ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಮ್ಮ ದುಡಿಮೆಗೆ, ಅಪ್ಪ ಅಡುಗೆಗೆ

ಮಹಿಳೆಯರು ಇಂದು ಪುರುಷರು ಮಾಡುವ ಕೆಲಸಗಳನ್ನು ಮಾಡುತ್ತಿರುವುದರಿಂದ, ಪುರುಷರು ನಿಧಾನವಾಗಿ ಅಡುಗೆ ಮನೆಯೊಳಗೆ...
Published on

ನಾನು ಶಾಲೆಗೆ ಹೋಗುತ್ತಿದ್ದ ದಿನಗಳವು. ಏಳನೇ ತರಗತಿಯಲ್ಲಿದ್ದೆ. ಒಬ್ಬರು ಮೇಷ್ಟ್ರು ಬಂದು ತರಗತಿಯಲ್ಲಿ ನಿಮ್ಮ ಅಪ್ಪ-ಅಮ್ಮನ ಬಗ್ಗೆ ಹೇಳಿ, ಅವರ ಪರಿಚಯ ಮಾಡಿಕೊಡಿ ಎಂದರು. ಅಪ್ಪ ಎಂದರೆ ಮನೆಯ ಯಜಮಾನ, ಮನೆಯ ದುಡ್ಡಿನ ವಿಚಾರ ನೋಡಿಕೊಳ್ಳುವವರು, ನಮ್ಮೊಂದಿಗೆ ಹೆಚ್ಚು ಮಾತನಾಡುವುದಿಲ್ಲ, ಪ್ರೀತಿಯಿದೆ, ಆದರೆ ಸಲುಗೆಯಿಲ್ಲ, ಅಪ್ಪನ ಜೊತೆ ಆಟವಾಡುವುದಿರಲಿ, ಅವರ ಮುಂದೆ ನಿಲ್ಲುವುದಕ್ಕೆ ಭಯವಾಗುತ್ತದೆ, ನಮ್ಮನೆಲ್ಲ ನೋಡಿಕೊಳ್ಳೋದು ಅಮ್ಮ ಎಂದೆಲ್ಲ ಹೇಳಿದೆ.

ಇಂದು ನನ್ನ ಮಗಳಲ್ಲಿ ನಿಮ್ಮ ಅಪ್ಪನ ಬಗ್ಗೆ ಹೇಳು ಎಂದರೆ ನಮ್ಮಪ್ಪ ಆಫೀಸಿಗೆ ಹೋಗುತ್ತಾರೆ, ನಂಗೆ ಚಾಕಲೇಟ್, ಬಿಸ್ಕೆಟ್ ತರುತ್ತಾರೆ, ನಂಜೊತೆ ಆಟವಾಡುತ್ತಾರೆ,ನಂಗೆ ಪಾಠ ಹೇಳಿಕೊಡುತ್ತಾರೆ. ನನ್ನನ್ನು ರೆಡಿ ಮಾಡಿಸಿ ಸ್ಕೂಲ್ಗೆ ಕರೆದುಕೊಂಡು ಹೋಗುತ್ತಾರೆ, ಕೆಲವೊಮ್ಮೆ ಅಡುಗೆ ಮಾಡಿ ನಂಗೆ ತಿನ್ನಿಸುತ್ತಾರೆ ಎಂದೆಲ್ಲ ಹೇಳುತ್ತಾಳೆ,
ಎಷ್ಟೊಂದು ವ್ಯತ್ಯಾಸ, ಈಗಿನ ತಂದೆಯಂದಿರು, ಹಿಂದಿನ ಕಾಲದ ತಂದೆಯಂದಿರು ನಿರ್ವಹಿಸುವ ಪಾತ್ರ ಬದಲಾಗಿದೆ. ಸಮಾಜ ಪ್ರಗತಿ  ಹೊಂದುತ್ತಿದೆ, ಅದಕ್ಕೆ ತಕ್ಕಂತೆ ಮಕ್ಕಳ ಲಾಲನೆ, ಪೋಷಣೆಯ ಕ್ರಮ ಬದಲಾಗುತ್ತಿದೆ.

