ಅಂಡಾಶಯ ಕಗ್ಗಂಟು

ಅಂಡಾಶಯ ಗಂಟುಗಳು ಮಹಿಳೆಯರನ್ನು ಹತ್ತಿಕ್ಕುವ ಹತ್ತಾರು...
ಅಂಡಾಶಯ ಗಂಟು
ಅಂಡಾಶಯ ಗಂಟು

ಅಂಡಾಶಯ ಗಂಟುಗಳು ಮಹಿಳೆಯರನ್ನು ಹತ್ತಿಕ್ಕುವ ಹತ್ತಾರು ಕಾಯಿಲೆಗಳ ಹಿರಿಯಣ್ಣ. ಆರಂಭದಲ್ಲಿ ಕಾಣಿಸಿಕೊಳ್ಳದೇ, ಜೀವಕ್ಕೆ ಅಪಾಯ ತಂದೊಡ್ಡ ಬಲ್ಲದು. ತಪಾಸಣೆಯೇ ಇದಕ್ಕೆ ಪರಿಹಾರ. ಮುಖ್ಯವಾಗಿ ಮಹಿಳೆಯರು ಈ ಗಂಟಿನ ಬಗ್ಗೆ ಹೆಚ್ಚೆಚ್ಚು ಅರಿತುಕೊಂಡಿರಬೇಕು.

ಸಾಮಾನ್ಯವಾಗಿ ಮುಟ್ಟಿನ ದೋಷಗಳು, ಬಿಳಿ ಸೆರಗು, ಹೊಟ್ಟೆನೋವು ಮುಂತಾದ ಸಮಸ್ಯೆಗಳಿಗೆ ಹೋಲಿಸಿದಲ್ಲಿ ಅಂಡಾಶಯ ಗಂಟು ಹೆಚ್ಚು ಗಂಭೀರವಾದ ಸಮಸ್ಯೆ. ಗ್ರಾಮೀಣ ಹಾಗೂ ಸಾಂಪ್ರಾದಾಯಿಕ ಕುಟುಂಬದ ಮಹಿಳೆಯರನ್ನು ಹೆಚ್ಚಾಗಿ ಕಾಡುವ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದೇ ಹೆಚ್ಚು. ಆರಂಭದಲ್ಲಿ ಇದರ ಲಕ್ಷಣ ಅರಿವಿಗೆ ಬರುವುದಿಲ್ಲ. ಏನೋ ವೈಪರೀತ್ಯ ಕಂಡಾಗಲೂ ನಿರ್ಲಕ್ಷಿಸುತ್ತಾರೆ. ಅದಕ್ಕೆ ಸಮಸ್ಯೆ ಮತ್ತಷ್ಟೂ ಉಲ್ಬಣಗೊಳ್ಳುತ್ತದೆ.

ಇನ್ನೇನು ಯಾತನೆ ಅನುಭವಿಸೋದು ಅಸಾಧ್ಯ ಎಂದಾಗ ವೈದ್ಯರನ್ನು ಭೇಟಿ ಮಾಡುತ್ತಾರೆ. ಅಷ್ಟೋತ್ತಿಗೆ ಕಾಲ ಮಿಂಚಿರುತ್ತದೆ. ಅಂಡಾಷಯ ಗಂಟುಗಳಲ್ಲಿ ಅಮಾರಕ ಗಂಟುಗಳು ಹಾಗೂ ಮಾರಕ ಗಂಟುಗಳೆಂಬ ಎರಡು ಬಗೆಗಳಿವೆ. ಈ ಎರಡೂ ಗಂಟುಗಳೂ ಮಹಿಳೆಯ ಸಹಜ ಆರೋಗ್ಯದಲ್ಲಿ ವೈಪರೀತ್ಯ ಸೃಷ್ಟಿಸುತ್ತದೆ.

