಮಕ್ಕಳು ಸಿಗುತ್ತಾರೆ. ರಕ್ತದಾನ, ನೇತ್ರದಾನ, ವಿದ್ಯಾದಾನ, ಅನ್ನದಾನದಂತೆ ಈಗ ವೀರ್ಯದಾನ ಕೂಡ  ಶ್ರೇಷ್ಠದಾನಗಳ ಪಟ್ಟಿಯಲ್ಲಿ ಜಾಗ ಪಡೆಯತೊಡಗಿದೆ.

ಇತ್ತೀಚೆಗೆ ವೀರ್ಯದಾನವೂ ತನ್ನದೇ ಆದಂತಹ ಮಹತ್ವ ಪಡೆಯುತ್ತಿದೆ. ಮಕ್ಕಳಿಲ್ಲದೆ ಕೊರಗುತ್ತಿರುವ ಅದೆಷ್ಟೋ ದಂಪತಿಗಳ ಪಾಲಿಗೆ ವೀರ್ಯದಾನ-ಅಂಡಾಣುದಾನ ಪ್ರಕ್ರಿಯೆ  ವರದಾನವಾಗಿ ಪರಿಣಮಿಸುತ್ತಿದೆ. ಬದಲಿ ತಂದೆ ಅಥವಾ ಜೈವಿಕ ತಂದೆ (biological father) ಎಂಬ ಪರಿಕಲ್ಪನೆ ಜಗತ್ತಿನೆಲ್ಲೆಡೆ ಪಸರಿಸುತ್ತಿದ್ದು, ವೀರ್ಯದಾನಕ್ಕೆ ಎಲ್ಲಿಲ್ಲದ ಮಹತ್ವ  ಬಂದಿದೆ. ಒಂದು ಕಾಲಕ್ಕೆ ವೀರ್ಯದಾನವೆಂಬುದು ಗೌಪ್ಯ ವಿಚಾರವಾಗಿತ್ತು. ಆದರೆ ಇಂದು ವೀರ್ಯದಾನ ಎಂಬುದು ಪ್ರತಿಷ್ಠೆಯ ಪ್ರತೀಕವಾಗಿದೆ.

ಮಕ್ಕಳಿಲ್ಲದೆ ಮರುಗುತ್ತಿದ್ದ ಹಾಲಿವುಡ್, ಬಾಲಿವುಡ್ ಖ್ಯಾತ ನಾಮರು ಕೂಡ ವೀರ್ಯದಾನಕ್ಕೆ ಮೊರೆಹೋಗಿ ಇಂದು ಸಂತಾನ ಪಡೆದಿದ್ದಾರೆ. ಇನ್ನು ಇತ್ತೀಚೆಗಿನ ಪ್ರಕರಣಗಳನ್ನು  ಹೆಸರಿಸುವುದಾದರೆ ಹಾಲಿವುಡ್ ನ ಖ್ಯಾತ ತಾರೆ ಲಿಂಡ್ಸೆ ಲೋಹನ್ ಕೂಡ ಇತ್ತೀಚೆಗೆ ವೀರ್ಯದಾನದ ಮೊರೆ ಹೋಗಿ ಸಂತಾನ ಪಡೆದಿದ್ದಾರೆ. ಹಾಲಿವುಡ್ ಏಕೆ ನಮ್ಮ ಬಾಲಿವುಡ್ ನಲ್ಲಿಯೂ  ಹಲವು ಖ್ಯಾತನಾಮರು ವೀರ್ಯದಾನ-ಅಂಡಾಣುದಾನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ಮಿಸ್ಟರ್ ಫರ್ಫೆಕ್ಷನಿಸ್ಟ್ ಆಮೀರ್ ಖಾನ್ ಸೇರಿದಂತೆ  ಹಲವು ಖ್ಯಾತ ನಾಮರು ಇದೇ ಪ್ರಕ್ರಿಯೆ ಮೂಲಕ ಸಂತಾನ ಪಡೆದಿರುವ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರವೇ.

