

ಪ್ರತಿದಿನದ ಅಡುಗೆಯಲ್ಲಿ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದೆಯೇ? ಹಾಗಾದರೆ ಈ ಬಾರಿ ವಿಭಿನ್ನ ರುಚಿಯ ಟೊಮೆಟೊ ಗೊಡ್ಡುಖಾರ ತಯಾರಿಸಿ ನೋಡಿ. ಟೊಮೆಟೊ ಹಣ್ಣಿನ ಹುಳಿ, ಬ್ಯಾಡಗಿ ಮೆಣಸಿನಕಾಯಿಯ ಬಣ್ಣ ಹಾಗೂ ಬೆಳ್ಳುಳ್ಳಿಯ ಘಮ ಒಟ್ಟಾಗಿ ಸೇರಿ ಈ ಖಾರಕ್ಕೆ ವಿಶೇಷ ರುಚಿ ನೀಡುತ್ತವೆ.
ಬಿಸಿ ಬಿಸಿ ಅನ್ನದ ಜೊತೆ ಮಾತ್ರವಲ್ಲದೆ ಚಪಾತಿ ಮತ್ತು ರೊಟ್ಟಿಯೊಂದಿಗೂ ಇದನ್ನು ಸವಿಯಬಹುದು. ಹಾಗಾದರೆ, ಮನೆಯಲ್ಲಿರುವ ಸರಳ ಪದಾರ್ಥಗಳನ್ನು ಬಳಸಿ ರುಚಿಕರವಾದ ಟೊಮೆಟೊ ಗೊಡ್ಡುಖಾರ ಮಾಡುವ ವಿಧಾನ ಇಲ್ಲಿದೆ...
ಬೇಕಾಗುವ ಪದಾರ್ಥಗಳು...
ಬ್ಯಾಡಗಿ ಮೆಣಸಿನ ಕಾಯಿ- 5
ಹುಣಸೆಹಣ್ಣು- ನಿಂಬೆಹಣ್ಣು ಗಾತ್ರದಷ್ಟು
ಒಣಗಿದ ಮೆಣಸಿನಕಾಯಿ- 6-7
ಬೆಳ್ಳುಳ್ಳಿ- ಅರ್ಧ ಹಿಡಿಯಷ್ಟು
ಜೀರಿಗೆ-ಸ್ವಲ್ಪ
ಕಾಳು ಮೆಣಸು-ಸ್ವಲ್ಪ
ಕೊತ್ತಂಬರಿ ಸೊಪ್ಪು-ಸ್ವಲ್ಪ
ಟೊಮೆಟೊ- 2
ಸಾಸಿವೆ-ಸ್ವಲ್ಪ
ಕರಿಬೇವು-ಸ್ವಲ್ಪ
ಎಣ್ಣೆ-ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
ಮಿಕ್ಸಿ ಜಾರ್'ಗೆ ಬ್ಯಾಡಗಿ ಮೆಣಸಿನಕಾಯಿ, ಹುಣಸೆಹಣ್ಣು, ಒಣಗಿದ ಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಮೆಣಸು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೊ ಹಾಕಿ ನೀರು ಹಾಕದಂತೆ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.
ಬಳಿಕ ಒಲೆಯ ಮೇಲೆ ಒಂದು ಬಾಣಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ ಸಾಸಿವೆ ಹಾಗೂ ಕರಿಬೇಕು, ಜಜ್ಜಿದ ಸ್ವಲ್ಪ ಬೆಳ್ಳುಳ್ಳಿ ಹಾಕಿ.
ನಂತರ ರುಬ್ಬಿಕೊಂಡ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಮಸಾಲೆ ಎಣ್ಣೆ ಬಿಡುವವರೆಗೆ ಕೈಯಾಡಿಸುತ್ತಿರಿ. ಇದೀಗ ರುಚಿಕರವಾದ ಟೊಮೆಟೊ ಗೊಡ್ಡುಖಾರ ಸವಿಯಲು ಸಿದ್ಧ. ಇದನ್ನು ಅನ್ನ ಹಾಗೂ ಚಪಾತಿ, ರೊಟ್ಟಿ ಜೊತೆಗೆ ಸವಿಯಬಹುದು.