ಏಕಾಂಗಿಯಾಗಿ ರೊನಾಲ್ಡೋ ಉರುಗ್ವೇ ಮಣಿಸಲು ಸಾಧ್ಯವಿಲ್ಲ: ತಂಡಕ್ಕೆ ಪೋರ್ಚುಗಲ್ ಕೋಚ್ ಎಚ್ಚರಿಕೆ

ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಏಕಾಂಗಿ ಹೋರಾಟದಿಂದ ಮಾತ್ರ ಉರುಗ್ವೆ ತಂಡವನ್ನು ಮಣಿಸಲು ಸಾಧ್ಯವಿಲ್ಲ ಎಂದು ತಂಡದ ಕೋಚ್ ಫರ್ನಾಂಡೋ ಸ್ಯಾಂಟೋಸ್ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಏಕಾಂಗಿ ಹೋರಾಟದಿಂದ ಮಾತ್ರ ಉರುಗ್ವೆ ತಂಡವನ್ನು ಮಣಿಸಲು ಸಾಧ್ಯವಿಲ್ಲ ಎಂದು ತಂಡದ ಕೋಚ್ ಫರ್ನಾಂಡೋ ಸ್ಯಾಂಟೋಸ್ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಫೀಫಾ ವಿಶ್ವಕಪ್ ಟೂರ್ನಿಯ ಅಂತಿಮ 16ರ ನಾಕೌಟ್ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಪೋರ್ಚುಗಲ್ ತಂಡ ಉರುಗ್ವೆಯನ್ನು ಎದುರಿಸಲಿದೆ. ಲೀಗ್ ಹಂತದ ಮೂರು ಪಂದ್ಯಗಳಲ್ಲಿ ಪೋರ್ಚುಗಲ್ ತಂಡ ರೊನಾಲ್ಡೋ ಅವರ ಸಾಹಸದ 4 ಗೋಲುಗಳ ನೆರವಿನಿಂದ ನಾಕೌಟ್ ಹಂತಕ್ಕೆ ನಡೆದಿತ್ತು. ಇದೀಗ ತಂಡ ರೊನಾಲ್ಡೋ ಹೊರತಾಗಿಯೂ ಅದೇ ಪ್ರದರ್ಶನ ನೀಡಬೇಕಿದೆ ಎಂಬುದು ತಂಡದ ಕೋಚ್ ಫರ್ನಾಂಡೋ ಸ್ಯಾಂಟೋಸ್ ಅಭಿಪ್ರಾಯವಾಗಿದೆ.
ಈ ಬಗ್ಗೆ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಸ್ಟಿಯಾನೋ ರೊನಾಲ್ಡೋ ತಂಡದ ಸ್ಟಾರ್ ಆಟಗಾರ ಮತ್ತು ನಿರ್ಣಾಯಕ ಕೂಡ ಇದರಲ್ಲಿ ಎರಡು ಮಾತಿಲ್ಲ. ಆದರೆ ನಾವು ರೊನಾಲ್ಡೋ ಹೊರತಾಗಿಯೂ ಅದೇ ಪ್ರದರ್ಶನ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಒಂದು ತಂಡದ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡ. ಯಾವುದೇ ಓರ್ವ ಆಟಗಾರನ ಮೇಲೆ ಇಡೀ ತಂಡ ಅವಲಂಬನೆಯಾಗುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ತಂಡ ರೊನಾಲ್ಡೋ ಹೊರತಾಗಿಯೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದು, ಈ ಹಿಂದೆ ನಡೆದ ಯೂರೋ ಕಪ್ ನಲ್ಲಿ ಇದು ಸಾಬೀತಾಗಿದೆ. ರೊನಾಲ್ಡೋ ಗಾಯಗೊಂಡು ಅಂಗಣದಿಂದ ಹೊರಗುಳಿದಾಗ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಇಂದಿನ ಪಂದ್ಯದಲ್ಲಿ ನಾವು ಒಂದು ತಂಡವಾಗಿ ಆಡಬೇಕಿದ್ದು, ರೊನಾಲ್ಡೋ ಪ್ರದರ್ಶನದ ಮೇಲೆಯೇ ಅವಲಂಬಿತರಾದರೆ ಖಂಡಿತಾ ಸೋಲುತ್ತೇವೆ. ರೊನಾಲ್ಡೋ 3 ಗೋಲು ಗಳಿಸಿದರೂ ಅದರಲ್ಲಿ ತಂಡದ ಪರಿಶ್ರಮವಿದ್ದೇ ಇರುತ್ತದೆ ಎಂದು ಹೇಳಿದರು.
ಅಂತೆಯೇ ಉರುಗ್ವೆ ತಂಡದ ನಾಯಕ ಹಾಗೂ ತಂಡದ ಡಿಫೆಂಡರ್ ಡಿಯಾಗೋ ಗೊಡಿನ್, ಸ್ಟ್ರೈಕರ್ ಲೂಯಿಸ್ ಸೌರೆಜ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವರ ಕುರಿತು ವಿಶೇಷ ಕಾಳಜಿ ಆಗತ್ಯ ಎಂದು ಸ್ಯಾಂಟೋಸ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com