ಇಷ್ಟಕ್ಕೂ ಈ ವೀರ್ಯದಾನ ಎಂದರೇನು..?
ವೀರ್ಯದಾನ ಎನ್ನುವುದು ಒಂದು ಪ್ರಕ್ರಿಯೆಯಾಗಿದ್ದು, ಇಲ್ಲಿ ವೀರ್ಯಾದಾನ ಮಾಡುವ ವ್ಯಕ್ತಿ ತನ್ನ ವೀರ್ಯವನ್ನು ತನ್ನ ಲೈಂಗಿಕ ಸಂಗಾತಿಯಲ್ಲದ ಮಹಿಳೆಗೆ ದಾನ ಮಾಡುತ್ತಾನೆ. ವೈದ್ಯರು  ಮಹಿಳೆಯ ಅಂಡಾಣುವಿಗೆ ಈ ವೀರ್ಯವನ್ನು ವೈದ್ಯಕೀಯ ಪ್ರಕ್ರಿಯೆ ಮೂಲಕ ಸೇರಿಸಿ ಆಕೆ ಗರ್ಭ ಧರಿಸುವಂತೆ ಮಾಡುತ್ತಾರೆ. ಆದರೆ ಇಲ್ಲಿ ಒಂದು ಪ್ರಮುಖ ಅಂಶವಿದೆ. ಇಲ್ಲಿ ವೀರ್ಯದಾನ  ಮಾಡುವ ವ್ಯಕ್ತಿಗೆ ತಾನು ತನ್ನ ವೀರ್ಯವನ್ನು ಯಾರಿಗೆ ನೀಡಿದ್ದೇನೆ ಎಂಬ ಮತ್ತು ವೀರ್ಯದಾನ ಪಡೆವ ಮಹಿಳೆ ಅಥವಾ ಆಕೆಯ ಕುಟುಂಬಕ್ಕೆ ತಾವು ದಾನ ಪಡೆದ ವೀರ್ಯ ಯಾರಿಂದ  ಪಡೆದದ್ದು ಎಂಬ ವಿಚಾರವನ್ನು ತೀರ ಗೌಪ್ಯವಾಗಿಡಲಾಗುತ್ತದೆ. ಹೀಗಾಗಿ ಈ ವೀರ್ಯದಾನ ಅಥವಾ ಅಂಡಾಣು ದಾನದಿಂದ ವೀರ್ಯದಾನ ಮಾಡುವವರಿಗಾಗಲಿ ಅಥವಾ ದಾನ  ಪಡೆಯುವವರಾಗಲೀ ಯಾವುದೇ ರೀತಿಯ ತೊಂದರೆಗಳಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ವೀರ್ಯದಾನ ಅಥವಾ ಅಂಡಾಣು ದಾನದ ಉಪಯೋಗ ಮತ್ತು ತೊಂದರೆ ಸಾಮಾನ್ಯವಾಗಿ ಈ ವೀರ್ಯದಾನ ಮತ್ತು ಅಂಡಾಣುದಾನ ಪ್ರಕ್ರಿಯೆಯಲ್ಲಿ ಸಾಕಷ್ಟು ಪ್ರಶ್ನೆಗಳು ಎದುರಾಗುತ್ತವೆ. ದಾನ ಪಡೆಯುವ ವೀರ್ಯ ಹೇಗಿರಬೇಕು. ಅದು ಸುರಕ್ಷಿತವೇ ಎಂಬಿತ್ಯಾದಿ  ಪ್ರಶ್ನೆಗಳು ಮೂಡುತ್ತವೆ. ಇವೆಲ್ಲದಕ್ಕೂ ಸಾಮಾನ್ಯ ಉತ್ತರ ಎಂದರೆ ಉತ್ತಮ ವೈದ್ಯರ ಸಲಹೆ ಎಂಬುದೊಂದೇ. ಏಕೆಂದರೆ ವೀರ್ಯದಾನ ಮತ್ತು ಅಂಡಾಣುದಾನ ಪ್ರಕ್ರಿಯೆಯಲ್ಲಿ ಹಲವಾರು  ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ದಾನ ಮಾಡಬಯಸುವ ವ್ಯಕ್ತಿ ಆರೋಗ್ಯ, ದೈಹಿಕ ಸಾಮರ್ಥ್ಯದ ವಿವರ, ಕೂದಲು ಮತ್ತು ಚರ್ಮದ ಬಣ್ಣ ಸೇರಿದಂತೆ ಹಲವು ಪ್ರಮುಖ  ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೆ ವೀರ್ಯದಾನ  ಮಾಡಬಯಸುವ ವ್ಯಕ್ತಿಯ ಆರೋಗ್ಯ ಸಾಮರ್ಥ್ಯ ಕೂಡ ಗಣನೆಗೆ ಬರುತ್ತದೆ. ಇಬ್ಬರ ಸಾಮರ್ಥ್ಯವನ್ನು ಪರೀಕ್ಷಿಸಿದ  ಬಳಿಕವೇ ಸರಿಹೊಂದುವಂತಹ ವೀರ್ಯ ಅಥವಾ ಅಂಡಾಣುವನ್ನು ಪ್ರಯೋಗ ಮಾಡಲಾಗುತ್ತದೆ. ಹೀಗಾಗಿ ಸೂಕ್ತ ನುರಿತ ವೈದ್ಯರ ಸಲಹೆ ಮೇರೆಗೆ ಮುಂದುವರೆಯುವುದು ಒಳಿತು.

