ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ತೊರೆಯಲು ಇದೇನಾ ಕಾರಣ?

ರಿಯಲ್ ಮ್ಯಾಡ್ರಿಡ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಆ ತಂಡವನ್ನು ಬಿಟ್ಟು ಇಟಲಿ ಮೂಲದ ಜುವೆಂಟಸ್ ತಂಡ ಸೇರ್ಪಡೆಗೆ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿರುವಂತೆಯೇ, ರೊನಾಲ್ಡೋ ತಂಡ ತೊರೆಯಲು ಕಾರಣಗಳೇನು ಎಂಬ ಚರ್ಚೆ ಕೂಡ ಆರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: ರಿಯಲ್ ಮ್ಯಾಡ್ರಿಡ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಆ ತಂಡವನ್ನು ಬಿಟ್ಟು ಇಟಲಿ ಮೂಲದ ಜುವೆಂಟಸ್ ತಂಡ ಸೇರ್ಪಡೆಗೆ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿರುವಂತೆಯೇ, ರೊನಾಲ್ಡೋ ತಂಡ ತೊರೆಯಲು ಕಾರಣಗಳೇನು ಎಂಬ ಚರ್ಚೆ ಕೂಡ ಆರಂಭವಾಗಿದೆ.
ಚಾಂಪಿಯನ್ಸ್ ಲೀಗ್ ನಲ್ಲಿ ಬರೊಬ್ಬರಿ ಮೂರು ತಂಡವನ್ನು ಚಾಂಪಿಯನ್ ಮಾಡಿರುವ ರೊನಾಲ್ಡೋ, ತಮ್ಮ ಅದ್ಬುತ ಆಟದಿಂದಲೇ ಐದು ಬಾರಿ ಫುಟ್ಬಾಲ್ ಕ್ಷೇತ್ರದ ಆಸ್ಕರ್ ಬ್ಯಾಲನ್ ಡಿ ಓರ್ ಪ್ರಶಸ್ತಿ ಪಡೆದಿರುವ ರೊನಾಲ್ಡೋ ತಮ್ಮ ನೆಚ್ಚಿನ ತಂಡವನ್ನು ತೊರೆಯಲು ಹಲವು ಕಾರಣಗಳನ್ನು ತಜ್ಞರು ನೀಡಿದ್ದಾರೆ.
ಮೂಲಗಳ ಪ್ರಕಾರ ರಿಯಲ್ ಮ್ಯಾಡ್ರಿಡ್ ಆಡಳಿತ ಮಂಡಳಿ ಮತ್ತು ರೊನಾಲ್ಡೋ ನಡುವಿನ ಸಂಬಂಧ ಈಗ ಅಷ್ಟಕ್ಕಷ್ಟೇ ಎನ್ನಲಾಗಿದೆ. ಪ್ರಮುಖವಾಗಿ ಆಡಳಿತ ಮಂಡಳಿ ಮೇಲೆ ರೊನಾಲ್ಡೋ ಸಿಟ್ಟಾಗಿದ್ದಾರೆ ಎನ್ನಲಾಗಿದೆ. 
ಹಾಗಾದರೆ ರೊನಾಲ್ಡೋ ಸಿಟ್ಟಿಗೆ ಕಾರಣವೇನು?