ಅಮಾರಕ ಗಂಟುಗಳು ವ್ಯಾಸದಿಂದ 5 ಸೆಂ.ಮೀ. ನಷ್ಟು ದೊಡ್ಡದಿರುತ್ತವೆ. ಈ ಗಂಟುಗಳು ಸಾಮಾನ್ಯವಾಗಿ 20-40ವಯಸ್ಸಿನ ಸ್ತ್ರೀಯರಲ್ಲಿ ಕಾಣಿಸಿಕೊಳ್ಳುತ್ತವೆ. ಕಡಿಮೆ ವ್ಯಾಪ್ತಿಯುಳ್ಳ ಅಂಡಾಶಯ ಗಂಟುಗಳೂ ತಾನೇ ಕರಗುವುದಿದೆ. ಇದಕ್ಕೆ ಯಾವ ಶಸ್ತ್ರ ಚಿಕಿತ್ಸೆಯೂ ಬೇಡ.

ದೊಡ್ಡದಾದ ಗಂಟುಗಳನ್ನು ಶಸ್ತ್ರ ಚಿಕಿತ್ಸೆ ಮಾಡಿಯೇ ತೆಗೆಯಬೇಕು. ಇಲ್ಲದಿದ್ದರೆ ಉಲ್ಭಣವಾಗುತ್ತೆ. ಇದರಿಂದ ಗಂಟುಗಳಲ್ಲಿ ರಕ್ತಸ್ರಾವ, ಗಂಟು ತಿರುಚಿಕೊಂಡು ತೀವ್ರ ನೋವು ಕಾಡುತ್ತೆ ಅಥವಾ ಕ್ಯಾನ್ಸರ್ ಗಂಟಾಗಿಯೂ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚು. ಹೀಗಾದಾಗ ಜೀವಕ್ಕೂ ಅಪಾಯ. ಇದಕ್ಕೆ ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮೂಲಕ ಅಂಡಾಶಯದ ಅಮಾರಕ ಗಂಟುಗಳನ್ನೂ ಕತ್ತರಿಸಿ ಹೊರತೆಗೆಯಬಹುದು.

ರೋಗಕ್ಕೆ ಮಾರಕ

ಅಂಡಾಶಯದ ಕ್ಯಾನ್ಸರ್ ಗಡ್ಡೆಯ ಇನ್ನೊಂದು ಬಗೆ ಈ ಮಾರಕ ಗಂಟುಗಳು. ಈ ಕ್ಯಾನ್ಸರ್ ಗಡ್ಡೆ 1 ಲಕ್ಷದಲ್ಲಿ 5 ರಿಂದ 15 ಸ್ತ್ರೀಯರಲ್ಲಿ ಕಾಣಿಸುತ್ತವೆ. ಬಂಜೆತನ ಅಥವಾ ಕಡಿಮೆ ಮಕ್ಕಳಿರುವವರಲ್ಲಿ ಇದು ಕಾಣಿಸುತ್ತದೆ.

ಅಂಡಾಶಯದ ಕ್ಯಾನ್ಸರ್ ಗಂಟಗಳು ತುಂಬಾ ಅಪಾಯಕಾರಿ. ಅವುಗಳನ್ನು ಆರಂಭದಲ್ಲೇ ಕಂಡುಹಿಡಿಯುವುದೂ ಕಷ್ಟ. ಇವು 40 ವರ್ಷ ವಯಸ್ಸಿನ ನಂತರ ಹಾಗೂ ಕೆಲವು ಪ್ರಕರಣಗಳಲ್ಲಿ 30 ವರ್ಷಕ್ಕೂ ಮೊದಲು ಕಾಣಿಸಿಕೊಳ್ಳುತ್ತದೆ. ಹಾಲು ಹಾಗೂ ಹಾಲಿನ ಪದಾರ್ಥಗಳ ಹೆಚ್ಚನ ಬಳಕೆ ಹಾಗೂ ಕಲ್ನಾರು ಅಂಡಾಶಯದ ಕ್ಯಾನ್ಸರ್ ಬೆಳವಣಿಗೆಗೆ ಎಡೆಮಾಡಿಕೊಡಬಹುದು. ಈ ಸಮಸ್ಯೆ ಇರುವ ಸ್ತ್ರೀಯರು ಹೊಟ್ಟೆನೋವು, ಅಜೀರ್ಣ ಋತುಬಂಧದ ನಂತರದ ರಕ್ತಸ್ರಾವ, ತೂಕ ಕಡಿಮೆಯಾಗುವುದು, ಕಾಲುಗಳಲ್ಲಿ ಬಾವು ಮುಂತಾದ ತೊಂದರೆಗಳನ್ನು ಅನುಭವಿಸುತ್ತಾರೆ.