ಅನಾದಿ ಕಾಲದಿಂದಲೇ ಇತ್ತು ವೀರ್ಯದಾನ ಪದ್ಧತಿ..?
ಅಧಿಕೃತ ಮೂಲಗಳ ಪ್ರಕಾರ ವಿಶ್ವದ ಮೊಟ್ಟಮೊದಲ ವೀರ್ಯದಾನ ಪ್ರಕರಣ ಪತ್ತೆಯಾಗಿದ್ದು, 1884ರಲ್ಲಿ. ಅಮೆರಿಕದ ಫಿಲಿಡೆಲ್ಫಿಯಾದಲ್ಲಿರುವ ಜೆಫರ್ ಸನ್ ವೈದ್ಯಕೀಯ ವಿದ್ಯಾಲಯದಲ್ಲಿ ಈ   ಪ್ರಯೋಗ ನಡೆದಿರುವ ಕುರಿತು ದಾಖಲೆಗಳು ಲಭ್ಯವಿದೆ. ಆದರೆ ಬಳಿಕ ಸುಮಾರು 60 ವರ್ಷಗಳ ಕಾಲ ವೀರ್ಯದಾನ ಮತ್ತು ಅಂಡಾಣುದಾನ ಪದ್ಧತಿ ಜಾರಿಯಲ್ಲಿತ್ತಾದರೂ ಅಷ್ಟಾಗಿ  ಸುದ್ದಿಯಾಗಿರಲಿಲ್ಲ. ಬಳಿಕ 1945ರಲ್ಲಿ ಲಂಡನ್ ನಲ್ಲಿ ಕೆಲಸ ಮಾಡುತ್ತಿದ್ದ ಡಾ.ಮೇರಿ ಬಾರ್ಟನ್ ಎಂಬುವವರ ಬ್ರಿಟೀಷ್ ವೈದ್ಯಕೀಯ ಪತ್ರಿಕೆಯಲ್ಲಿ ವೀರ್ಯದಾನದ ಬಗ್ಗೆ ಪ್ರಸ್ತಾಪಿಸಿ ಲೇಖನ  ಬರೆದಿದ್ದರು. ಈ ಲೇಖನಕ್ಕೆ ವಿಶ್ವಾದ್ಯಂತ ಭಾರಿ ಖಂಡನೆ ವ್ಯಕ್ತವಾಗಿತ್ತಾದರೂ ಭಾರಿ ಸುದ್ದಿಗೆ ಗ್ರಾಸವಾಗಿತ್ತು.