1. ಮಾತು ಮುರಿದ ರಿಯಲ್ ಮ್ಯಾಡ್ರಿಡ್ ತಂಡ
ರೊನಾಲ್ಡೋ ಮತ್ತು ರಿಯಲ್ ಮ್ಯಾಡ್ರಿಡ್ ತಂಡದ ನಡುವೆ ಕಂದಕ ಆರಂಭವಾಗಿದ್ದೇ ಇಲ್ಲಿ.. ನೂತನ ಕಾಂಟ್ರಾಕ್ಟ್ ನವೀಕರಣ ವೇಳೆ ರಿಯಲ್ ಮ್ಯಾಡ್ರಿಡ್ ತಂಡ ಸಂಭಾವನೆ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ರೊನಾಲ್ಡೋಗೆ ನೀಡಿದ ಮಾತಿನಂತೆ ನಡೆದುಕೊಂಡಿಲ್ಲ. ಫುಟ್ಬಾಲ್ ಲೋಕದ ಸ್ಟಾರ್ ಆಟಗಾರರಾದ ನೇಮರ್ (36 ಮಿಲಿಯನ್ ಯೂರೋ), ಲಿಯೋನಲ್ ಮೆಸ್ಸಿ (46 ಮಿಲಿಯನ್ ಯೂರೋ) ಗರಿಷ್ಠ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ರೊನಾಲ್ಡೋಗೆ ರಿಯಲ್ ಮ್ಯಾಡ್ರಿಡ್ ತಂಡ ಆ ಮಟ್ಟಿಗಿನ ಸಂಭಾವನೆ ನೀಡುತ್ತಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2017ರಲ್ಲಿ ನಡೆದಿದ್ದ ಮಾತುಕತೆ ವೇಳೆ ಆಡಳಿತ ಮಂಡಳಿ 2017ರ ಡಿಸೆಂಬರ್ ನ ಚಾಂಪಿಯನ್ಸ್ ಲೀಗ್ ಟೂರ್ನಿ ಬಳಿಕ ಸಂಭಾವನೆ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಟೂರ್ನಿ ಬಳಿಕ ತಂಡ ತನ್ನ ಮಾತಿನಂತೆ ನಡೆದುಕೊಂಡಿಲ್ಲ.
2.ರೊನಾಲ್ಡೋ ಉತ್ತರಾಧಿಕಾರಿಗಾಗಿ ರಿಯಲ್ ಮ್ಯಾಡ್ರಿಡ್ ಹುಡುಕಾಟ
ಇನ್ನು ತಂಡದಲ್ಲಿ ರೊನಾಲ್ಡೋ ಇರುವಾಗಲೇ ರಿಯಲ್ ಮ್ಯಾಡ್ರಿಡ್ ತಂಡ ತನ್ನ ನೂತನ ನಾಯಕನಿಗಾಗಿ ಹುಡುಕಾಟ ನಡೆಸಿತ್ತು. ಪ್ರಮುಖವಾಗಿ ವೃತ್ತಿ ಜೀವನದಲ್ಲಿ ತಮ್ಮ ಎದುರಾಳಿಗಳಾದ ಬ್ರೆಜಿಲ್ ತಂಡ ನೇಮರ್ ಮತ್ತು ಉರುಗ್ವೇ ಸ್ಟ್ರೈಕರ್ ಲೂಯಿಸ್ ಸೌರೆಜ್ ರನ್ನು ತಂಡಕ್ಕೆ ಕರೆತರುವ ಪ್ರಯತ್ನವನ್ನು ಆಡಳಿತ ಮಂಡಳಿ ಮಾಡಿತ್ತು ಎನ್ನಲಾಗಿದೆ. ಮತ್ತೊಂದು ಪ್ರಮುಖ ವಿಚಾರವೆಂದರೆ ಪ್ರಸ್ತುತ ರೊನಾಲ್ಡೋ ನೀಡುತ್ತಿರುವ ಸಂಭಾವನೆಗೂ ಅಧಿಕ ಪ್ರಮಾಣದ ಸಂಭಾವನೆಯನ್ನು ನೇಮರ್ ಗೆ ನೀಡಲು ರಿಯಲ್ ಮ್ಯಾಡ್ರಿಡ್ ಮುಂದಾಗಿತ್ತು ಎಂಬ ವಿಚಾರ ಸೂಪರ್ ಸ್ಟಾರ್ ಅಸಮಾಧಾನಕ್ಕೆ ಕಾರಣವಾಗಿತ್ತು.