ಅಪ್ಪ,ಅಮ್ಮ ಎಂದರೆ ಹೀಗೆಯೇ ಇರಬೇಕು ಎಂಬ ನಮ್ಮ ಸಮಾಜದಲ್ಲಿನ ಅಲಿಖಿತ ಸಿದ್ದಾಂತ ನಿಧಾನವಾಗಿ ಬದಲಾಗುತ್ತಿದೆ, ಅಮ್ಮ ಮನೆಯಲ್ಲಿರುವವಳು, ಮಕ್ಕಳ ಲಾಲನೆ ಪೋಷಣೆ ಮಾಡಬೇಕಾದವಳು, ಅಪ್ಪ ಹೊರಗೆ ಹೋಗಿ ದುಡಿದು ತರಬೇಕು, ನಮ್ಮನ್ನೆಲ್ಲ ಸಾಕಬೇಕು ಎಂಬ ಅನಾದಿ ಕಾಲದಿಂದ ಬಂದ ಪದ್ಧತಿ ವಿದ್ಯಾವಂತ ದಂಪತಿಗಳಲ್ಲಿ ನಗರಗಳಲ್ಲಿ ಕಡಿಮೆಯಾಗುತ್ತಿದೆ. ಇಂದು ತಾಯಿಯಾದವಳು ವಿದ್ಯಾವಂತಳಾಗಿ ಉದ್ಯೋಗಕ್ಕೆ ಹೋಗುವುದರಿಂದ ಕುಟುಂಬದ ಆದಾಯವನ್ನು ನೋಡಿಕೊಂಡು ತಂದೆಯಾದವನು ಅಗತ್ಯಬಿದ್ದರೆ ಮನೆಯಲ್ಲಿರಲು, ಮಕ್ಕಳನ್ನು ನೋಡಿಕೊಳ್ಳಲು ರೆಡಿ ಇರುತ್ತಾರೆ.

ಇದರ ಭಾಗವಾಗಿಯೇ ಇಂದು ನಗರಗಳಲ್ಲಿ ಹುಟ್ಟಿಕೊಳ್ಳುತ್ತಿರುವ ‘ಸ್ಟೇ ಅಟ್ ಹೋಂ ಡ್ಯಾಡ್’ ಪರಿಕಲ್ಪನೆ. ಮಹಿಳೆಯರು ಇಂದು ಪುರುಷರು ಮಾಡುವ ಕೆಲಸಗಳನ್ನು ಮಾಡುತ್ತಿರುವುದರಿಂದ, ಪುರುಷರು ನಿಧಾನವಾಗಿ ಅಡುಗೆ ಮನೆಯೊಳಗೆ, ಮಕ್ಕಳನ್ನು ನೋಡಿಕೊಳ್ಳುವ ಕೆಲಸಕ್ಕೆ ಕೈಹಾಕುತ್ತಿದ್ದಾರೆ ಮತ್ತು ಅದನ್ನು ಅಷ್ಟೇ ಶ್ರದ್ಧೆಯಿಂದ, ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಅನ್ನುವುದು ವಿಶೇಷ.

'ಸ್ಟೇ ಅಟ್ ಹೋಂ ಡ್ಯಾಡ್' ನ್ನು ಗಂಡ-ಹೆಂಡತಿ ಯಾಕೆ ಅನುಸರಿಸುತ್ತಾರೆ ಎಂಬುದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಸಾಮಾನ್ಯವಾಗಿ, ಹೆಂಡತಿಗೆ ಗಂಡನಿಗಿಂತ ಉತ್ತಮವಾದ ಕೆಲಸ, ಸಂಬಳವಿದ್ದರೆ  ಮಕ್ಕಳಾದ ನಂತರ ಕೆಲಸ ಬಿಡುವುದಿಲ್ಲ. ಗಂಡನು ಮನೆಯಲ್ಲಿ ಉಳಿಯಲು ತಯಾರಾಗುತ್ತಾನೆ. ಮನೆಯಲ್ಲಿ ಇದ್ದುಕೊಂಡು ಮಗುವನ್ನು ನೋಡಿಕೊಂಡು ಮನೆಯಿಂದಲೇ ಆಫೀಸು ಕೆಲಸ ಮಾಡುತ್ತಾರೆ.