1970ರ ದಶಕದರವರೆಗೂ ಕ್ರೈಸ್ತ ಧರ್ಮದಲ್ಲಿ ವೀರ್ಯದಾನ ಮತ್ತು ಅಂಡಾಣುದಾನ "ಮಹಾಪಾಪ" ಎಂಬಂತೆ ಬಿಂಬಿಸಲಾಗಿತ್ತು. ಆದರೆ 1970ರಲ್ಲಿ ಅಮೆರಿಕ ಸರ್ಕಾರ ಮೊದಲ ಬಾರಿಗೆ  ವೀರ್ಯದಾನವನ್ನು ಅಧಿಕೃತವಾಗಿ ಒಪ್ಪಿಕೊಂಡು ಕಾನೂನು ಜಾರಿ ಮಾಡಿತು. ಕಾನೂನಿನಲ್ಲಿ ಕೆಲ ತಿದ್ದುಪಡಿಗಳನ್ನು ತಂದು "ಜೈವಿಕ ತಂದೆ" ಪದ್ಧತಿಗೆ ಅಮೆರಿಕ ಅನುಮೋದನೆ ನೀಡಿತು.  ಇದರಲ್ಲಿ ಗಂಡನೇ ನಿಜವಾದ ಮಗುವಿನ ತಂದೆಯಾಗಿದ್ದು, ವೀರ್ಯದಾನ ಮಾಡುವ ವ್ಯಕ್ತಿ ಕೇವಲ ದಾನಿಯಾಗಿರುತ್ತಾನೆಯೇ ಹೊರತು ತಂದೆಯಾಗುವುದಿಲ್ಲ ಎಂದು ಕಾನೂನು ಜಾರಿ ಮಾಡಿತು.  ಅಮೆರಿಕದಲ್ಲಾದ ಈ ಬದಲಾವಣೆ ಅದರ ಮಿತ್ರ ರಾಷ್ಟ್ರ ಇಂಗ್ಲೆಂಡ್ ಮೇಲೆ 1990ರ ದಶಕದವರೆಗೂ ಯಾವುದೇ ಪರಿಣಾಮ ಬೀರಿರಲಿಲ್ಲ. 1990ರ ದಶಕದವೆರಗೂ ಇಂಗ್ಲೆಂಡ್ ರಾಜಮನೆತನ  ಮತ್ತು ಕ್ರೈಸ್ತ ಮಿಷನರಿಗಳು ವೀರ್ಯದಾನ-ಅಂಡಾಣುದಾನ ಪಕ್ರಿಯೆಯನ್ನು ಒಪ್ಪಿಕೊಂಡಿರಲಿಲ್ಲ.

1990ರಲ್ಲಿ ಲಂಡನ್ ಮೊದಲ ಬಾರಿಗೆ ವೀರ್ಯದಾನ ಮತ್ತು ಅಂಡಾಣುದಾನ ಕುರಿತ "ಮಾನವ ಫಲವತ್ತತೆ ಮತ್ತು ಭ್ರೂಣಶಾಸ್ತ್ರ ಕಾಯ್ದೆ" (Human Fertilization and Embryology  Act)ಕಾನೂನನ್ನು ಜಾರಿಗೆ ತಂದಿತು. 18 ತುಂಬಿದ ಯುವಕ ಯುವತಿಯರು ವೀರ್ಯದಾನ ಮತ್ತು ಅಂಡಾಣುದಾನ ಮಾಡಬಹುದಾಗಿತ್ತು. ಆದರೆ ಸರ್ಕಾರದ ಈ ಕಾನೂನಿನಲ್ಲಿ ಹಲವು  ಲೋಪದೋಷಗಳಿದ್ದವು. ಹೀಗಾಗಿ ಸರ್ಕಾರ ದಾನಿಗಳ ಮತ್ತು ದಾನ ಪಡೆಯುವವರ ರಕ್ಷಣೆಗಾಗಿ ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದು ಪ್ರಜೆಗಳು ಆಗ್ರಹಿಸಿದರು. ಹೀಗಾಗಿ 2004ರಲ್ಲಿ  ಲಂಡನ್ ಸರ್ಕಾರ ವೀರ್ಯದಾನ ಮತ್ತು ಅಂಡಾಣುದಾನ ಕಾನೂನನ್ನು ಕಠಿಣಗೊಳಿಸಿತು.

