ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಜರ್ಮನಿಯ ಸ್ಟಾರ್ ಆಟಗಾರ ಮೆಸುಟ್ ಒಝಿಲ್ 'ನೋವಿನ ವಿದಾಯ'

ಜರ್ಮನಿ ತಂಡದ ಖ್ಯಾತ ಆಟಗಾರ ಮೆಸುಟ್ ಒಝಿಲ್ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನೋವಿನ ವಿದಾಯ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬರ್ಲಿನ್: ಜರ್ಮನಿ ತಂಡದ ಖ್ಯಾತ ಆಟಗಾರ ಮೆಸುಟ್ ಒಝಿಲ್ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನೋವಿನ ವಿದಾಯ ಹೇಳಿದ್ದಾರೆ.
ಈ ಹಿಂದೆ ರಷ್ಯಾದಲ್ಲಿ ನಡೆದ ಫೀಫಾ ವಿಶ್ವಕಪ್ ಟೂರ್ನಿ ವೇಳೆ ತಮ್ಮ ಅಮೋಘ ಆಟದಿಂದಾಗಿ ಗಮನ ಸೆಳೆದಿದ್ದ ಒಝಿಲ್ ಇದೀಗ ತಮ್ಮದೇ ದೇಶದ ಅಭಿಮಾನಿಗಳ ಆಕ್ರೋಶ ಎದುರಿಸುತ್ತಿದ್ದು, ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ. 
ಒಝಿಲ್ ನೋವಿನ ವಿದಾಯಕ್ಕೆ ಕಾರಣವಾಯ್ತು ಆ ಒಂದು ಫೋಟೋ..
ಇನ್ನು ಜರ್ಮನಿ ತಂಡದ ಸ್ಟಾರ್ ಆಟಗಾರ ಒಝಿಲ್ ಈ ಹಿಂದೆ ಟರ್ಕಿ ಅಧ್ಯಕ್ಷ ರೆಸಿಪ್ ಎರ್ಡೋಗನ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದ್ದರು. ಈ ಫೋಟೋ ಜರ್ಮನಿಯಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಒಝಿಲ್ ವಿರುದ್ಧ ಸ್ವತಃ ಜರ್ಮನಿ ಫುಟ್ಬಾಲ್ ಸಂಸ್ಥೆ ಸೇರಿದಂತೆ ಅಲ್ಲಿನ ಮಾಧ್ಯಮಗಳು ಕಿಡಿಕಾರಿ ಬರೆದಿದ್ದವು. ಅಲ್ಲದೆ ವಿಶ್ವಕಪ್ ನಲ್ಲಿ ಜರ್ಮನಿ ಸೋಲಿಗೆ ಒಝಿಲ್ ಕಾರಣ ಎಂಬ ರೀತಿಯಲ್ಲಿ ಪತ್ರಿಕೆಗಳು ಮತ್ತು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಒಝಿಲ್ ಇಂದು ತಮ್ಮ ಜರ್ಮನಿ ತಂಡಕ್ಕೆ ರಾಜಿನಾಮೆ ನೀಡಿದ್ದಾರೆ.
ಇನ್ನು ಮೆಸುಟ್ ಒಝಿಲ್ ಮೂಲತಃ ಟರ್ಕಿ ಮೂಲದವರಾಗಿದ್ದು, ಇಂದಿಗು ಅವರ ಪೋಷಕರು ಟರ್ಕಿಯಲ್ಲೇ ನೆಲೆಸಿದ್ದಾರೆ. ಒಝಿಲ್ ಮಾತ್ರ ಜರ್ಮನಿಯಲ್ಲಿ ನೆಲೆಕಂಡುಕೊಂಡಿದ್ದು, ಇದೇ ಕಾರಣಕ್ಕೆ ಒಝಿಲ್ ಜರ್ಮನಿಗೆ ಮೋಸ ಮಾಡಿದರು ಎಂದು ಜರ್ಮನಿ ಫುಟ್ಬಾಲ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಫೋಟೋ ಪೋಸ್ ಗೆ ಸ್ಪಷ್ಟನೆ ನೀಡಿದ ಆಟಗಾರ
ಇನ್ನು ಜರ್ಮನಿಯಲ್ಲಿ ಭಾರಿ ವಿವಾದವನ್ನೇ ಹುಟ್ಟುಹಾಕಿರುವ ಫೋಟೋ ಕುರಿತಂತೆ ಒಝಿಲ್ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದು, ನನ್ನ ಪೋಷಕರು ನೆಲೆಸಿರುವ ದೇಶದ ಸರ್ವೋಚ್ಛ ಕಚೇರಿಯ ಮುಖ್ಯಸ್ಥರಿಗೆ ನಾನು ಗೌರವ ನೀಡಿದ್ದೇನೆ. ಹಾಗೆಂದ ಮಾತ್ರಕ್ಕೆ ನನ್ನನ್ನು ದೇಶದ್ರೋಹಿಯಂತೆ ಬಿಂಬಿಸುವುದು ಸರಿಯಲ್ಲ. ಮಾಧ್ಯಮಗಳು ಮತ್ತು ಪತ್ರಿಕೆಗಳು ಜರ್ಮನಿ ಪ್ರಜೆಗಳನ್ನು ನನ್ನವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಜರ್ಮನ್ ಫುಟ್ಬಾಲ್ ಸಂಸ್ಥೆಯ ವಿರುದ್ಧವೂ ಒಝಿಲ್ ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com