ಚಿಕಿತ್ಸೆಯ ದಾರಿ

ರೋಗಿಯಿಂದ ಮೊದಲು ಸಮಗ್ರ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ರೋಗಿಯ ಸಂಪೂರ್ಣ ತಪಾಸಣೆಯಿಂದ ಅಂಡಾಶಯದ ಕ್ಯಾನ್ಸರ್ ಬಗ್ಗೆ ಸುಳಿವು ದೊರೆಯುತ್ತದೆ. ಅಲ್ಲದೆ ಕ್ಷ-ಕಿರಣ, ತರಂಗಾತೀತ ಧ್ವನಿ ಪರೀಕ್ಷೆ ರೋಗ ಪತ್ತೆ ಹಚ್ಚಲು ಹಾಗೂ ನಿವಾರಿಸಲು ಸಹಕಾರಿ.

ಅಂಡಾಶಯದ ಕ್ಯಾನ್ಸರ್ ಎಂದು ಖಚಿತವಾದಾಗ, ವೈದ್ಯರು ಕ್ಯಾನ್ಸರ್ ಯಾವ ಹಂತದಲ್ಲಿದೆ ಮತ್ತು ಎಲ್ಲಿಯವರೆಗೆ ಹಬ್ಬಿದೆ ಎಂಬುದನ್ನು ಮೊದಲು ಪತ್ತೆ ಹಚ್ಚುತ್ತಾರೆ. ಅಪಾಯಕಾರಿ ಹಂತ ತಲುಪಿದಲ್ಲಿ ಗರ್ಭಕೋಶ, ಗರ್ಭನಾಳಗಳು ಹಾಗೂ ಅಂಡಾಶಯವನ್ನೂ ಸಂಪೂರ್ಣವಾಗಿ ತೆಗೆದು ಹಾಕಬೇಕಾಗುತ್ತದೆ. ಅಲ್ಲದೆ, ಈ ಸಮಸ್ಯೆಗೆ ಈಗ ಉದರದರ್ಶಕ ಚಿಕಿತ್ಸೆಯೂ ಲಭ್ಯ.

ಶಸ್ತ್ರಕ್ರಿಯೆಯ ನಂತರ ರೋಗಿಗೆ ಕ್ಯಾನ್ಸರ್ ವಿರೋಧಿ ಔಷಧಿಗಳನ್ನು ಜೊತೆಯಾಗಿ ತಿಂಗಳಿಗೊಮ್ಮೆ ಕೊಡಬಹುದು. ಅಂಡಾಶಯದಲ್ಲಿ ಗಂತಿಯಂಥ ಗಂಟುಗಳಿದ್ದಾಗೆ ವಿಕಿರಣ ಚಿಕಿತ್ಸೆಯನ್ನೂ ಕೊಡಬಹುದು. ಸುಮಾರು ಆರರಿಂದ ಒಂಬತ್ತು ತಿಂಗಳವರೆಗೆ ಈ ಎಲ್ಲ ಔಷಧೋಪಚಾರಗಳನ್ನು ನೀಡಿ ನಂತರ ಉದರ ದರ್ಶಕದ ಮೂಲಕ ಮತ್ತೊಮ್ಮೆ ಒಳ ಆವರಣವನ್ನು ಪರಿಶೀಲಿಸಿ ರೋಗದ ಹಂತವನ್ನು ನಿರ್ಣಯಿಸಲಾಗುತ್ತದೆ. ಅಗತ್ಯವೆನಿಸಿದರೆ ಔಷಧವನ್ನು ಬದಲಾಯಿಸಬೇಕು ಅಥವಾ ಮುಂದುವರಿಸಬೇಕು. ಹೆಚ್ಚನ ಮಾಹಿತಿಗಾಗಿ ಸಂಪರ್ಕಿಸಿ: ಡಾ.ರಮೇಶ್ ಆಸ್ಪತ್ರೆ, ರಾಜಾಜಿನಗರ, ಬೆಂಗಳೂರು, ದೂರವಾಣಿ ಸಂಖ್ಯೆ: 080-23151873.

- ಡಾ.ಬಿ. ರಮೇಶ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com