ಅದರ ಪ್ರಕಾರ ಈ ವೀರ್ಯದಾನ ಮತ್ತು ಅಂಡಾಣುದಾನ ಪ್ರಕ್ರಿಯೆಯಲ್ಲಿ ದಾನಿಗಳ ಅಥವಾ ದಾನ  ಪಡೆದವರ ವಿವರಗಳನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸುವಂತಿಲ್ಲ. ಬಹಿರಂಗವಾದರೆ ಅದು ಕ್ರಿಮಿನಲ್ ಅಪರಾಧ ಎಂದು ಲಂಡನ್ ಸರ್ಕಾರ ಘೋಷಿಸಿತು. 2006 ಮಾರ್ಚ್ 31ರಿಂದ  ಈ ಕಾನೂನನ್ನು ಕಠಿಣವಾಗಿ ಜಾರಿಗೊಳಿಸಲಾಗಿದೆ. ಪ್ರಸ್ತುತ ಭಾರತ ಸೇರಿದಂತೆ ಬಹುತೇಕ ದೇಶಗಳು ವೀರ್ಯದಾನ ಮತ್ತು ಅಂಡಾಣುದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಂತಹುದೇ  ಕಾನೂನನ್ನು ಜಾರಿಗೊಳಿಸಿವೆ.

ಮಹಾಭಾರತ ಕಾಲದಲ್ಲೇ ಜಾರಿಯಲ್ಲಿತ್ತು ಜೈವಿಕ ತಂದೆ ಪದ್ಧತಿ..!
ಈ ಬಗ್ಗೆ ಕೊಂಚ ಗೊಂದಲಗಳಿವೆಯಾದರೂ, ಕೆಲ ಇತಿಹಾಸ ತಜ್ಞರು ಹೇಳುವಂತೆ ವಿಶ್ವದ ಇತಿಹಾಸದಲ್ಲಿ ಪುರಾತನ ಕಾಲದಿಂದಲೇ ವೀರ್ಯದಾನ ಮತ್ತು ಅಂಡಾಣುದಾನ ಪದ್ಧತಿ  ಜಾರಿಯಲ್ಲಿತ್ತು ಎಂದು ಹೇಳಲಾಗುತ್ತಿದೆ. ಮಹಾಭಾರತ ಕಾಲದಲ್ಲಿಯೇ ಋುಷಿಮುನಿಗಳ ಮೂಲಕವಾಗಿ ರಾಜವಂಶಸ್ಥರು ಪುತ್ರ ಮತ್ತು ಪುತ್ರಿಯರನ್ನು ಪಡೆಯುತ್ತಿದ್ದರು. ಅಂದಿನ ಸಮಾಜದಲ್ಲಿ  ಪತಿಯಿಂದ ಮಕ್ಕಳಾಗುವ ಸಾಧ್ಯತೆ ಇಲ್ಲದಿದ್ದಲ್ಲಿ ಈ ಪದ್ಧತಿ ಜಾರಿಯಲ್ಲಿತ್ತು. ಇದಕ್ಕೆ ಪತಿ ಮತ್ತು ಸಮಾಜದ ಅಂಗೀಕಾರವೂ ಇತ್ತು.