ಮಗುವಿನ ಬೆಳವಣಿಗೆಯಲ್ಲಿ ತಂದೆಗೆ ಸಮಯವನ್ನು ನೀಡಲು ಇದರಿಂದ ಅನುಕೂಲವಾಗುತ್ತದೆ. ಒಂದಷ್ಟು ವರ್ಷಗಳು ಮನೆಯಲ್ಲಿ ಉಳಿದು ನಂತರ ಮಗು ದೊಡ್ಡದಾದ ಮೇಲೆ ಪುನಃ ಕೆಲಸಕ್ಕೆ ಹೋಗಲು ತಂದೆಯಂದಿರು ಸಿದ್ದವಾಗುತ್ತಾರೆ.
ಸ್ಟೇ ಅಟ್ ಹೋಂ ಡ್ಯಾಡ್ ಪರಿಕಲ್ಪನೆಯಿಂದ ಅನುಕೂಲಗಳೂ ಇವೆ, ಅನಾನುಕೂಲಗಳೂ ಇವೆ. ನಗರಗಳಲ್ಲಿ ಇಂದು ಜೀವನ ಅತ್ಯಂತ ಸಂಕೀರ್ಣವಾಗುಗುತ್ತಿದ್ದು ದುಬಾರಿಯಾಗುತ್ತಿದೆ. ಮನೆಯ ಆರ್ಥಿಕ ವ್ಯವಹಾರಕ್ಕೆ, ಜೀವನ ವ್ಯವಸ್ಥೆಗೆ ಗಂಡ-ಹೆಂಡತಿ ಇಬ್ಬರೂ ದುಡಿಯುವುದು ಅನೇಕ ಕುಟುಂಬಗಳಿಗೆ ಅನಿವಾರ್ಯವಾಗಬಹುದು.

ಹೀಗಿರುವಾಗ  ತಂದೆಯಾದವನು ಮನೆಯಲ್ಲಿದ್ದು, ಪತ್ನಿಯನ್ನು ಕೆಲಸಕ್ಕೆ ಕಳುಹಿಸಿದರೆ ಆರ್ಥಿಕವಾಗಿ ಹೆಚ್ಚು ಸಶಕ್ತವಾಗಬಹುದು. ಇನ್ನೊಂದು ಮುಖ್ಯ ಅನುಕೂಲವೆಂದರೆ ಗಂಡ-ಹೆಂಡತಿ ಇಬ್ಬರೂ ಹೊರಗೆ ದುಡಿಯಲು ಹೋದರೆ ಮನೆಯಲ್ಲಿ ಮಕ್ಕಳು ಬಡವಾಗುತ್ತಾರೆ. ಅವರನ್ನು ಡೇ ಕೇರ್, ಪ್ಲೇ ಹೋಂ, ಬೇನಿ ಸಿಟ್ಟಿಂಗ್ ಅಥವಾ ಯಾರಾದರೂ ಕೆಲಸದ ಮಹಿಳೆಯನ್ನು ನೇಮಿಸಿ ಹೋಗಬೇಕು. ಅದು ಇನ್ನೂ ತಲೆನೋವಿನ ಸಂಗತಿ. ಬೇರೆಯವರ ಜೊತೆ ನಮ್ಮ ಮಕ್ಕಳು ಬೆಳೆಯುವುದಕ್ಕಿಂತ ನಮ್ಮ ಜೊತೆಯಲ್ಲಿದ್ದರೆ ಉತ್ತಮ. Family Time ಎಂದು ನಾವು ಇತ್ತೀಚೆಗೆ ಏನು ಕರೆಯುತ್ತೇವೆಯೋ ಅದನ್ನು ತಂದೆ-ತಾಯಿಗಳು ಇಬ್ಬರಲ್ಲಿ ಒಬ್ಬರಾದರೂ ನೀಡಿದರೆ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅನುಕೂಲ. ತಂದೆ-ಮಗುವಿನ ಮಧ್ಯೆ ದೀರ್ಘಕಾಲದ ಬಾಂಧವ್ಯ ಬೆಳೆಯುತ್ತದೆ.

