ವಿಘ್ನವಿನಾಶಕ ಗಣಪನ ಪೂಜಾ ವಿಧಾನ ಹೇಗೆ?

ವಿಘ್ನ ವಿನಾಶಕ ಗಣೇಶನಿಗೆ ಪೂಜಾ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಪೂಜೆಯಲ್ಲೂ ಮೊದಲು ಆರಾಧಿಸುವುದು ಗಣಪತಿಯನ್ನೇ. ಹೊಸ ಕಾರ್ಯ ಹಾಗೂ ಯೋಜನಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂಬುದಕ್ಕೆ ಮೊದಲು ಗಣೇಶನನ್ನು...
ವಿಘ್ನವಿನಾಶಕ ಗಣಪನ ಪೂಜಾ ವಿಧಾನ ಹೇಗೆ?
ವಿಘ್ನವಿನಾಶಕ ಗಣಪನ ಪೂಜಾ ವಿಧಾನ ಹೇಗೆ?

ವಿಘ್ನ ವಿನಾಶಕ ಗಣೇಶನಿಗೆ ಪೂಜಾ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಪೂಜೆಯಲ್ಲೂ ಮೊದಲು ಆರಾಧಿಸುವುದು ಗಣಪತಿಯನ್ನೇ. ಹೊಸ ಕಾರ್ಯ ಹಾಗೂ ಯೋಜನಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂಬುದಕ್ಕೆ ಮೊದಲು ಗಣೇಶನನ್ನು ಆರಾಧಿಸುವುದುಂಟು. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯನ್ನು ಗಣೇಶ ಕೈಲಾಸದಿಂದ ಭೂಮಿಗೆ ಬರುತ್ತಾನೆಂದು ನಮ್ಮ ಪುರಾಣಗಳಲ್ಲಿ ನಂಬಿಕೆ. ಹೀಗಾಗಿಯೇ ಅಂದು ಗಣೇಶ ಚತುರ್ಥಿಯೆಂದು ಆಚರಣೆ ಮಾಡಲಾಗುತ್ತದೆ. ಎಲ್ಲಾ ದೇವತೆಗಳ ಆರಾಧನೆಯಂತೆಯೇ ಗಣಪತಿಗೂ ವಿಶೇಷ ಆಚರಣೆಯ ದಿನವಿದ್ದು, ಈ ದಿನವನ್ನು ಗಣೇಶ ಚತುರ್ಥಿ ಆಚರಣೆ ಮಾಡುತ್ತಾರೆ.


ಎಲ್ಲಾ ದೈವಗಳ ಪೂಜೆಗೆ ಪದ್ಧತಿ ವಿಧಾನವಿದ್ದಂತೆಯೇ ವಿಘ್ನವಿನಾಶಕ ವಿನಾಯಕನ ಪೂಜೆಗೂ ಪದ್ಧತಿಯಿದ್ದೂ ಪದ್ಧತಿಯ ಮೂಲಕ ಯಾವುದೇ ಸಮಸ್ಯೆಯಿಲ್ಲದೇ ಪೂಜೆ ಮಾಡಿದರೆ ವಿನಾಯಕನ ಕೃಪೆಗೆ ಪ್ರತಿಯೊಬ್ಬರೂ ಪಾತ್ರರಾಗಬಹುದು.

ಹಾಗಾದರೆ ಗಣಪತಿ ಪೂಜೆ ಮಾಡುವುದು ಹೇಗೆ ಎಂಬುದರ ವಿಧಾನ ಇಲ್ಲಿದೆ...

ಗಣಪತಿ ಪೂಜೆ ಮಾಡುವವರು ವ್ರತ ಇರುವವರು ಚತುರ್ಥಿ ದಿನದಂದು ಸೂರ್ಯ ಹುಟ್ಟುವುದಕ್ಕೂ ಮುದಲೇ ಎದ್ದು ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಶುದ್ಧ ನೀರಿನಲ್ಲಿ ಸ್ನಾನ ಮಾಡಬೇಕು.

ವ್ರತದ ಸಮಯದಲ್ಲಿ ಪ್ರತೀ ಕ್ಷಣ ಗಣಪನ ಜಪ ಮಾಡಬೇಕು. ಸ್ತೋತ್ರಪಠಣ ಹಾಗೂ ನಾಮ ಜಪವನ್ನು ಮಾಡಬೇಕು. ಗಣಪತಿ ವ್ರತ ಮಾಡುವವರು ದೇವರ ಬಳಿ ಇಚ್ಛೆಯನ್ನು ಹೇಳಿಕೊಂಡು ಗಣಪನನ್ನು ಬೇಡಿ ಸಂಕಲ್ಪ ಮಾಡಿಕೊಳ್ಳಬೇಕು. ನಂತರ ದಿನವೆಲ್ಲ ಉಪವಾಸ ಇರಬೇಕು. ಇದು ಕಷ್ಟವಾದರೆ ಹಾಲು, ಹಣ್ಣು ಸೇವಿಸಬಹುದು.