ರಾಜನಿಗೆ ಮಕ್ಕಳಾಗದಿದ್ದಲ್ಲಿ ಸಿಂಹಾಸನದ  ಉತ್ತರಾಧಿಕಾರಿಗೋಸ್ಕರವಾಗಿ ವಿವೇಕ, ಜ್ಞಾನಿಯುಳ್ಳ ಮಹರ್ಷಿಗಳಿಂದ ವೀರ್ಯದಾನ ನಡೆಯುತ್ತಿತ್ತು. ಈ ಸನ್ಯಾಸಿಗಳು ವೀರ್ಯದಾನ ಮಾಡಿದ ನಂತರ ಹೊರಟುಹೋಗುತ್ತಿದ್ದರು. ಮತ್ತೆ  ಇವರಿಗಾಗಲೀ ದಾನ ಪಡೆದ ಹೆಣ್ಣಿಗಾಗಲೀ ಸಂಬಂಧ ಇರುತ್ತಿರಲಿಲ್ಲ. ಇನ್ನು ಆಗಿನ ಕಾಲದಲ್ಲಿ ಮತ್ತೊಂದು ಪ್ರಮು ನಂಬಿಕೆ ಇತ್ತು. ಅದೇನೆಂದರೆ ಆಗ ಮಕ್ಕಳಾಗದಿದ್ದಲ್ಲಿ ಪಿತೃಗಳಿಗೆ ಮುಕ್ತಿಯಿಲ್ಲ  ಎಂಬ ನಂಬಿಕೆ ಬಲವಾಗಿತ್ತು. ಹೀಗಾಗಿ ಮದುವೆಯಾದ ಪ್ರತಿಯೊಂದು ಜೋಡಿಯೂ ಮಕ್ಕಳನ್ನು ಪಡೆಯಲೇಬೇಕು ಎಂಬ ಅಲಿಖಿತ ಪದ್ಧತಿ ಜಾರಿಯಲ್ಲಿತ್ತು.

ಹಿಂದೂಗಳ ಪವಿತ್ರ್ಯ ಗ್ರಂಥ ಭಗವದ್ಗೀತೆಯಲ್ಲಿ ಉಲ್ಲೇಖವಾಗುವ ಮಹಾಭಾರತದಲ್ಲಿ ಈ ಬಗ್ಗೆ ಉಲ್ಲೇಖವಿತ್ತು ಎಂದು ಹೇಳಲಾಗುತ್ತಿದೆ. ಮಹಾಭಾರತದ ಪ್ರಮುಖ ಪಾತ್ರಗಳಾದ ಪಾಂಡು,  ಧೃತರಾಷ್ಟ್ರರ ಜನನವೂ ಕೂಡ ಹೀಗೆಯೇ ಆಗಿತ್ತಂತೆ? ಕುರುವಂಶದ ರಾಜ ಶಾಂತನುವಿನ ನಂತರ ಭೀಷ್ಮ ಪ್ರತಿಜ್ಞೆ ಮಾಡಿ ಮದುವೆ ಆಗಲಿಲ್ಲ. ಶಾಂತನುವಿನ ಮಗ ವಿಚಿತ್ರವೀರ್ಯನಿಗೆ  ಮದುವೆ ಆಗಿತ್ತು. ಆದರೆ ಮಕ್ಕಳಾಗಿರಲಿಲ್ಲ. ಆತನ ಮದ್ಯಪಾನ ಅಭ್ಯಾಸ ಮತ್ತು ನಿಶ್ಯಕ್ತಿಯಿಂದಾಗಿ ಆತ ಮಕ್ಕಳನ್ನು ಪಡೆಯುವ ಶಕ್ತಿಯನ್ನೇ ಕಳೆದುಕೊಂಡಿದ್ದ. ಚಿತ್ರಾಂಗದ ದ್ವಂದ್ವ ಯುದ್ಧದಲ್ಲಿ  ಮಡಿದಿದ್ದನು.

ಹೀಗಾಗಿ ಕುರುಕುಲದ ಸಿಂಹಾಸನಕ್ಕೆ ಉತ್ತರಾಧಿಕಾರಿ ಬೇಕಿತ್ತು. ಆದ್ದರಿಂದ ರಾಣಿ ಸತ್ಯವತಿ ವ್ಯಾಸ ಮುನಿಗಳಿಗೆ ಮನವಿ ಮಾಡಿ ಅವರಿಂದ ಧೃತರಾಷ್ಟ್ರ, ಪಾಂಡು ಪುತ್ರರನ್ನು  ಪಡೆಯುತ್ತಾಳೆ. ಈ ಮೂಲಕ ಧೃತರಾಷ್ಟ್ರ, ಪಾಂಡು ಇವರು ಕೂಡ ವ್ಯಾಸರ ಮಕ್ಕಳಗುತ್ತಾರೆ. ಆದರೆ ಅವರನ್ನು ವ್ಯಾಸರ ಮಕ್ಕಳೆಂದು ಯಾರೂ ಹೇಳುವುದಿಲ್ಲ.