ಮಕ್ಕಳ ಪೋಷಣೆ ಮುಂದೆ ವೃತ್ತಿಯನ್ನು ಬಿಡಬೇಕಾಗಿ ಬರುವುದು ಅಥವಾ ಸ್ವಲ್ಪ ರಾಜಿ ಮಾಡಿಕೊಳ್ಳುವುದು  ದೊಡ್ಡ ತ್ಯಾಗವಲ್ಲ ಎಂದೇ ತಿಳಿದುಕೊಳ್ಳುವುದು ಒಳಿತು.
ಅನಾನುಕೂಲಗಳನ್ನು ನೋಡಿದರೆ ಮಕ್ಕಳು, ದೊಡ್ಡವರಾಗುವವರೆಗೆ ಸಾಕಲು ಕನಿಷ್ಟ 5ರಿಂದ 7 ವರ್ಷದವರೆಗೆ ತಂದೆ ಮನೆಯಲ್ಲಿರಬೇಕಾಗುತ್ತದೆ. ಆಮೇಲೆಯೇ ಮಗುವಿಗೆ ಸ್ವಲ್ಪವಾದರೂ ತನ್ನ ಕೆಲಸ ತಾನು ಮಾಡಿಕೊಳ್ಳಲು ಸಾಧ್ಯ. ಅಷ್ಟು ವರ್ಷಗಳ ನಂತರ ಉತ್ತಮ ಕೆಲಸ ಸಿಗುವುದು ಕಷ್ಟ.

ಇನ್ನೊಂದು, ಸ್ಟೇ ಅಟ್ ಹೋಂ ಕಲ್ಪನೆಗೆ ನಮ್ಮ ಸಮಾಜದ ಒಂದು ವರ್ಗದ ಜನ ಇನ್ನೂ ತೆರೆದುಕೊಂಡಿಲ್ಲ. ಗಂಡ ಮನೆಯಲ್ಲಿದ್ದು, ಹೆಂಡತಿ ಕೆಲಸಕ್ಕೆ ಹೋಗುವುದೆಂದರೆ ಕೆಲವರಿಗೆ ಇರಿಸುಮುರುಸು.

ಇನ್ನೊಂದು ಮುಖ್ಯ ವಿಚಾರವನ್ನು ಗಮನಿಸಬೇಕು, ಮಕ್ಕಳನ್ನು ನೋಡಿಕೊಳ್ಳುವ ವಿಷಯದಲ್ಲಿ ಯಾವತ್ತೂ ತಾಯಿಯೇ ಮುಂದೆ. ತಾಯಿ-ಮಗುವಿನ ಸಂಬಂಧದಂತೆ ತಂದೆ-ಮಗುವಿನ ಸಂಬಂಧ ಏರ್ಪಡಲು ಸಾಧ್ಯವೇ ಇಲ್ಲ. ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬಂತೆ  ತಾಯಿ ಯಾವತ್ತಿಗೂ ತಾಯಿಯೇ, ಆಕೆಯ ಜಾಗವನ್ನು ಬೇರೆಯವರು ತುಂಬಲು ಸಾಧ್ಯವಿಲ್ಲ. ತಂದೆ ಒಂದು ಮಟ್ಟದವರೆಗಿನ ಪ್ರೀತಿ, ಅಕ್ಕರೆ, ಆರೈಕೆಯನ್ನು ಮಗುವಿಗೆ ನೀಡಬಹುದು ಅಷ್ಟೆ.

ಇವೆಲ್ಲವುಗಳ ಮಧ್ಯೆ ಕಾಲ, ಪರಿಸ್ಥಿತಿಗೆ ತಕ್ಕಂತೆ ನಾವು ಜೀವನ ಮಾಡಬೇಕು ಎಂಬ ನಮ್ಮ ಹಿರಿಯರ ಅನುಭವದ ಮಾತಿನಂತೆ ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಕಾಲ ಮತ್ತು ನಮ್ಮ ಪರಿಸ್ಥಿತಿ, ಜವಾಬ್ದಾರಿಗಳನ್ನು ನೋಡಿಕೊಂಡು ಕರ್ತವ್ಯ ನಿರ್ವಹಿಸಿದರೆ ಒಳಿತು.

- ಸುಮನಾ ಉಪಾಧ್ಯಾಯ
ಬೆಂಗಳೂರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com