ಗೋರಿಕಾಯಿಯಿಂದ ಮಾಡಿ ರುಚಿಕರ ಕೂಟು; ಅನ್ನಕ್ಕೆ ಹೇಳಿ ಮಾಡಿಸಿದ ಕಾಂಬಿನೇಷನ್, ಒಮ್ಮೆ ಮಾಡಿ ನೋಡಿ...

ಗೋರಿಕಾಯಿಯಿಂದ ಪಲ್ಯ, ಸಾಂಬಾರ್ ಮಾತ್ರವಲ್ಲದೆ ರುಚಿಯಾದ ಕೂಟನ್ನೂ ತಯಾರಿಸಬಹುದು. ಬೇಳೆ, ತೆಂಗಿನಕಾಯಿ ಹಾಗೂ ಸಾಂಬಾರ್‌ ಮಸಾಲೆಯ ಸುವಾಸನೆಯೊಂದಿಗೆ ತಯಾರಾಗುವ ಗೋರಿಕಾಯಿ ಕೂಟು ಬಿಸಿ ಅನ್ನದೊಂದಿಗೆ ಸವಿಯಲು ಹೇಳಿ ಮಾಡಿಸಿದ ಕಾಂಬಿನೇಷನ್.
Gorikayi kootu
ಗೋರಿಕಾಯಿ ಕೂಟು
Updated on

ಗೋರಿಕಾಯಿಯಿಂದ ಪಲ್ಯ, ಸಾಂಬಾರ್ ಮಾತ್ರವಲ್ಲದೆ ರುಚಿಯಾದ ಕೂಟನ್ನೂ ತಯಾರಿಸಬಹುದು. ಬೇಳೆ, ತೆಂಗಿನಕಾಯಿ ಹಾಗೂ ಸಾಂಬಾರ್‌ ಮಸಾಲೆಯ ಸುವಾಸನೆಯೊಂದಿಗೆ ತಯಾರಾಗುವ ಗೋರಿಕಾಯಿ ಕೂಟು ಬಿಸಿ ಅನ್ನದೊಂದಿಗೆ ಸವಿಯಲು ಹೇಳಿ ಮಾಡಿಸಿದ ಕಾಂಬಿನೇಷನ್. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಸಾಂಪ್ರದಾಯಿಕ ರೆಸಿಪಿ ಊಟದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಬೇಕಾಗುವ ಪದಾರ್ಥಗಳು...

  • ಗೋರಿಕಾಯಿ – ½ ಕೆ.ಜಿ

  • ತೊಗರಿಬೇಳೆ – ½ ಬಟ್ಟಲು

  • ಪಾಲಾಕ್ ಸೊಪ್ಪು- ಸ್ಲಲ್ಪ (ತೊಳೆದು ಸಣ್ಣಗೆ ಕತ್ತರಿಸಿದ್ದು)

  • ಈರುಳ್ಳಿ – 1

  • ಟೊಮ್ಯಾಟೊ – 1

  • ಅರಿಶಿನ – ¼ ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ – 2 ಚಮಚ

  • ಹುಣಸೆಹಣ್ಣು- ಸ್ವಲ್ಪ

  • ಬೆಲ್ಲ-ಸ್ವಲ್ಪ

ಮಸಾಲೆಗೆ...

  • ತುರಿದ ತೆಂಗಿನಕಾಯಿ – ½ ಬಟ್ಟಲು

  • ಒಣಮೆಣಸಿನಕಾಯಿ – 3-4

  • ದನಿಯಾ – 1 ಚಮಚ

  • ಜೀರಿಗೆ – ½ ಚಮಚ

  • ಕಡಲೆಬೇಳೆ – 1 ಚಮಚ

  • ಉದ್ದಿನಬೇಳೆ – 1 ಚಮಚ

  • ಮೆಂತ್ಯ – ಸ್ವಲ್ಪ

Gorikayi kootu
ಗೋರಿಕಾಯಿ ಶೇಂಗಾ ಪಲ್ಯ ಹೀಗೆ ಮಾಡಿ; ಊಟದ ರುಚಿಯೇ ಡಬಲ್..!

ಒಗ್ಗರಣೆಗೆ..

  • ಸಾಸಿವೆ – ½ ಚಮಚ

  • ಜೀರಿಗೆ – ½ ಚಮಚ

  • ಒಣಮೆಣಸಿನಕಾಯಿ – 1

  • ಕರಿಬೇವು – ಸ್ವಲ್ಪ

  • ಇಂಗು – ಚಿಟಿಕೆ

ಮಾಡುವ ವಿಧಾನ...

  • ಮೊದಲು ತೊಗರಿಬೇಳೆಯನ್ನು ತೊಳೆದು ಅರಿಶಿನದೊಂದಿಗೆ ಕುಕ್ಕರ್‌ನಲ್ಲಿ ಮೃದುವಾಗಿ ಬೇಯಿಸಿಕೊಳ್ಳಿ. ಬಳಿಕ ಗೋರಿಕಾಯಿಯನ್ನು ಚೆನ್ನಾಗಿ ತೊಳೆದು, ಎರಡೂ ಬದಿಯ ತುದಿಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಂದ ಬೇಳೆಗೆ ಗೋರಿ ಕಾಯಿ ಹಾಗೂ ಸ್ವಲ್ಪ ಉಪ್ಪು ಹಾಕಿ ಮತ್ತೊಂದೂ ಕೂಗು ಕೂಗಿಸಿಕೊಳ್ಳಿ.

  • ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ದನಿಯಾ, ಜೀರಿಗೆ, ಮೆಂತ್ಯ, ಕಾಳು ಮೆಣಸು ಹಾಗೂ ಒಣಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ಇವು ತಣ್ಣಗಾದ ಬಳಿಕ ತುರಿದ ತೆಂಗಿನಕಾಯಿಯೊಂದಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

  • ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಟೊಮ್ಯಾಟೊ ಹಾಕಿ ಹುರಿಯಿರಿ. ಬಳಿಕ ಪಾಲಕ್ ಸೊಪ್ಪು, ಬೆಂದ ಬೇಳೆ ಹಾಗೂ ಗೋರಿಕಾಯಿ ಹಾಕಿ ಸ್ವಲ್ಪ ಹುರಿಯಿರಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣ, ಹುಣಸೆ ಹಣ್ಣು, ಬೆಲ್ಲ ಸ್ವಲ್ಪ ಸೇರಿ ಮಿಶ್ರಣ ಮಾಡಿ. ಅರಿಶಿನ ಹಾಗೂ ಉಪ್ಪು ಸೇರಿಸಿ ಕಲಸಿ. ಅಗತ್ಯವಿದ್ದಷ್ಟು ನೀರು ಹಾಕಿ ಮಧ್ಯಮ ಉರಿಯಲ್ಲಿ 5–7 ನಿಮಿಷ ಕುದಿಸಿರಿ.

  • ಕೊನೆಯಲ್ಲಿ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ, ಕರಿಬೇವು ಹಾಗೂ ಇಂಗಿನ ಒಗ್ಗರಣೆಯನ್ನು ಹಾಕಿ ಕಲಿಸಿದರೆ ರುಚಿಯಾದ ಗೋರಿಕಾಯಿ ಕೂಟು ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com