ವ್ರತ ಮಾಡುವವರು ಮೊದಲು ಮಡಿವಸ್ತ್ರ ಅಥವಾ ಪಿತಾಂಬರ ಅಥವಾ ಮಡಿವಸ್ತ್ರ (ಧೋತರ) ಮತ್ತು ಉತ್ತರೀಯವನ್ನು ಧರಿಸಿರಬೇಕು. ಪೂಜೆಯನ್ನು ಆರಂಭಿಸುವ ಮೊದಲು ಮನೆಯಲ್ಲಿನ ಹಿರಿಯರಿಗೆ ಮತ್ತು ಪುರೋಹಿತರಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆಯಬೇಕು. ಪ್ರತಿದಿನ ಬೆಳಗ್ಗೆ ಮೂರ್ತಿಯ ಮೇಲಿನ ನಿರ್ಮಾಲ್ಯ ವನ್ನು ತೆಗೆದು ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಸಾಯಂಕಾಲ ಷೋಡಶೋಪಚಾರ ಪೂಜೆ ಅಥವಾ ಗಂಧಾ? ಪಂಚೋಪಚಾರ ಪೂಜೆ ಮಾಡಬೇಕು. ಪೂಜೆಯಲ್ಲಿನ ಶ್ಲೋಕ ಅಥವಾ ಮಂತ್ರವನ್ನು ಉಚ್ಚರಿ ಸಲು ಬರದವರು ಕೇವಲ ನಾಮಮಂತ್ರ ಉಚ್ಚರಿಸಿ ದೇವತೆಗೆ ಉಪಚಾರ ಸಮರ್ಪಿಸಬೇಕು,

ಪೂಜೆ ಮಾಡುವವರು ಮೊದಲು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.ರಂಗೋಲಿಯನ್ನು ಹಾಕಬೇಕು. ರಂಗೋಲಿ ಹಾಕುವಾಗ ದೇವತೆಗಳ ಹೆಸರು ಅಥವಾ ದೇವರ ರೂಪದ ರಂಗೋಲಿಯನ್ನು ಬಿಡಿಸಬಾರದು. ಸ್ಥಳದಲ್ಲಿ ಅಷ್ಟದಳದ ಪದ್ಮ ರಂಗೋಲಿಯನ್ನು ಬಿಡಿಸಬೇಕು. ನಂತರ ಅದಕ್ಕೆ ಅರಿಶಿನ ಕುಂಕುಮ ಅರ್ಪಿಸಬೇಕು.


ಇದರ ಮೇಲೆ ತಟ್ಟೆಯೊಂದನ್ನು ಇಟ್ಟು ಮುಷ್ಟಿಯಲ್ಲಿ 5 ಹಿಡಿ ಅಕ್ಕಿ ಹಾಕಬೇಕು. ನಂತರ ಇದರ ಮೇಲೆ ಕಲಶ ಸ್ಥಾಪಿಸಬೇಕು.ಕಲಶ ಸ್ಥಾಪನೆಗೆ ಶುದ್ಧವಾದ ಒಂದು ಚೊಂಬನ್ನು ತೆಗೆದುಕೊಂಡು ಅದರಲ್ಲಿ ತುಂಬಿದ ಬಿಂದಿಗೆಯ ಶುದ್ಧ ನೀರು ಹಾಕಿ. ಅದರ ಸುತ್ತಲೂ ಐದು ವೀಳ್ಯದೆಲೆ ಇಡಬೇಕು. ನಂತರ ಇದರ ಮೇಲೆ ತಂಗಿನಕಾಯಿ ಇಡಬೇಕು. ತಯಾರಾದ ಈ ಕಲಶವನ್ನು ಅಕ್ಕಿ ಹರಡಿದ ತಟ್ಟೆ ಮೇಲೆ ಕಲಶ ಇಡಬೇಕು.

ಶ್ರೀ ಗಣೇಶ ಮೂರ್ತಿ ಸ್ಥಾಪನೆ


ಗಣಪತಿ ಮೂರ್ತಿ ಸ್ಥಾಪನೆಯನ್ನು ಪೂರ್ವ ದಿಕ್ಕಿನಲ್ಲಿ ಮಾಡಬೇಕು. ಒಂದು ಈ ದಿಕ್ಕು ಸಾಧ್ಯವಾಗದಿದ್ದ ಪಕ್ಷದಲ್ಲಿ ಪೂಜಕನ ಮುಖವು ದಕ್ಷಿಣ ದಿಕ್ಕಿಗೆ ಬರದಂತೆ ಮೂರ್ತಿಯನ್ನು ಸ್ಥಾಪಿಸಬೇಕು.