3.ತೆರಿಗೆ ವಂಚನೆ ಪ್ರಕರಣದಲ್ಲಿ ಬೆನ್ನಿಗೆ ನಿಲ್ಲದ ತಂಡ
ಇನ್ನು ಕ್ರಿಸ್ಟಿಯಾನೋ ರೊನಾಲ್ಡೋ ಚಿಂತೆಗೆ ಕಾರಣವಾಗಿರುವ ತೆರಿಗೆ ವಂಚನೆ ಪ್ರಕರಣ ಸಂಬಂಧ ರಿಯಲ್ ಮ್ಯಾಡ್ರಿಡ್ ತಂಡ ತಟಸ್ಥವಾಗಿದ್ದದ್ದು ಅವರ ಪ್ರಮುಖ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂದಿಗೂ ರಿಯಲ್ ಮ್ಯಾಡ್ರಿಡ್ ತಂಡ ಬಹಿರಂಗವಾಗಿ ರೊನಾಲ್ಡೋಗೆ ಬೆಂಬಲ ನೀಡಿದ ಉದಾಹರಣೆಯೇ ಇಲ್ಲ. ಡ್ರೆಸಿಂಗ್ ರೂ ಮತ್ತು ಖಾಸಗಿ ಭೇಟಿ ವೇಳೆ ಈ ಬಗ್ಗೆ ಸಣ್ಣ ಪುಟ್ಟ ಚರ್ಚೆ ನಡೆದಿದ್ದು ಬಿಟ್ಟರೆ ರಿಯಲ್ ಮ್ಯಾಡ್ರಿಡ್ ಎಂದೂ ರೊನಾಲ್ಡೋ ಬೆನ್ನಿಗೆ ನಿಲ್ಲಲಿಲ್ಲ ಎನ್ನಲಾಗಿದೆ. ಇದೇ ರೀತಿಯ ತೆರಿಗೆ ವಂಚನೆ ಪ್ರಕರಣ ಲಿಯೋನಲ್ ಮೆಸ್ಸಿ ಮೇಲೂ ಕೂಡ ಇದೆ. ಆದರೆ ಆತ ಪ್ರತಿನಿಧಿಸುವ ಎಫ್ ಸಿ ಬಾರ್ಸಿಲೋನಾ ತಂಡ ಆತನ ಬೆನ್ನಿಗೆ ನಿಂತು ಕಾನೂನು ಹೋರಾಟ ನಡೆಸುತ್ತಿದೆ. ಇದೇ ರೀತಿಯ ಬೆಂಬಲವನ್ನು ತಂಡದಿಂದ ರೊನಾಲ್ಡೋ ಆಶಿಸಿದ್ದರು.
4. ಗೋಲು ಬಾರಿಸದ ಹೊರತು ತಂಡದಲ್ಲಿ ರೊನಾಲ್ಡೋಗಿಲ್ಲ ಕಿಮ್ಮತ್ತು
ಇನ್ನು ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ತಂಡದ ನಾಯಕನಾಗಿದ್ದರೂ, ಗೋಲು ಬಾರಿಸದ ಹೊರತು ಆತನಿಗೆ ತಂಡದ ಬೆಂಬಲ ಇರುವುದಿಲ್ಲ. ಆಟಗಾರರು, ಕೋಚ್ ಜಿನೆದಿನ್ ಜಿಡಾನ್ ಹೊರತು ಪಡಿಸಿ ತಂಡದ ಆಡಳಿತ ಮಂಡಳಿ ರೊನಾಲ್ಜೋ ಬೆನ್ನಿಗೆ ನಿಲ್ಲುತ್ತಿಲ್ಲ. ಸ್ಪಾನಿಷ್ ಸೂಪರ್ ಕಪ್ ಟೂರ್ನಿಯಲ್ಲಿ ರೊನಾಲ್ಡೋ ಗೋಲು ರಹಿತವಾಗಿ ಪೆವಿಲಿಯನ್ ಗೆ ಬಂದಾಗ ಕೇವಲ ಕೋಚ್ ಮಾತ್ರ ರೊನಾಲ್ಡೋಗೆ ಉತ್ಸಾಹ ತುಂಬಿದ್ದರು. ಇದು ರೊನಾಲ್ಡೋ ನೋವಿಗೆ  ಕಾರಣ ಎನ್ನಲಾಗಿದೆ. 
ಈ ಕಾರಣಗಳಿಂದಾಗಿಯೇ ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ತಂಡ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com