ಹಾಗೆಯೇ ಪಾಂಡು ಪತ್ನಿ ಕುಂತಿ  ದೇವತೆಗಳ ಮೂಲಕ ಪುತ್ರರನ್ನು ಪಡೆಯುತ್ತಾಳೆ. ಗಾಂಧಾರಿ ಕೂಡ ವ್ಯಾಸ ಮಹಾಮುನಿಗಳ ಕೃಪೆಯಿಂದ 101 ಮಕ್ಕಳನ್ನು ಪಡೆಯುತ್ತಾಳೆ. ಗಾಂಧಾರಿಯ ಗರ್ಭದಿಂದ ಹೊರಬಿದ್ದ ಭ್ರೂಣದ  ಪಿಂಡಗಳನ್ನು ವ್ಯಾಸರು ತುಪ್ಪದ ಪಾತ್ರೆಯಲ್ಲಿ ಇಟ್ಟು ಸಂರಕ್ಷಿಸಿದರಂತೆ. ಒಂದಲ್ಲಾ, ಎರಡಲ್ಲಾ, ಒಟ್ಟು ನೂರಾ ಒಂದು. ಮಗು ಬೆಳೆಯಲು ಬೇಕಾದ ತಾಯ ಗರ್ಭದ ಶಾಖ, ಆಹಾರ, ನೀರುಗಳನ್ನು  ಆ ಕಾಲದಲ್ಲೇ ವ್ಯಾಸ ಮಹಾ ಮುನಿಗಳು ಅದು ಹೇಗೆ ಒದಗಿಸಿರಬಹುದು. ಈ ಮಕ್ಕಳ ಜೈವಿಕ ತಂದೆ (biological father) ಬೇರೆ ಆದರೂ ಧರ್ಮರಾಯ, ಸಹದೇವ, ನಕುಲ, ಭೀಮ,  ಅರ್ಜುನಾದಿಗಳು ‘ಪಾಂಡು’ ಪುತ್ರರು (ಪಾಂಡವರು) ಎಂದು ಮತ್ತು ಗಾಂಧಾರಿಗೆ ಜನಿಸಿದ 101 ಮಕ್ಕಳು ಕೌರವರು ಎಂದು ಕರೆಯಲ್ಪಟ್ಟರು.

ಇದರ ಬಗ್ಗೆ ಅಂದಿನ ಸಮಾಜ ಎಲ್ಲೂ ಚಕಾರ ಎತ್ತಿಲ್ಲ. ಇದರಿಂದ ಈ ಪದ್ಧತಿ ಜಾರಿಯಲ್ಲಿತ್ತು ಎಂದು ತಿಳಿದು ಬರುತ್ತದೆ. ಆದರೆ ಈ ಪದ್ಧತಿ ಜನಸಾಮಾನ್ಯರಿಗೂ ಅನ್ವಯಿಸುತ್ತಿತ್ತೇ? ಇದರ ಬಗ್ಗೆ   ತಿಳಿದಿಲ್ಲ. ಈಗ ಕಾಲ ಬದಲಾಗಿದೆ ಬಿಡಿ. ಐರೋಪ್ಯ ದೇಶಗಳಲ್ಲಿ ಬಾಡಿಗೆ ತಾಯಿ (surrogate mother) ಗರ್ಭವನ್ನು ಬಾಡಿಗೆಗೆ ಪಡೆದು ಮಗು ಪಡೆಯುತ್ತಾರೆ. ಆಗಿನ ಕಾಲದಲ್ಲಿ ‘ನಿಯೋಗ’  ಹಣಕ್ಕಾಗಿ ನಡೆಯದೆ, ವಂಶಾಭಿವೃದ್ಧಿಗಾಗಿ ನಡೆಯುತ್ತಿದೆ.

- ಶ್ರೀನಿವಾಸ ಮೂರ್ತಿ ವಿಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com