ಗಣೇಶನ ಮೂರ್ತಿಯನ್ನು ಸ್ಥಾಪನೆ ಮಾಡುವಾಗ ಕೆಳಗೆ ಹಾಕುವ ಮಣೆಯ ಮಧ್ಯಭಾಗದಲ್ಲಿ 1 ಮುಷ್ಠಿ ಅಕ್ಷತೆಯನ್ನು ಇಡಬೇಕು. ಇದರ ಮೇಲೆ ಕುಂಕುಮದಿಂದ ಸ್ವಸ್ತಿಕ್ ರಂಗೋಲಿಯನ್ನು ಬಿಡಸಿರಬೇಕು. ನಂತರ ಇದರ ಮೇಲೆ ಗಣೇಶ ಮೂರ್ತಿಯನ್ನು ಇಡಬೇಕು. ನಂತರ ಗಣಪನ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಮಾಡಬೇಕು. ಗಣಪ ತನ್ನ ಎಲ್ಲ ಆಂಗಾಂಗ, ಪರಿವಾರ, ಆಯುಧ ಮತ್ತು ಶಕ್ತಿಸಹಿತವಾಗಿ ಬಂದು ಮೂರ್ತಿಯಲ್ಲಿ ಪ್ರತಿಷ್ಟಾಪಿತವಾಗಬೇಕು ಮತ್ತು ನಮ್ಮ ಪೂಜೆಯನ್ನು ಸ್ವೀಕರಿಸಬೇಕು ಎಂದು ಗಣಪನಲ್ಲಿ ಸಂಪೂರ್ಣ ಶರಣಾಗತಭಾವದಿಂದ ಮಾಡುವ ಪ್ರಾರ್ಥನೆಯನ್ನೇ ಪ್ರಾಣಪ್ರತಿಪ್ಠಾಪನೆ ಎಂದು ಕರೆಯಲಾಗುತ್ತದೆ.

ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಕೈಯಲ್ಲಿ ಗಂಧಾಕ್ಷತೆ ಅಥವಾ ಹೂವುಗಳನ್ನು ತೆಗೆದುಕೊಳ್ಳಬೇಕು. ಗಣಪನ ಸಹಸ್ರ ನಾಮವನ್ನು ಹೇಳಿ ಕೊನೆಗೆ ನಮಃ ಎಂದು ಹೇಳಿ ಗಂಧಾಕ್ಷತೆ,  ಹೂವನ್ನು ಅರ್ಪಿಸಿ ನಮಸ್ಕರಿಸಬೇಕು.

ಗಣಪನಿಗೆ ಪೂಜೆ ಮಾಡುವುದಕ್ಕೂ ಮೊದಲೇ ಗಣೇಶನಿಗೆ ಇಷ್ಟವಾಗುವ ಕರಿಗಡುಬು, ಮೋದಕ, ಎಳ್ಳುಂಡೆ, ಲಾಡುಗಳ ನೈವೇದ್ಯಗಳನ್ನು ಮಡಿಯಿಂದ ತಯಾರು ಮಾಡಿಕೊಂಡಿರಬೇಕು.

ಪ್ರಾಣ ಪ್ರತಿಷ್ಠಾಪನೆ ನಂತರ ಗಣಪನಿಗೆ ಮಾಡಬೇಕಾದ ಎಲ್ಲಾ ಅಲಂಕಾರವನ್ನು ಮಾಡಿ ಹಣ್ಣು, ನೈವೇದ್ಯಗಳನ್ನು ಗಣಪನ ಮುಂದಿಟ್ಟು ಕೈ ಜೋಡಿಸಿ ನಮಸ್ಕರಿಸಬೇಕು. ಬಲಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಮತ್ತು ಸಮರ್ಪಯಾಮಿ ಎನ್ನುವಾಗ ಆ ನೀರನ್ನು ಮಹಾದೇವ ಶಿವ, ಗೌರಿ ಮತ್ತು ಸಿದ್ಧಿ ವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಮೆ ಮಾಡಬೇಕು.

ನಂತರ ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ದೀಪ ಹಚ್ಚಿ ಊದು ಬತ್ತಿಯಿಂದ ಬೆಳಗಬೇಕು ಅಥವಾ ಧೂಪವನ್ನು ತೋರಿಸಬೇಕು.


ನಂತರ 'ಕರ್ಪೂರಗೌರಂ ಕರುಣಾವತಾರಂ' ಎಂಬ ಮಂತ್ರವನ್ನು ಪಠಿಸುತ್ತಾ ಕರ್ಪೂರದ ಆರತಿ ಬೆಳಗಬೇಕು. ನಂತರ ಗಣಪನ ಮುಂದೆ ಎರಡೂ ಕೈಗಳಿಂದ ನಮಸ್ಕರಿಸಿ ಮಂತ್ರ ಪಠಿಸುತ್ತಾ ಪ್ರದಕ್ಷಿಣೆ ಹಾಕಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು.

ಕೊನೆಯಲ್ಲಿ ಹೇ ಗಣಪ ಪೂಜೆ ಮಾಡುವಾಗ ನಿನ್ನೆ ದಯೆಯಿಂದ ನನ್ನಿಂದ ಭಾರಪೂರ್ಣ ಪೂಜೆ ಸಂಪೂರ್ಣವಾಯಿತು. ಪೂಜೆ ಮಾಡುತ್ತಿರುವಾಗ ನನ್ನ ಮನಸ್ಸು ಸತತವಾಗಿ ನಿನ್ನ ಚರಣಗಳಲ್ಲಿ ಲೀನವಾಯಿತು.


ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ ಎಂದು ಹೇಳಿ ನನ್ನಿಂದ ಕಾಯ-ವಾಚಾ-ಮನಸ್ಸು ಹಾಗೂ ಬುದ್ಧಿ ಮುಂತಾದವುಗಳಿಂದ ಏನಾದರೂ ತಪ್ಪುಗಳಾಗಿದ್ದಲ್ಲಿ ನನ್ನನ್ನು ಕ್ಷಮಿಸಬೇಕು ಮತ್ತು ಪೂಜೆಯನ್ನು ಪರಿಪೂರ್ಣವಾಗಿಸಿಕೊಳ್ಳಬೇಕು ಎಂದು ಬೇಡಿಕೊಳ್ಳಬೇಕು.

ಗಣಪತಿ ಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ
ಹಬ್ಬ ಆದ ಮೇಲೆ ಒಳ್ಳೆಯ ದಿನ ಹಾಗೂ ಸಮಯ ನೋಡಿ ಗಣಪನ ಮೂರ್ತಿಯನ್ನು ವಿಸರ್ಜನೆ ಮಾಡಬೇಕು. ಗಣೇಶ ಚತುರ್ಥಿ ಮುಗಿಯಿತು ಹಬ್ಬವಾಯಿತು....ಪೂಜೆ ಮಾಡಿ ಆಯಿತೆಂದು ಹೇಗೆಂದರೆ ಹಾಗೆ ಗಣಪನನ್ನು ತೆಗೆದು ಎಲ್ಲೆಂದರಲ್ಲಿ ಬಿಟ್ಟುಬರುವುದರಲ್ಲ. ಪ್ರಾಣಪ್ರತಿಷ್ಠಾಪನೆ ಹಾಗೂ ಕಳಶವನ್ನು ಹೇಗೆ ಶ್ರದ್ಧಾ ಭಕ್ತಿ, ನೀತಿ, ನಿಯಮಗಳಿಂದ ಪೂಜೆ ಮಾಡುತ್ತೇವೆಯೋ ಹಾಗೆಯೇ ಗಣಪನ ವಿಸರ್ಜನೆಯನ್ನೂ ಕ್ರಮಬದ್ಧವಾಗಿ, ಪದ್ಧತಿಯಿಂದ ಮಾಡಬೇಕು. ಸಾಮಾನ್ಯವಾಗಿ ಗಣಪನನ್ನು ಒಂದು, ಮೂರು ಹಾಗೂ ಐದು ದಿನಗಳ ಕಾಲವಿಟ್ಟು ಪೂಜಿಸುವುದುಂಟು. ಪೂಜೆಯಾದ ನಂತರ ಗಣಪನನ್ನು ಸಾಧ್ಯವಾದಷ್ಟು ಹರಿಯುವ ನೀರಿನಲ್ಲಿ ವಿಸರ್ಜಿಸಿದರೆ ಒಳ್ಳೆಯದು.


ಇತ್ತೀಚಿನ ದಿನಗಳಲ್ಲಿ ಗಣಪನ ಮೂರ್ತಿಯನ್ನು ರಾಸಾಯನಿಕವಾಗಿ ತಯಾರು ಮಾಡಲಾಗುತ್ತಿದೆ. ಇಂತಹ ಗಣಪನ ಮೂರ್ತಿಗಳು ಸಾಕಷ್ಟು ಸಮಸ್ಯೆಗಳನ್ನುಂಟು ಮಾಡುತ್ತವೆ. ಹೀಗಾಗಿಯೇ ಗಣಪನ ವಿಸರ್ಜನೆ ಸಮಯದಲ್ಲಿ ತೊಂದರೆಗಳೆದುರಾಗುವುದು. ಸಾಧ್ಯವಾದಷ್ಟು ಜೇಡಿ ಮಣ್ಣಿನಿಂದ ತಯಾರಾದ ಪರಿಸರ ಸ್ನೇಹಿ ಗಣಪನನ್ನು ಕೂರಿಸಲು ಪ್ರಯತ್ನಿಸಿ.

-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com